ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕುಷ್ಟಗಿ : ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರಾಗಿ 10 ವರ್ಷದ ತಮ್ಮ ಆಡಳಿತ ಅವಧಿಯಲ್ಲಿ ಅಮರೇಗೌಡ ಪಾಟೀಲ್ ಬಯ್ಯಾಪೂರ ಅವರು ರಾಜಕೀಯವಾಗಿ ಎಷ್ಟು ಜನ ಲಿಂಗಾಯತರನ್ನು ಬೆಳೆಸಿದ್ದಾರೆ ಎಂಬುದರ ಲೆಕ್ಕ ನೀಡಬೇಕು ಎಂದು ಬ್ಲಾಕ್ ಕಾಂಗ್ರೆಸ್ ಸಮಿತಿ ಮುಖಂಡರಿಗೆ ಬಿಜೆಪಿಯ ವೀರಶೈವ ಲಿಂಗಾಯತ ಮುಖಂಡರು ಪ್ರಶ್ನಿಸಿದ್ದಾರೆ.
ಈ ಕುರಿತು ಪಟ್ಟಣದ ಹಳೇ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಮುಖಂಡರಿಗೆ ಬಿಜೆಪಿ ಲಿಂಗಾಯತ ಮುಖಂಡರು ತಿರುಗೇಟು ನೀಡಿದ್ದಾರೆ., ವಿಪಕ್ಷ ಮುಖ್ಯ ಸಚೇತಕ, ಶಾಸಕ ದೊಡ್ಡನಗೌಡ ಪಾಟೀಲರು ಜಾತಿ ರಾಜಕಾರಣ ಮಾಡದೇ ಶಾಸಕರಾಗಿ ತಮ್ಮ ಆಡಳಿತಾವಧಿಯಲ್ಲಿ ಇಲ್ಲಿಯವರೆಗೂ ವೀರಶೈವ ಲಿಂಗಾಯತ ಸೇರಿದಂತೆ ಎಲ್ಲಾ ಸಮುದಾಯಗಳ ನಾಯಕರುಗಳಿಗೆ ಜಿ.ಪಂ., ತಾ.ಪಂ., ಗ್ರಾ.ಪಂ. ಸೇರಿದಂತೆ ಪ.ಪಂ, ಪುರಸಭೆ ಚುನಾವಣೆಗಳಲ್ಲಿ ಅವಕಾಶ ಕಲ್ಪಿಸಿ ಸ್ಥಾನಮಾನಗಳನ್ನು ನೀಡಿ ಬೆಳೆಸುವ ಕಾರ್ಯ ಮಾಡಿದ್ದಾರೆ. ಆದರೆ, ಅಧಿಕಾರ ಕಳೆದುಕೊಂಡು ಹತಾಶೆಯಲ್ಲಿರುವ ಬಯ್ಯಾಪೂರ ಅವರಿಗೆ ಮತಿಭ್ರಮಣೆಯಾಗಿದೆ. ಆದರೆ, ದೊಡ್ಡನಗೌಡರಿಗೆ ಮತಿಭ್ರಮಣೆಯಾಗಿಲ್ಲ ಎಂದು ಪರೋಕ್ಷವಾಗಿ ಟೀಕಿಸಿದ ಬಿಜೆಪಿ ಲಿಂಗಾಯತ ಮುಖಂಡರು, ಅಮರೇಗೌಡ ಪಾಟೀಲ್ ಬಯ್ಯಾಪೂರ ಸರ್ವ ಜನಾಂಗದ ನಾಯಕ ಎನ್ನುವುದಾದರೆ 2008ರಲ್ಲಿ ಕುಷ್ಟಗಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಈ ಕ್ಷೇತ್ರದಲ್ಲಿ ಎರಡುಬಾರಿ ಶಾಸಕರಾದರು. ಸ್ಥಳೀಯ ಸಂಸ್ಥೆಗಳಲ್ಲಿ ಈವರೆಗೂ ರಾಜಕೀಯವಾಗಿ ವೀರಶೈವ ಲಿಂಗಾಯತರಿಗೆ ಯಾವ ಸ್ಥಾನಮಾನಗಳನ್ನೂ ನೀಡಿಲ್ಲ. ವೀರಶೈವ ಲಿಂಗಾಯತ ಸಮಾಜದ ಯಾವ ನಾಯಕರನ್ನು ಬೆಳೆಸಲಿಲ್ಲ. ಲಿಂಗಾಯತ ನಾಯಕರನ್ನು ಬೆಳೆಸಿದ್ದೇಯಾದರೆ ಕಾಂಗ್ರೆಸ್ ಮುಖಂಡರು ಲೆಕ್ಕ ನೀಡಲಿ ಎಂದು ಸವಾಲು ಹಾಕಿದರು.
ಈ ವೇಳೆ ಬಿಜೆಪಿ ಮಂಡಲ ಅಧ್ಯಕ್ಷ ಮಹಾಂತೇಶ ಬಾದಾಮಿ, ಮುಖಂಡ ರವಿಕುಮಾರಸ್ವಾಮಿ ಹಿರೇಮಠ, ಈರಣ್ಣ ಸಬರದ, ಶಶಿಧರ ಕವಲಿ, ಬಾಳಪ್ಪ ಚಾಕ್ರಿ, ಜಿಕೆ ಹಿರೇಮಠ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವೀರಣ್ಣ ಹನುಮನಾಳ ಇತರರಿದ್ದರು.
ಕೊಪ್ಪಳ ಲೋಕಸಭೆಗೆ ಎಂಟು ವಿಧಾನಸಭಾ ಕ್ಷೇತ್ರಗಳು ಒಳಪಡುವತ್ತವೆ. ಸಂಗಣ್ಣ ಕರಡಿ ಅವರು ಕಾಂಗ್ರೆಸ್ ಪಕ್ಷ ಸೇರಿದ ಹಿನ್ನೆಲೆ ಕೊಪ್ಪಳ ಸೇರಿ ಇತರೆ ಕ್ಷೇತ್ರಗಳಲ್ಲಿ ಮತದಾರರ ಸೆಳೆಯಲು ಹೆಚ್ಚು ಒತ್ತುನೀಡಲಾಯಿತು. ಆದರೆ, ಸ್ವಕ್ಷೇತ್ರದಲ್ಲಿ ನಮ್ಮ ಕುಟುಂಬದಿಂದ ಸಂಚಾರ ಸ್ವಲ್ಪ ಕಡಿಮೆಯಾಯಿತು. ಶಾಸಕ ದೊಡ್ಡನಗೌಡ ಪಾಟೀಲರು ತಮ್ಮ ಚುನಾವಣೆಯಂತೆ ಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಬಿಜೆಪಿ ಕಾರ್ಯಕರ್ತರು ಸಹ ಪ್ರಾಮಾಣಿಕವಾಗಿ ಕೆಲಸಮಾಡಿದ್ದರ ಹಿನ್ನೆಲೆ ಕುಷ್ಟಗಿ ಕ್ಷೇತ್ರದಲ್ಲಿ ಸುಮಾರು 2800 ಮತಗಳು ಲೀಡ್ ಬಂದಿವೆ. ಕೆಲವೊಂದು ಕಡೆ ಅಂಕಿಅಂಶಗಳ ವ್ಯತ್ಯಾಸ ಬರುತ್ತದೆ. ರಾಜಕಾರಣ ಅಂದಮೇಲೆ ಒಂದು ಚುನಾವಣೆಯಂತೆ ಇನ್ನೊಂದು ಚುನಾವಣೆ ಇರುವದಿಲ್ಲ. ಆ ವ್ಯತ್ಯಾಸಗಳನ್ನು ಎತ್ತಿ ತೋರಿಸುವಂತಹದ್ದು ಕಾಂಗ್ರೆಸ್ನ ಕೆಟ್ಟಚಾಳಿಯಾಗಿದೆ. ಈ ಕೆಟ್ಟ ಚಾಳಿ ಮುಂದುವರೆಸಿದರೆ ಕಾಂಗ್ರೆಸ್’ಗೆ ಜನರು ತಕ್ಕ ಪಾಠ ಕಲಿಸುತ್ತಾರೆ. ಈ ಹಿಂದೆ ರಾಯಚೂರು ಮತ್ತು ಕೊಪ್ಪಳ ಲೋಕಸಭೆ ಒಂದೆಯಾಗಿದ್ದರ ದೃಷ್ಟಿಯಿಂದ ವಿಪಕ್ಷ ಮುಖ್ಯ ಸಚೇತಕ, ಶಾಸಕ ದೊಡ್ಡನಗೌಡ ಪಾಟೀಲರಿಗೆ ಪರಿಚಿತ ಪ್ರದೇಶವೆಂದು ಬಿಜೆಪಿ ಹೈಕಮಾಂಡ್ ರಾಯಚೂರು ಜಿಲ್ಲೆ ಉಸ್ತುವಾರಿ ವಹಿಸಿತ್ತು. ಇದು ಪಕ್ಷದ ಆಂತರಿಕ ವಿಚಾರವಾಗಿದೆ ಎಂದು ಕಾಂಗ್ರೆಸ್ ಮುಖಂಡರಿಗೆ ತಿರುಗೇಟು ನೀಡಿದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ. ಮಹೇಶ, ಬಯ್ಯಾಪೂರ ಅವರು ಈ ಚರ್ಚೆಯನ್ನು ಮುಂದುವರೆಸದೇ ಇಲ್ಲಿಗೆ ಕೈಬಿಡಬೇಕು. ಇದು ಆರೋಗ್ಯಕರ ಬೆಳವಣಿಗೆಯಲ್ಲ ಎಂದು ತಿಳಿಸಿದ್ದಾರೆ.
ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪೂರ ಅವರು ವೀರಶೈವ ಲಿಂಗಾಯತರ ಮೇಲೆ ಕಳಕಳಿ ಹೊಂದಿದ್ದರೆ ವೀರಶೈವ ಲಿಂಗಾಯತರಲ್ಲಿ ಪ್ರತಿಭಾವಂತ ಯುವಕರಿದ್ದಾರೆ ಅವರಲ್ಲೊಬ್ಬರನ್ನು ವಿಧಾನಸಭಾ ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿ ತೋರಿಸಬೇಕು. ವೀರಶೈವ ಲಿಂಗಾಯತ ಸಮಾಜದ ವತಿಯಿಂದ ನಾನೇ ಸ್ಪರ್ಧಿಸಲು ಸಿದ್ದನಿದ್ದೇನೆ ನನ್ನನ್ನು ಗೆಲ್ಲಿಸಿ
– ರವಿಕುಮಾರಸ್ವಾಮಿ ಮದ್ದಾನಿ ಹಿರೇಮಠ
ಬಿಜೆಪಿ ಮುಖಂಡರು, ಕುಷ್ಟಗಿ.