ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕೊಪ್ಪಳ : ಭಾರಿ ಮಳೆಯಿಂದಾಗಿ ಜಿಲ್ಲೆಯ ಕುಷ್ಟಗಿ ಪಟ್ಟಣದ ಸಂದೀಪ ನಗರ ಹಾಗೂ ವಾಸವಿ ನಗರದ ಕೆಲ ಬಡಾವಣೆಗಳು ಜಲಾವೃತಗೊಂಡು ಜನ ಜೀವನ ಅಸ್ತವ್ಯಸ್ತಗೊಂಡ ಪ್ರಸಂಗ ಬುಧವಾರ ಸಂಜೆ ನಡೆಯಿತು.
ಗಜೇಂದ್ರಗಡ ರಸ್ತೆ ಸಂದೀಪ ನಗರದ ರಸ್ತೆಗಳು ಜಲಾವೃತಗೊಂಡು ಅಲ್ಲಿನ ಅನೇಕ ಆಶ್ರಯ ಮನೆಗಳಿಗೆ ಮಳೆ ನೀರು ನುಗ್ಗಿ ದವಸ ಧಾನ್ಯ ಸೇರಿದಂತೆ ಬಟ್ಟೆ ಬರೆ ಇತರೆ ಗೃಹೋಪಯೋಗಿ ಸಾಮಗ್ರಿಗಳನ್ನು ಹಾಳು ಮಾಡಿದೆ. ಒಂದೆಡೆ ವಿದ್ಯುತ್ ಅಭಾವ ಮತ್ತೊಂದೆಡೆ ಮಳೆ ನೀರು ಆವಾಂತರ ಸೃಷ್ಠಿಸಿತು. ಕೆಲ ಗಂಟೆಗಳ ಕಾಲ ಜನ ಮನೆಯಿಂದ ಆಚೆಬಂದು ಮಳೆಯಲ್ಲಿಯೇ ನೆನೆಯುವಂತಹ ಪರಿಸ್ಥಿತಿ ನಿರ್ಮಾಣವಾಯಿತು. ಇಲ್ಲಿ ಸುಮಾರು 200ಕ್ಕೂ ಹೆಚ್ಚು ಆಶ್ರಯ ಮನೆಗಳಿದ್ದು, ಕಳೆದ 20 ವರ್ಷಗಳಿಂದ ಬಡ ಕೂಲಿ ಕಾರ್ಮಿಕರು ವಾಸವಾಗಿದ್ದಾರೆ. ಮಳೆಗಾಲ ಬಂದಾಗ ಇಲ್ಲಿಯ ಜನರ ಗೋಳು ಪರಿಸ್ಥಿತಿ ಆ ದೇವರಿಗೆ ಪ್ರೀತಿ ಎನ್ನಿಸುತ್ತದೆ. 8ನೇ ವಾರ್ಡಗೆ ಒಳಪಡುವ ಈ ನಗರದಲ್ಲಿ ಚರಂಡಿ, ರಸ್ತೆ, ಸರಿಯಾದ ಬೆಳಕಿನ ಮೂಲಸೌಕರ್ಯವಿಲ್ಲದೇ ನಿವಾಸಿಗಳ ಯಾತನೆಯಾಗಿದೆ.
ಮಳೆಗಾಲ ಬಂದಾಗಲೊಮ್ಮೆ ರಾತ್ರಿ ವೇಳೆ ಮಕ್ಕಳನ್ನು ಕಟ್ಟಿಕೊಂಡು ಎಲ್ಲಿಗೆ ಹೋಗಬೇಕು ಎಂದು ತಿಳಿಯದೇ ಮನೆಗಳೊಳಗೆ ಮಳೆನೀರು ನುಗ್ಗಿದಾಗ ನರಕ ಅನುಭವಿಸುತಿದ್ದೇವೆ. ಚರಂಡಿ ಮತ್ತು ರಸ್ತೆ ನಿರ್ಮಿಸಿ ಶಾಶ್ವತ ಪರಿಹಾರ ಕಲ್ಪಿಸುವಂತೆ ಜನ ಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಅಲವತ್ತುಕೊಂಡರು ಪ್ರಯೋಜನವಾಗುತ್ತಿಲ್ಲ ಎಂದು ನಿವಾಸಿಗಳು ಮಾಧ್ಯಮ ಮುಂದೆ ಆಕ್ರೋಶ ಹೊರ ಹಾಕಿದರು.
ಘಟನಾ ವಿಷಯ ತಿಳಿದು ವಾರ್ಡ್ ಸದಸ್ಯ ಸೈಯದ್ ಖಾಜಾ ಮೈನುದ್ದಿನ್ ಮುಲ್ಲಾ ಜಲಾವೃತಗೊಂಡ ಮನೆಗಳನ್ನು ವೀಕ್ಷಿಸಿದರು. ನೀತಿಸಂಹಿತೆ ಜಾರಿಯಿರುವುದರಿಂದ ಚರಂಡಿ ನಿರ್ಮಾಣ ಮಾಡಲು ಆಗಿದ್ದಿಲ್ಲ. ಶೀಘ್ರದಲ್ಲೇ ಪುರಸಭೆಯಿಂದ 15ನೇ ಹಣಕಾಸಿನಡಿ ರಸ್ತೆ ಹಾಗೂ ಚರಂಡಿ ನಿರ್ಮಿಸಿ ಮನೆಗಳಿಗೆ ನೀರು ನುಗ್ಗದ ಹಾಗೆ ಅನುಕೂಲ ಮಾಡುತ್ತೇನೆ ಎಂದು ನಿವಾಸಿಗಳಿಗೆ ಭರವಸೆ ನೀಡಿದರು. ಮಳೆ ನೀರು ಬೇರೆಡೆ ಹರಿದು ಹೋಗಲು ತಾತ್ಕಾಲಿಕವಾಗಿ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದಾರೆ.
ಸ್ಥಳಕ್ಕೆ ದಾವಿಸಿದ ಕಂದಾಯ ನಿರೀಕ್ಷಕ ಶರಣಯ್ಯ ಹಿರೇಮಠ, ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ ಸ್ಥಳಕ್ಕೆ ಭೇಟಿ ನೀಡಿ ಜಲಾವೃತಗೊಂಡ ಏಳೆಂಟು ಮನೆಗಳ ಕುಟುಂಬಸ್ಥರನ್ನು ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಸ್ಥಳಾಂತರ ಮಾಡಿ ತಾತ್ಕಾಲಿಕ ವಸತಿ ಹಾಗೂ ರಾತ್ರಿ ಊಟದ ವ್ಯವಸ್ಥೆ ಕಲ್ಪಿಸಲಾಗಿದ್ದು, ಹಾನಿಗೊಳಗಾದ ಮನೆಗಳನ್ನು ಪರಿಶೀಲಿಸಿ ವರದಿ ಪಡೆದು ಸರ್ಕಾರದಿಂದ ಪರಿಹಾರ ಕಲ್ಪಿಸಲಾಗುತ್ತದೆ ಎಂದು ಮಾಧ್ಯಮಕ್ಕೆ ಮಾಹಿತಿ ನೀಡಿದರು.
ಅದೇರೀತಿ 7ನೇ ವಾರ್ಡ್ ವಾಸವಿ ನಗರದ ಬಡಾವಣೆಯ ಮನೆಗಳಿಗೆ ಮಳೆನೀರು ನುಗ್ಗಿ ಅವಾಂತರ ಸೃಷ್ಠಿಸಿದೆ.