ಕೃಷಿಪ್ರಿಯ..
ಸುದ್ದಿ ಸಮರ್ಪಣ |
ಕೊಪ್ಪಳ : ಸರ್ಕಾರಿ ಶಾಲೆಗಳಲ್ಲಿ ದಾಖಲು ಹೊಂದಿರುವ 4 ಹಾಗೂ 5ನೇ ತರಗತಿ ವಿದ್ಯಾರ್ಥಿಗಳು ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ಅನಧಿಕೃತವಾಗಿ ನಡೆಸುತ್ತಿರುವ ಕೋಚಿಂಗ್ ಸೆಂಟರ್’ಗಳಲ್ಲಿ ಕಂಡುಬರುತ್ತಿದ್ದಾರೆ.
ಪಟ್ಟಣ ಸೇರಿ ಗ್ರಾಮೀಣ ಭಾಗದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳು ಕೋಚಿಂಗ್ ಸೆಂಟರಗಳಲ್ಲಿ ನವೋದಯ, ಸೈನಿಕ, ಮುರಾರ್ಜಿ ವಸತಿ ಶಾಲೆಗಳ ಪ್ರವೇಶ ಪರೀಕ್ಷೆಗಾಗಿ ತರಬೇತಿ ಪಡೆಯಲು ಇಲ್ಲಿನ ಅಧಿಕೃತ ಕೋಚಿಂಗ್ ಸೆಂಟರ್’ಗಳಲ್ಲಿ ಕಾನೂನುಬಾಹೀರವಾಗಿ ಸೇರ್ಪಡೆಯಾಗಿದ್ದು, ಕೆಲ ಕೋಚಿಂಗ್ ಸೆಂಟರ್’ಗಳು ಸರ್ಕಾರಿ ಶಾಲೆ ಶಿಕ್ಷಕರೇ ಇತರರ ಮಾಲೀಕತ್ವದಲ್ಲಿ ನಡೆಸುತ್ತಿದ್ದಾರೆ. ಇವುಗಳಿಗೆ ಶಿಕ್ಷಣ ಇಲಾಖೆ ಅಧಿಕಾರಿಗಳ ರಕ್ಷಣೆ ಇದೆ ಎಂದು ಹೇಳಲಾಗುತ್ತಿದೆ.
ಕೊಪ್ಪಳ ಜಿಲ್ಲಾ ಕೇಂದ್ರಕ್ಕೆ ತೆರಳುವ ಮುಖ್ಯರಸ್ತೆ ಬಳಿಯ ಗದ್ದಿ ಲೇಔಟ್’ನಲ್ಲಿ ಶೆಡ್’ನಲ್ಲಿ ಸಜ್ಜಲಶ್ರೀ ನವೋದಯ ತರಬೇತಿ ಕೇಂದ್ರವಿದ್ದು, ಅಗತ್ಯ ಮೂಲಸೌಕರ್ಯಗಳ ಕೊರತೆ ಮಧ್ಯೆ ಹುಬ್ಬಳ್ಳಿ ನಗರ, ತಾಲೂಕಿನ ಬಾದಿಮನಾಳ, ಹಂಚಿನಾಳ, ಹನುಮನಾಳ, ಹಳ್ಳಿಗಳ ಸರ್ಕಾರಿ ಶಾಲೆಗಳಿಗೆ ಸೇರಿದ ಹಲವು ಮಕ್ಕಳು ವಸತಿ ಶಾಲೆಗಳ ಪ್ರವೇಶ ಪರೀಕ್ಷೆಗಾಗಿ ತರಬೇತಿ ಪಡೆಯುತ್ತಿದ್ದಾರೆ. ಕೋಚಿಂಗ್ ಸೆಂಟರ್ ಪರವಾನಗಿ ಪಡೆಯಲು ಪ್ರಯತ್ನ ನಡೆಸಿರುವುದಾಗಿ ರಾಘವೇಂದ್ರ ಗದ್ದಿ ತಿಳಿಸಿದ್ದಾರೆ.
ಕೊಪ್ಪಳ ಜಿಲ್ಲಾ ಕೇಂದ್ರಕ್ಕೆ ತೆರಳುವ ಮುಖ್ಯರಸ್ತೆ ಬಳಿಯಿರುವ ಎಸ್ಸಿ, ಎಸ್ಟಿ ಬಾಲಕಿಯರ ವಸತಿ ನಿಲಯದ ಸಮೀಪದಲ್ಲಿ ಸಿದ್ದಿ ವಿನಾಯಕ ಹೆಸರಿನಲ್ಲಿ ಅನಧಿಕೃತ ಕೋಚಿಂಗ್ ಸೆಂಟರ್ ಇದ್ದು, ಕೊರಡಕೇರಾ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕರೊಬ್ಬರು ಬೇರವರ ಹೆಸರಲ್ಲಿ ನಡೆಸುತ್ತಿದ್ದಾರೆ ಎಂಬುದು ತಿಳಿದುಬಂದಿದೆ.
ಇಲ್ಲಿ ತಾಲೂಕಿನ ಪಟ್ಟಲಚಿಂತಿ, ಮಿಟ್ಟಲಕೋಡ್, ವನಜಬಾವಿ, ಮಾಸಕಟ್ಟಿ, ಹೆಸರೂರು, ದೋಟಿಹಾಳ, ಮೇಗೂರು, ತುಗ್ಗಲಡೋಣಿ, ಯಲಬುರ್ಗಾ ತಾಲೂಕಿನ ಹಲವು ಗ್ರಾಮಗಳ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳ ಮಕ್ಕಳು ದಾಖಲಾತಿ ಹೊಂದಿ ವಸತಿ ಶಾಲೆಗಳ ಪ್ರವೇಶ ಪರೀಕ್ಷೆಗಾಗಿ ತರಬೇತಿ ಪಡೆಯುತ್ತಿದ್ದಾರೆ. ಮಕ್ಕಳ ಊಟ ತಯಾರಿಗೆ ಅವರನ್ನೇ ಬಳಸಿಕೊಳ್ಳಲಾಗುತ್ತಿದೆ ಎಂಬುದು ಗೊತ್ತಾಗಿದೆ.
ಅದೇರೀತಿ ಪಟ್ಟಣದ ಬುತ್ತಿಬಸವೇಶ್ವರ ದೇವಸ್ಥಾನದ ರಥಬೀದಿ ಬಳಿ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರ ಸಂಬಂಧಿಯಿಂದ ಅನಧಿಕೃತವಾಗಿ ವಸತಿ ಸಹಿತ ಕೋಚಿಂಗ್ ಸೆಂಟರ್ ನಡೆಸಲಾಗುತ್ತಿದೆ. ಇಲ್ಲಿನ ಅನುದಾನಿತ ಖಾಸಗಿ ಶಾಲೆ ಸೇರಿದಂತೆ ಬೋದೂರು, ಗಾಣದಾಳ, ಜಾಲಿಹಾಳ, ಕಲಾಲಬಂಡಿ, ಟೆಕ್ಕಳಕಿ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೊಂದಿರುವ ಮಕ್ಕಳು ವಸತಿ ಶಾಲೆಗಳ ಪ್ರವೇಶ ಪರೀಕ್ಷೆಗಾಗಿ ತರಬೇತಿ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ಪಟ್ಟಣದ ಗಜೇಂದ್ರಗಡ ರಸ್ತೆ ಪಕ್ಕದ ದೇಸಾಯಿ ಲೇಔಟ್’ನಲ್ಲಿ ವಿದ್ಯಾಜ್ಯೋತಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ವಸತಿ ಸಹಿತ ಕೋಚಿಂಗ್ ಸೆಂಟರ್ ಇದೆ. ಇಲ್ಲಿ ಪಟ್ಟಣ ಸೇರಿದಂತೆ ಕುಂಬಳಾವತಿ, ಬಂಡರಗಲ್, ವಂದಾಲಿ, ಮರಟಗೇರಿ, ಹನುಮನಾಳ, ಲಕ್ಕಲಕಟ್ಟಿ, ವೀರಾಪುರ, ಗೋತಗಿ, ಹಾಬಲಕಟ್ಟಿ ಹಾಗೂ ಬೇರೆ ಬೇರೆ ಊರಿನ ಮಕ್ಕಳು ವಸತಿ ಶಾಲೆಗಳ ಪ್ರವೇಶ ಪರೀಕ್ಷೆಗಾಗಿ ತರಬೇತಿ ಪಡೆಯುತ್ತಿದ್ದಾರೆ. ನಮ್ಮಲ್ಲಿ ಶೇ.10ರಿಂದ 15ರಷ್ಟು ಸರ್ಕಾರಿ ಹಾಗೂ ಅನುದಾನಿತ ಶಾಲೆಯ ಮಕ್ಕಳು ಇದ್ದು, ಅಧಿಕೃತವಾಗಿ ನಮ್ಮ ಶಾಲೆಯಲ್ಲಿ ದಾಖಲೆ ಹೊಂದಲು ಅವರ ಪಾಲಕರಿಗೆ ಮೌಖಿಕವಾಗಿ ತಿಳಿಸಿ ಅವರಿಂದ ಪತ್ರ ಕೂಡ ಪಡೆಯಲಾಗಿದೆ. ನಮ್ಮದು ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದಕೊಂಡ ಅಧಿಕೃತ ಶಾಲೆ ಹಾಗೂ ಕೋಚಿಂಗ್ ಸೆಂಟರ್ ಆಗಿದೆ. ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲಾಗಿದೆ. ಈ ಬಗ್ಗೆ ಸಂಬಂಧಿಸಿದ ಇಲಾಖೆಯಿಂದ ಪರವಾನಗಿ ಪಡೆದುಕೊಂಡ ದಾಖಲೆಯೊಂದಿಗೆ ಮುಖ್ಯಸ್ಥ ಮಹಾಂತೇಶ ಆರೇರ್ ತಿಳಿಸಿದ್ದಾರೆ.
ಪಟ್ಟಣ ಸೇರಿದಂತೆ ಬಹುತೇಕ ಹಳ್ಳಿಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪಡೆದ ಮಕ್ಕಳು ನವೋದಯ, ಮುರಾರ್ಜಿ, ಆರ್.ಎಮ್.ಎಸ್.ಎ., ಕಿತ್ತೂರು ರಾಣಿ ಚೆನ್ನಮ್ಮ, ಸೈನಿಕ, ಅಳಿಕೆ ಇತ್ಯಾದಿ ಪ್ರವೇಶ ಪರೀಕ್ಷೆಗಳಿಗೆ ತರಬೇತಿ ಪಡೆಯಲೆಂದು 10 ತಿಂಗಳ ಅವಧಿಗೆ 35 ರಿಂದ 45 ಸಾವಿರ ರೂಪಾಯಿ ವರೆಗೂ ವಸತಿ ಕೋಚಿಂಗ್ ಸೆಂಟರಗಳಿಗೆ ಪಾವತಿಸಿ ತರಬೇತಿ ಪಡೆಯುತಿದ್ದಾರೆ. ಪಟ್ಟಣದಲ್ಲಿ ಸರಿಯಾದ ಮೂಲಸೌಕರ್ಯ ವ್ಯವಸ್ಥೆ, ಕಲಿಕೆಗೆ ಪೂರಕ ವಾತಾವರಣ ಇಲ್ಲದ ಇನ್ನೂ ಹಲವು ಅನಧಿಕೃತ ಶಾಲೆ ಹಾಗೂ ವಸತಿ ಸಹಿತ ಕೋಚಿಂಗ್ ಸೆಂಟರ್’ಗಳು ಉದ್ಯಮವಾಗಿ ತಲೆ ಎತ್ತಿರುವುದು ಸುಳ್ಳಲ್ಲ.
- ಸರ್ಕಾರ, ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಉಚಿತ ಪಠ್ಯ, ಪುಸ್ತಕ, ಸಮವಸ್ತ್ರ, ಮಧ್ಯಾಹ್ನದ ಬಿಸಿಯೂಟ, ಮೊಟ್ಟೆ, ಬಾಳೆಹಣ್ಣು ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸಲು ಕೋಟ್ಯಂತರ ರೂಪಾಯಿ ವ್ಯಯಿಸಿ ಶಾಲೆಗಳನ್ನು ನಡೆಸುತ್ತದೆ. ಆದರೆ ಇಲ್ಲಿನ ಮಕ್ಕಳ ಪಾಲಕರು, ಅನಧಿಕೃತ ಕೋಚಿಂಗ್ ಸೆಂಟರ್’ಗಳಲ್ಲಿ ಸಾವಿರಾರು ರೂಪಾಯಿ ನೀಡಿ ವಸತಿ ಶಾಲೆಗಳ ಪ್ರವೇಶ ಪರೀಕ್ಷೆಯಲ್ಲಿ ಯಶಸ್ವಿಯಾಗಲು ಮಕ್ಕಳಿಗೆ ತರಬೇತಿ ಕೊಡಿಸುತ್ತಿದ್ದಾರೆ. ಇದಕ್ಕೆ ಸರ್ಕಾರಿ ಶಾಲೆಯ ಶಿಕ್ಷಕರು ಕೂಡ ವಿದ್ಯಾರ್ಥಿಗಳ ದಾಖಲಾತಿ ಹಾಜರಾತಿ ತೋರಿಸಿ ಪರೋಕ್ಷವಾಗಿ ಪ್ರೋತ್ಸಾಹಿಸುತ್ತಿರುವುದು ವಿಪರ್ಯಾಸ.
ಇದನ್ನರಿತ ಶಾಸಕ ದೊಡ್ಡನಗೌಡ ಪಾಟೀಲ್, ಶನಿವಾರ ನಡೆದ ಕೆಡಿಪಿ ಸಭೆಯಲ್ಲಿ ತಹಸೀಲ್ದಾರ್ ನೇತೃತ್ವದ ತ್ರಿಸದಸ್ಯ ಸಮಿತಿ ಪಟ್ಟಣ ಸೇರಿ ತಾಲೂಕಿನಲ್ಲಿ ನಾಯಿಕೊಡೆಯಂತೆ ತಲೆ ಎತ್ತಿರುವ ಅನಧಿಕೃತ ಕೋಚಿಂಗ್ ಸೆಂಟರಗಳಿಗೆ ಭೇಟಿ ನೀಡಿ ಮುಚ್ಚಿಸಲು ಸೂಚನೆ ನೀಡಿದ್ದಾರೆ. ಆದರೆ, ಹೀಗೆ ಅಂದುಕೊಂಡಂತೆ ಆಗುವುದು ಕಷ್ಟಸಾಧ್ಯ. ಇದಕ್ಕೆ ರಾಜಕೀಯ ಪ್ರಭಾವಿಗಳ ಒತ್ತಡ ಕಾರಣ ಎಂಬುದು ಅವರಿಗೂ ಗೊತ್ತಿದೆ.