ಕುಷ್ಟಗಿ | ತಾಲೂಕಿನಾದ್ಯಂತ ವಿಶ್ವ ಪರಿಸರ ದಿನ ಆಚರಣೆ

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕುಷ್ಟಗಿ : ಜೂನ್ 05 ಬುಧವಾರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಸಸಿ ನೆಡುವುದರ ಮುಖಾಂತರ ಪರಿಸರ ದಿನ ಆಚರಿಸಲಾಯಿತು.

ವಿವಿಧ ಸರ್ಕಾರಿ ಕಚೇರಿ, ಗ್ರಾಮ ಪಂಚಾಯಿತಿ ಕಚೇರಿ, ಶಾಲಾ-ಕಾಲೇಜುಗಳು ಸೇರಿದಂತೆ ಸಂಘ-ಸಂಸ್ಥೆಗಳು ಹಾಗೂ ವಿವಿಧೆಡೆ ಹಲವು ಗಣ್ಯರು ಸಸಿ ನೆಡುವುದರ ಮುಖಾಂತರ ಪರಿಸರ ಜಾಗೃತಿ ಮೂಡಿಸಿದರು.

ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಅರಣ್ಯ ಇಲಾಖೆ, ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ತಾಲೂಕು ವಕೀಲರ ಸಂಘ ಇವರುಗಳ ಆಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಎಂ. ಎಲ್. ಪೂಜೇರಿ ಅವರು ಸಸಿ ನೆಟ್ಟು ನೀರುಣಿಸುವ ಮೂಲಕ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಎಂದು ಕಂಡರಿಯದ ತಾಪಮಾನ ಹೀಟ್ ವೇಯನ್ನು ಪ್ರಸಕ್ತ ವರ್ಷ ಅನುಭವಿಸಿದ್ದೇವೆ. ಮನುಷ್ಯನ ಆರೋಗ್ಯ ಪರಿಸರದಿಂದ ಮಾತ್ರ ಸಾಧ್ಯ. ಹಾಗಾಗಿ ಪ್ರತಿಯೊಬ್ಬರೂ ಪರಿಸರ ಅರಿವು ಹೊಂದಬೇಕು ಎಂದರು.

ಪ್ರಾಂಶುಪಾಲ ಡಾ.ಎಸ್.ವಿ. ಡಾಣಿ ಅವರು ಮಾತನಾಡಿ, ಜೂನ್ 05 ಪರಿಸರ ದಿನದಂದು ಮಾತ್ರ ಸಸಿ ನೆಟ್ಟು ದಿನಾಚರಣೆ ಆಚರಿಸಿದರೆ ಸಾಲದು. ವರ್ಷಪೂರ್ತಿ ಸಸಿಗಳನ್ನು ನೆಟ್ಟು ಪೋಷಿಸಿಬೇಕು. ಗಿಡ, ಮರಗಳನ್ನು ಉಳಿಸಿ ಬೆಳೆಸಿದಾಗ ಮಾತ್ರ ಮುಂದಿನ ದಿನಗಳಲ್ಲಿ ಬಿಸಿಲಿನ ತಾಪ ಕಡಿಮೆಯಾಗಲು ಸಾಧ್ಯ ಎಂದು ಹೇಳಿದರು.
ಈ ವೇಳೆ ಸಾಮಾಜಿಕ ಅರಣ್ಯಾಧಿಕಾರಿ ರಿಯಾಜ್, ಪ್ರಾದೇಶಿಕ ಅರಣ್ಯಾಧಿಕಾರಿ ಸತೀಶ್ ಲುಕ್ಕ್, ಅರಣ್ಯ ರಕ್ಷಕರಾದ ಶಿವಶಂಕರ್, ಮಲ್ಲಿಕಾರ್ಜುನ್, ವಕೀಲರ ಸಂಘದ ಜಂಟಿ ಕಾರ್ಯದರ್ಶಿ ಮೈನುದ್ದೀನ್ ಸೇರಿದಂತೆ ಕಾಲೇಜು ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿ/ ವಿದ್ಯಾರ್ಥಿನಿಯರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ವರ್ಗ ಹಾಜರಿದ್ದರು.

ತಾಲೂಕಿನ ಮದಲಗಟ್ಟಿ ಗ್ರಾಮದ ಸಮೀಪದ ಪ್ರಗತಿಪರ ರೈತ ದೇವೇಂದ್ರಪ್ಪ ಬಳೂಟಗಿ ಅವರ ತೋಟದಲ್ಲಿ ವಿಧಾನಸಭಾ ವಿರೋಧ ಪಕ್ಷದ ಮುಖ್ಯಸಚೇತಕ ಹಾಗೂ ಶಾಸಕ ದೊಡ್ಡನಗೌಡ ಎಚ್. ಪಾಟೀಲ್ ಅವರು ತೆಂಗಿನ ಸಸಿ ನಾಟಿ ಮಾಡುವ ಮುಖಾಂತರ ವಿಶ್ವ ಪರಿಸರ ದಿನ ಆಚರಿಸಿದರು.

ಈ ಸಂದರ್ಭದಲ್ಲಿ ಪರಿಸರ ಪ್ರೇಮಿ ನಾಗಪ್ಪ ಹೊಸವಕ್ಕಲ್, ಪ್ರಗತಿಪರ ರೈತ ದೇವೇಂದ್ರಪ್ಪ ಬಳೂಟಗಿ ಅವರನ್ನು ಗೌರವಿಸಲಾಯಿತು. ದಿನಾಚರಣೆ ಪ್ರಯುಕ್ತ ಪ್ರೀತಿಯ ವನಭೋಜನ ಆಯೋಜಿಸಲಾಗಿತ್ತು. ಈ ವೇಳೆ ರೈತರು ಮತ್ತು ಅನೇಕ ಘಣ್ಯರು ಪಾಲ್ಗೊಂಡಿದ್ದರು.

ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಪಟ್ಟಣದ ಅಗ್ನಿಶಾಮಕ ಠಾಣೆಯ ಆವರಣದಲ್ಲಿ ತೆಂಗಿನ ಸಸಿ ಮತ್ತು ಮಾವಿನ ಸಸಿಗಳು ಸೇರಿದಂತೆ ಪಕ್ಷಿಗಳಿಗೆ ಆಸರೆಯಾಗುವ ತರಹೇವಾರಿ ಫಲ, ಪುಷ್ಪಗಳ ಸಸಿಗಳನ್ನು ನೆಟ್ಟು ನೀರುಣಿಸಲಾಯಿತು. ಈ ವೇಳೆ ಠಾಣಾಧಿಕಾರಿ ರಾಜು ನರಸಪ್ಪ ಸೇರಿದಂತೆ ಫಾಯರ್ ಮ್ಯಾನಗಳು ಇದ್ದರು.

ಅದೇರೀತಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಪಟ್ಟಣದ ಶ್ರೀ ಗವಿಸಿದ್ದೇಶ್ವರ ಪ್ರೌಢ ಶಾಲೆಯಲ್ಲಿ ಗುರುಕುಲ ಲಾನ್ಸ್ ಅಕಾಡೆಮಿ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಕ್ವಿಜ್ ಏರ್ಪಡಿಸಲಾಗಿತ್ತು. ನಂತರ ಶಾಲಾ ಆವರಣದಲ್ಲಿ ಸಸಿಗಳನ್ನು ನಾಟಿ ಮಾಡಿ ಪರಿಸರ ಜಾಗೃತಿ ಮೂಡಿಸಲಾಯಿತು. ಈ ವೇಳೆ ಶಾಲಾ ಆಡಳಿತ ಮಂಡಳಿ ಹಾಗೂ ಕಸಾಪ ಅಧ್ಯಕ್ಷ ವೀರೇಶ ಬಂಗಾರಶೆಟ್ಟರ್, ಮುಖ್ಯಶಿಕ್ಷಕ ಕೆ.ಬಿ. ಸ್ಥಾವರಮಠ, ಮುಖಂಡರಾದ ಶಿವಕುಮಾರ ಗಂಧದಮಠ, ವಿಜಯ ಕಟ್ಟಿಮನಿ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.

ವಿಶ್ವ ಪರಿಸರ ದಿನದ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ತಾಲೂಕಿನ ದೋಟಿಹಾಳ ವಲಯದ ಕೇಸುರು ಗ್ರಾಮದ ಸರ್ಕಾರಿ ಕಿರಿಯ ಪ್ರಾರ್ಥಮಿಕ ಶಾಲಾ ಆವರಣದಲ್ಲಿ ಸಸಿಗಳನ್ನು ನೆಡುವ ಮುಖಾಂತರ ಪರಿಸರ ಜಾಗೃತಿ ಮಾಹಿತಿ ಕಾರ್ಯಕ್ರಮಕ್ಕೆ ತಾಲೂಕು ಯೋಜನಾಧಿಕಾರಿ ಶೇಖರ್ ನಾಯ್ಕ್ ಅವರು ಚಾಲನೆ ನೀಡಿದರು. ಸಂಪನ್ಮೂಲ ವ್ಯಕ್ತಿ ಪ್ರಭಾವತಿ ಮಾಳಗಿ ಪರಿಸರ ಸಂರಕ್ಷಣೆ ಬಗ್ಗೆ ಅರಿವು ಮೂಡಿಸಿದರು.
ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಬಸವರಾಜ ಕಡಿವಾಳ, ಗ್ರಾ.ಪಂ ಸದಸ್ಯೆ ಈರಮ್ಮ ತೆಂಗುಟಿ, ಶ್ರೀದೇವಿ ಮಳಿಮಠ, ಮುಖ್ಯೋಪಾಧ್ಯಾಯ ಅಮರಗುಂಡಾಯ್ಯ ಹಿರೇಮಠ, ಕೃಷಿ ಮೇಲ್ವಿಚಾರಕ ರವಿಚಂದ್ರ ಉಪಸ್ಥಿತರಿದ್ದರು.