ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕುಷ್ಟಗಿ : ವಿಧಾನಸಭಾ ವಿರೋಧ ಪಕ್ಷದ ಮುಖ್ಯ ಸಚೇತಕ, ಶಾಸಕ ದೊಡ್ಡನಗೌಡ ಪಾಟೀಲ್ ಅವರು ಲೋಕಸಭೆ ಚುನಾವಣೆಯಲ್ಲಿ ಸರ್ವ ಜನಾಂಗದ ನಾಯಕರಾದ ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪೂರ ಲಿಂಗಾಯತರನ್ನು ತುಳಿಯುತ್ತಿದ್ದಾರೆ ಎಂಬ ಹೇಳಿಕೆ ನೀಡಿದ್ದು ಹಾಸ್ಯಾಸ್ಪದವಾಗಿದೆ ಎಂದು ಕುಷ್ಟಗಿ ಬ್ಲಾಕ್ ಕಾಂಗ್ರೆಸ್ ಸಮಿತಿ ಮುಖಂಡರು ಹೇಳಿದರು.
ಈ ಕುರಿತು ಪಟ್ಪಣದ ಹಳೇ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿದ ಅವರು, 2019ರ ಲೋಕಸಭಾ ಚುನಾವಣೆಯಲ್ಲಿ ಬಯ್ಯಾಪೂರ ಸಂಗಣ್ಣ ಕರಡಿ ಪರ ಚುನಾವಣೆ ಮಾಡಿದ್ದರು ಎಂದು ಅಪಾದನೆ ಮಾಡಿದ್ದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಲಿಂಗಾಯತ ನಾಯಕರು ಬೆಳೆದರೆ ತಮಗೆ ಉಳಿಗಾಲವಿಲ್ಲ ಎಂದು ಬಯ್ಯಾಪೂರ ಮತ್ತು ಅವರ ಪುತ್ರ ದೊಡ್ಡಬಸನಗೌಡ ಬಯ್ಯಾಪೂರ ರಾಜಕೀಯವಾಗಿ ಲಿಂಗಾಯತ ನಾಯಕರನ್ನು ತುಳಿಯುತ್ತಿದ್ದಾರೆ ಎಂದು ಮಾಡಿರುವ ಮತ್ತೊಂದು ಸುಳ್ಳು ಆಪಾದನೆ ಖಂಡನೀಯ. ಮನಬಂದಂತೆ ಹೇಳಿಕೆ ನೀಡುವ ಶಾಸಕ ದೊಡ್ಡನಗೌಡರಿಗೆ ಮತಿಭ್ರಮಣೆಯಾಗಿದೆ. ಲೋಕ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ಬಿಜೆಪಿ ಅಭ್ಯರ್ಥಿ ಸೋಲಿಸುವ ಮೂಲಕ ತಕ್ಕ ಪಾಠ ಕಲಿಸಿದ್ದಾರೆ. ಟೀಕೆ ಮಾಡುವಾಗ ಎಚ್ಚರದಿಂದ ಮಾಡಬೇಕು ಎಂದು ಸಲಹೆ ನೀಡಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ದೊಡ್ಡನಗೌಡ ಪಾಟೀಲರರಿಗೆ ಲೀಡ್ ಕೊಟ್ಟ ಎಲ್ಲಾ ಮತಗಟ್ಟೆಗಳಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್’ಗೆ ಲೀಡ್ ಬಂದಿವೆ. ವಿಶೇಷವಾಗಿ ಯಾವಾಗಲೂ ಬಿಜೆಪಿಗೆ ಲೀಡ್ ಕೊಡುತ್ತಿದ್ದ ಕೊರಡಕೇರಾ ಜಿ.ಪಂ. ಕ್ಷೇತ್ರ, ಈ ಬಾರಿ ಕಾಂಗ್ರೆಸ್’ಗೆ 5 ಸಾವಿರ ಮತಗಳ ಲೀಡ್ ನೀಡಿದೆ. ಅಂದರೆ ಅವರು ಯಾರು ಯಾರನ್ನು ತುಳಿದಿದ್ದಾರೆ ಎಂಬುದು ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದ ಕಾಂಗ್ರೆಸ್ ಮುಖಂಡರು, ನಮ್ಮ ಅಮರೇಗೌಡ ಪಾಟೀಲ್ ಬಯ್ಯಾಪೂರ ನಾಯಕತ್ವದಲ್ಲಿ ಲೋಕಸಭೆ ಮತ್ತು ಈಶಾನ್ಯ ಪಧವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆದ್ದಿದೆ. ಹೀಗಾಗಿ ಬಯ್ಯಾಪೂರ ಅವರಿಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನ ನೀಡಿದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ ಅವರಿಗೆ ಹಾಗೂ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ ಕಾಂಗ್ರೆಸ್ ಕಾರ್ಯಕರ್ತರಿಗೆ ಮತ್ತು ಮತದಾರರಿಗೆ ಅಭಿನಂದಿಸುವುದಾಗಿ ತಿಳಿಸಿದರು.
ಈ ವೇಳೆ ಶಿವಶಂಕರಗೌಡ ಪಾಟೀಲ್ ಕಡೂರು, ಶೇಖರಗೌಡ ಪಾಟೀಲ್, ಶಂಕರಗೌಡ ಪಾಟೀಲ್ ವಕೀಲ್, ಅಮರೇಗೌಡ ಪಾಟೀಲ್ ವಕೀಲ್, ತಿಪ್ಪಣ್ಣ ವಕೀಲ್, ಪುರಸಭೆ ಸದಸ್ಯ ವಸಂತ ಮೇಲಿನಮನಿ, ಹುಸೇನಸಾಬ ನದಾಫ್, ರಾಜು ವಾಲಿಕಾರ, ಲಾಡ್ಲೇಮಷಾಕ ದೋಟಿಹಾಳ ಸೇರಿದಂತೆ ಇತರರಿದ್ದರು.
ಪ್ರತಿಪಕ್ಷದ ಮುಖ್ಯ ಸಚೇತಕರಾದ ಶಾಸಕ ದೊಡ್ಡನಗೌಡ ಪಾಟೀಲ್ ತಮ್ಮ ಪಕ್ಷದ ಲೋಕಸಭಾ ಚುನಾವಣಾ ಅಭ್ಯರ್ಥಿ ಸೋಲಿನ ಆಪಾದನೆ ತಮ್ಮ ಮೇಲೆ ಬಾರದಿರಲು ಸರ್ವ ಜನಾಂಗದ ನಾಯಕರಾದ ನಮ್ಮ ಅಮರೇಗೌಡ ಬಯ್ಯಾಪೂರ ವಿರುದ್ಧ ಸುಳ್ಳು ಆಪಾದನೆ ಮಾಡಿದ್ದಾರೆ.
– ಚಂದ್ರಶೇಖರ ನಾಲತವಾಡ
ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ, ಕುಷ್ಟಗಿ.