ಡಾ.ಬಸವರಾಜಗೆ ಪಕ್ಷದಲ್ಲಿ ಉತ್ತಮ ಭವಿಷ್ಯದ ದಿನಗಳು ಬರಲಿವೆ – ಡಿ.ಎಚ್.ಪಾಟೀಲ್

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ : ಲೋಕಸಭೆ ಚುನಾವಣೆಯಲ್ಲಿ ಡಾ.ಬಸವರಾಜ ಗೆಲುವಿಗೆ ಹಿನ್ನಡೆಯಾದರೂ ಪಕ್ಷದಲ್ಲಿ ಉತ್ತಮ ಭವಿಷ್ಯದ ದಿನಗಳು ಬರಲಿವೆ. ಈ ಬಗ್ಗೆ ಪಕ್ಷದ ಹಿರಿಯರಿಂದಲೂ ಭರವಸೆ ಸಿಕ್ಕಿದೆ ಎಂದು ವಿಧಾನಸಭೆ ಪ್ರತಿಪಕ್ಷದ ಮುಖ್ಯಸಚೇತಕ, ಶಾಸಕ ದೊಡ್ಡನಗೌಡ ಎಚ್. ಪಾಟೀಲ್ ಅವರು ಹೇಳಿದರು.

ಜಿಲ್ಲೆಯ ಕುಷ್ಟಗಿ ಪಟ್ಟಣದ ಬಿಜೆಪಿ ಕಾರ್ಯಾಲಯದ ಸಭಾಂಗಣದಲ್ಲಿ ಪಕ್ಷದ ಕಾರ್ಯಕರ್ತರಿಗೆ ಸೋಮವಾರ ಸಂಜೆ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಚುನಾವಣೆಯಲ್ಲಿ ಸೋಲು – ಗೆಲುವು ನಿರೀಕ್ಷಿತವಾದರೂ ಸೋಲು, ಸ್ಪರ್ಧಿಸದ ಅಭ್ಯರ್ಥಿಯಿಂದ ಹಿಡಿದು ಗೆಲುವಿಗಾಗಿ ಶ್ರಮಿಸಿದ ಪ್ರತಿಯೊಬ್ಬ(ಮುಖಂಡರು ಹಾಗೂ ಕಾರ್ಯಕರ್ತರು)ರಿಗೆ ಕೆಲ ದಿನಗಳ ಕಾಲ ಅನಾಥ ಪ್ರಜ್ಞೆಯಾಗಿ ಕಾಡುತ್ತದೆ. ಆದರೆ, ಮಾಜಿ ಶಾಸಕ ಕೆ.ಶರಣಪ್ಪ ಅವರು ಒಮ್ಮೆ ಗೆದ್ದು ತಾಲೂಕಿನಾದ್ಯಂತ ಈವರೆಗೆ ಯಾರೂ ಮಾಡದಷ್ಟು ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಇದನ್ನು ಪ್ರತಿ ಗ್ರಾಮದ ಜನರಲ್ಲಿಯೂ ಇದೆ. ಆದಾಗ್ಯೂ ಅವರ ಕೆಲಸಗಳು ಗೆಲವಾಗಿ ಪರಿವರ್ತನೆಯಾಗಲಿಲ್ಲ ಎನ್ನುವುದು ವಿಪರ್ಯಾಸ. ಅವರ ಮಗ ಡಾ.ಬಸವರಾಜ ಅವರು ಚಿಕ್ಕ ವಯಸ್ಸಿನಲ್ಲೇ ಸಾಕಷ್ಟು ಪ್ರಬುದ್ಧರಾಗಿ ಪಕ್ಷದಲ್ಲಿ ಕೆಲಸ ಮಾಡಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಕ್ಕಿತು. ಪಕ್ಷದ ಮುಖಂಡರು, ಕಾರ್ಯಕರ್ತರ ಸಾಕಷ್ಟು ಶ್ರಮದ ಫಲವಾಗಿಯೂ ಸೋತಿದ್ದೇವೆ. ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೇ ಪಕ್ಷ ಬಲಪಡಿಸಲು ಸಂಘಟನೆ ಹಾಗೂ ಮುಂಬರುವ ಜಿಪಂ ಹಾಗೂ ತಾಪಂ ಚುನಾವಣೆಯಲ್ಲಿ ಗೆಲ್ಲಲು ಶ್ರಮಿಸೋಣ ಎಂದರು.

ಬಿಜೆಪಿ ಪ್ರಮುಖ ಡಾ.ಬಸವರಾಜ ಕ್ಯಾವಟರ್ ಅವರು ಮಾತನಾಡಿ, ಕೊಪ್ಪಳ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರು ಆಡಿದ ಬಣ್ಣದ ಮಾತುಗಳೇ ಬಿಜೆಪಿ ಹಿನ್ನಡೆಗೆ ಕಾರಣವಾಯಿತು. ಆದಾಗ್ಯೂ ನಮ್ಮ ಪಕ್ಷದ ನಾಯಕ ದೊಡ್ಡನಗೌಡ ಪಾಟೀಲ್ ಅವರು ಸೇರಿದಂತೆ ನಮ್ಮ ಮುಖಂಡರು, ಕಾರ್ಯಕರ್ತರು ಶ್ರಮಿಸಿದ ಫಲವಾಗಿ 6 ಲಕ್ಷ ಅಧಿಕ ಮತಗಳನ್ನು ಪಡೆದಿದ್ದೇವೆ. ಸೋಲನ್ನು ಸವಾಲಾಗಿ ಸ್ವೀಕರಿಸಿ ಪಕ್ಷ ಬಲಪಡಿಸಿ ಮತ್ತೆ ಗೆಲವು ಸಾಧಿಸಲು ಶ್ರಮಿಸೋಣ ಎಂದರು.

ಪಕ್ಷದ ಮೂಲ ಆಶಯ ಮೋದಿ ಅವರು ಮತ್ತೆ ಪ್ರಧಾನಿ ಆಗಬೇಕು ಎನ್ನುವುದು ಈಡೇರಿದೆ. ಮುಂದಿನ ದಿನಗಳಲ್ಲಿ ಕಾರ್ಯಕರ್ತರ ಸ್ಥಳೀಯ ಸಂಸ್ಥೆಗಳ ಚುನಾವಣೆ ಬರಲಿದೆ. ಇಲ್ಲಿ ಪಕ್ಷ ಗೆಲ್ಲಲು ತಯಾರಾಗೋಣ. ನಮ್ಮ ಮನೆತನ ಸದಾ ಸಮಾಜಮುಖಿ ಇದ್ದು, ಮುಂಬರುವ ದಿನಗಳಲ್ಲಿಯೂ ಇರುತ್ತದೆ. ನನ್ನ ವೈದ್ಯಕೀಯ ವೃತ್ತಿಯೊಂದಿಗೆ ಪಕ್ಷದ ಮೂಲಕ ಸಾಮಾಜಿಕ ಸೇವೆಯನ್ನು ಮುಂದುವರಿಸುತ್ತೇನೆ.

– ಡಾ.ಬಸವರಾಜ ಕ್ಯಾವಟರ್, ಬಿಜೆಪಿ ಪ್ರಮುಖ

ಬಿಜೆಪಿ ಮಂಡಲ ಅಧ್ಯಕ್ಷ ಮಹಾಂತೇಶ ಬಾದಾಮಿ, ಮುಖಂಡರಾದ ಫಕೀರಪ್ಪ ಚಳಗೇರಾ, ಪ್ರಭಾಕರ ಚಿಣಿ, ಜೆಡಿಎಸ್ ಮುಖಂಡ ಶರಣಪ್ಪ ಕುಂಬಾರ, ಬಿಜೆಪಿ ಮಹಿಳಾ ಅಧ್ಯಕ್ಷೆ ಶೈಲಜಾ ಬಾಗಲಿ, ಚಂದ್ರಹಾಸ ಭಾವಿಕಟ್ಟಿ ಹಾಗೂ ಕಾರ್ಯಕರ್ತರು ಹಾಜರಿದ್ದರು.

ಭಾವುಕ ನುಡಿ : ನಮ್ಮ ಮನೆತನಕ್ಕೆ ಸೋಲು ಹೊಸದು ಅಲ್ಲ.ಆದರೆ, ಶಾಸಕ ದೊಡ್ಡನಗೌಡ ಪಾಟೀಲ ಸೇರಿದಂತೆ ಜಿಲ್ಲೆಯ ಎಲ್ಲಾ ಮುಂಖಡರು ನಮ್ಮ ಮೇಲೆ ವಿಶ್ವಾಸವಿಟ್ಟು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕೊಟ್ಟಿದ್ದರು. ಆದರೆ ಕೆಲವೊಂದು ಕಾರಣಗಳಿಂದ ಸೋಲಾಗಿದೆ. ಸಮಾಜದ ಯಾವುದೇ ಸಮಸ್ಯೆಗಳಿರಲಿ ನಮ್ಮ ಮನೆಯ ಬಾಗಿಲು ದಿನದ 24 ಗಂಟೆ ತೆರೆದಿರುತ್ತದೆ. ನಮ್ಮ ಮನೆತನದಿಂದ ತಪ್ಪಾಗಿದ್ದರೆ ಕ್ಷಮಿಸುವಂತೆ ಭಾವುಕರಾಗಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ಮಹೇಶ ನುಡಿದರು.