ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕುಷ್ಟಗಿ : ತ್ಯಾಗ, ಬಲಿದಾನಗಳ ಪ್ರತೀಕವಾದ ಬಕ್ರೀದ್ ಹಬ್ಬವನ್ನು ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಮುಸ್ಲಿಂ ಬಾಂಧವರು ಸೋಮವಾರ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಮೂಲಕ ಸಡಗರ, ಸಂಭ್ರಮದಿಂದ ಆಚರಿಸಿದರು.
ಪಟ್ಟಣದ ಗಜೇಂದ್ರಗಡ ರಸ್ತೆ ಸಂದೀಪ ನಗರದ ಬಳಿಯ ಈದ್ಗಾ ಮೈದಾನದಲ್ಲಿ ಧಾರ್ಮಿಕ ಗುರು ಪ್ರವಾದಿ ಮಹಮದ್ ಪೈಗಂಬರ್ ಅವರ ಜನ್ಮ ದಿನ, ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬದಂದು ಪುರುಷರು, ಯುವಕರು, ಮಕ್ಕಳು ಹೊಸ ಬಟ್ಟೆ ತೊಟ್ಟು, ಟೋಪಿ ಧರಿಸಿ ತಂಡೋಪತಂಡವಾಗಿ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಧರ್ಮ ಗುರು ಫಜಲೇ ಅಜೀಮ್ ಅವರು ಪ್ರವಚನ ಮಾಡಿ ಬಕ್ರೀದ್ ಮಹತ್ವವನ್ನು ತಿಳಿಸಿದರು. ಬಳಿಕ ಮುಸ್ಲಿಂ ಬಾಂಧವರು ಪರಸ್ಪರ ಆಲಂಗಿಸಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ಹಬ್ಬದ ಪ್ರಯುಕ್ತ ಇತ್ತ ಮುಲ್ಲಾರ ಓಣಿಯಲ್ಲಿ ಪುರಸಭೆ ಮಾಜಿ ಸದಸ್ಯ ಸೈಯದ್ ಜಿಲಾನಿ ಮುಲ್ಲಾ ಹಾಗೂ ಅವರ ಬಳಗ ಪುರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಾದ ವಿದ್ಯುತ್ ದೀಪ ದುರಸ್ತಿ ಸಿಬ್ಬಂದಿ ನಾಗರಾಜ ಮತ್ತು ಪೌರಕಾರ್ಮಿಕರ ಮೇಲ್ವಿಚಾರಕ ಚಂದ್ರಶೇಖರ ಅವರ ಸಾರ್ವಜನಿಕ ಸೇವಾ ಕಾರ್ಯ ಮೆಚ್ಚಿ ಫಲ ಪುಷ್ಪ ನೀಡಿ ಗೌರವಿಸಲಾಯಿತು.
ತಾಲೂಕಿನ ಹನಮಸಾಗರ ಹೋಬಳಿ ಕೇಂದ್ರ, ಹನುಮನಾಳ ಹೋಬಳಿ ಕೇಂದ್ರ, ತಾವರಗೇರಾ ಹೋಬಳಿ ಕೇಂದ್ರ ಹಾಗೂ ಹೋಬಳಿ ವ್ಯಾಪ್ತಿಯ ದೋಟಿಹಾಳ, ಯಲಬುಣಚಿ, ಮನ್ನೇರಾಳ, ಹಿರೇಗೊಣ್ಣಾಗರ, ಹಿರೇಮನ್ನಾಪೂರ ಹೀಗೇ ಗ್ರಾಮೀಣ ವ್ಯಾಪ್ತಿಯಲ್ಲಿನ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಸಡಗರ, ಸಂಭ್ರಮದಿಂದ ಆಚರಿಸಿದರು. ಪೊಲೀಸ್ ಇಲಾಖೆ ಟ್ರಾಫಿಕ್ ಸಮಸ್ಯೆ ಸೇರಿದಂತೆ ಇತರೆ ಯಾವುದೇ ಸಮಸ್ಯೆ ಉಲ್ಬಣಿಸದಂತೆ ಭದ್ರತೆ ಒದಗಿಸಿತ್ತು.