ಕುಷ್ಟಗಿ | ಹದಗೆಟ್ಟ ವಿದ್ಯಾನಗರ ರಸ್ತೆ; ಸಂಚಾರಕ್ಕೆ ಸರ್ಕಸ್

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕುಷ್ಟಗಿ: ಇಲ್ಲಿನ ಪುರಸಭೆ 6ನೇ ವಾರ್ಡ್ ವ್ಯಾಪ್ತಿಯ ವಿದ್ಯಾನಗರದ 1ನೇ ಅಡ್ಡ ರಸ್ತೆ ಸಂಪೂರ್ಣ ಹಾಳಾಗಿದ್ದು, ಅನೇಕ ಗುಂಡಿಗಳ ನಡುವೆ ಜನ ಸರ್ಕಸ್ ಮಾಡಿ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇಲ್ಲಿಯ ಗಜೇಂದ್ರಗಡ ಮುಖ್ಯ ರಸ್ತೆಯಿಂದ ವಿದ್ಯಾನಗರ ಮುಖಾಂತರ ಕೇಂದ್ರೀಯ ಬಸ್ ನಿಲ್ದಾಣ ಸೇರಿದಂತೆ ಶಾಲಾ-ಕಾಲೇಜುಗಳಿಗೆ, ಪ್ರಮುಖ ನಗರಗಳಿಗೆ ಸಂಪರ್ಕಿಸುವ ಮುಖ್ಯರಸ್ತೆ ಇದಾಗಿದೆ. ಗಜೇಂದ್ರಗಡ ರಸ್ತೆಯ ಟಿಎಪಿಎಂಎಸ್ ದೊಡ್ಡ ಸೊಸಾಯಿಟಿ, ಮಾಜಿ ಶಾಸಕ ಕೆ.ಶರಣಪ್ಪ ಅವರ ನಿವಾಸ ಮೂಲಕ ತೆರಳುವ ಈ ರಸ್ತೆಯುದ್ದಕ್ಕೂ ದೊಡ್ಡ ಗುಂಡಿಗಳು ಬಾಯ್ತೆರೆದುಕೊಂಡಿವೆ.

ಈ ಮಾರ್ಗದಲ್ಲಿ ದಿನನಿತ್ಯ ನೂರಾರು ವಾಹನಗಳು ಸಂಚರಿಸುತ್ತಿದ್ದು, ಗುಂಡಿಗಳ ನಡುವೆ ಚಲಿಸುವಾಗ ನಿಯಂತ್ರಣ ತಪ್ಪಿ ಹಲವು ಬಾರಿ ಅನಾಹುತ ಸಂಭವಿಸಿ ಅನೇಕರು ತೊಂದರೆ ಎದುರಿಸಿ ಆಸ್ಪತ್ರೆಗೆ ಸೇರಿದ್ದುಂಟು. ವಿವಿಧ ವಾಹನಗಳ ನಿತ್ಯ ಓಡಾಟದಿಂದ ಸಂಚರಿಸುವ ವಿದ್ಯಾರ್ಥಿಗಳು, ವೃದ್ದರು, ಮಹಿಳೆಯರ ಮೈಮೇಲೆ ಗುಂಡಿಗಳಲ್ಲಿನ ಕೊಳಚೆ ನೀರು ಸಿಡಿದು ಯಾತನೆ ಅನುಭವಿಸುತ್ತಿದ್ದಾರೆ.

ಈ ಕುರಿತು ವಾರ್ಡಿನ ಪುರಸಭೆ ಸದಸ್ಯರ ಗಮನಕ್ಕೆ ತಂದಾಗ ಕಳೆದ ವರ್ಷ ಮಳೆಗಾಲ ಮುಗಿದ ಬಳಿಕ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳುವುದಾಗಿ ತಿಳಿಸಿದ್ದರು. ಆದರೆ, ಮರಳಿ ಮಳೆಗಾಲ ಬಂದರೂ ರಸ್ತೆ ಮಾತ್ರ ಸುಧಾರಣೆ ಕಂಡಿಲ್ಲ. ವಾರ್ಡ್ ಸದಸ್ಯರು ಹಾಗೂ ಪುರಸಭೆ ಅಧಿಕಾರಿಗಳು ಎಚ್ಚೆತ್ತು ಸಾರ್ವಜನಿಕರ ಹಿತಾಸಕ್ತಿಗೆ ಧಕ್ಕೆಯಾಗದಂತೆ ರಸ್ತೆಯ ಗುಂಡಿಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ಇಲ್ಲದಿದ್ದರೆ ಪ್ರತಿಭಟನೆ ಅನಿವಾರ್ಯವಾಗಲಿದೆ ಎಂದು ವಿದ್ಯಾನಗರದ ನಿವಾಸಿಗಳು ಹಾಗೂ ರಸ್ತೆಗೆ ಹೊಂದಿಕೊಂಡಿರುವ ವಾಣಿಜ್ಯ ಮಳಿಗೆಗಳ ವ್ಯಾಪಾರಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷ 15ನೇ ಹಣಕಾಸು ಯೋಜನೆಯಡಿ ಡಾಂಬರು ರಸ್ತೆ ನಿರ್ಮಿಸಲು ಗುತ್ತಿಗೆದಾರ ಡಿ.ಎಸ್.ಕಂದಕೂರು ಎಂಬುವರಿಗೆ ಟೆಂಡರ್ ಆಗಿದೆ. ಯಾರಿಗೂ ಸಬ್ ಗುತ್ತಿಗೆ ನೀಡದೇ ಗುಣಮಟ್ಟದ ಕಾಮಗಾರಿ ಮಾಡುವಂತೆ ಮಾಜಿ ಶಾಸಕ ಕೆ.ಶರಣಪ್ಪ ಅವರು ಗುತ್ತಿಗೆದಾರರಿಗೆ ಸೂಚಿಸಿದ್ದರು. ಮಳೆಗಾಲ ಕಳೆದ ಬಳಿಕ ಕಾಮಗಾರಿ ಆರಂಭಿಸುವುದಾಗಿ ತಿಳಿಸಿದ್ದ ಗುತ್ತಿಗೆದಾರು, ವರ್ಷ ಕಳೆದು ಮತ್ತೆ ಮಳೆಗಾಲ ಆರಂಭವಾದರೂ ಕಾಮಗಾರಿ ಆರಂಭಿಸುತ್ತಿಲ್ಲ. ಈ ಕುರಿತು ಪುರಸಭೆ ಮುಖ್ಯಾಧಿಕಾರಿ, ಇಂಜಿನಿಯರ್ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.

– ರಾಮಣ್ಣ ಬಿನ್ನಾಳ
  ಪುರಸಭೆ ಸದಸ್ಯ, 6ನೇ ವಾರ್ಡ್ (ವಿದ್ಯಾನಗರ)