ಕುಷ್ಟಗಿ | ಎಪಿಎಂಸಿ ಸಿಸಿ ರಸ್ತೆ ಕಾಮಗಾರಿ ಶಾಸಕ ದೊಡ್ಡನಗೌಡ ಪರಿಶೀಲನೆ

ಕೃಷಿಪ್ರಿಯ..
ಸುದ್ದಿ ಸಮರ್ಪಣ |

ಕುಷ್ಟಗಿ: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ನಬಾರ್ಡ್ ಯೋಜನೆಯಡಿ 1 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೊಂಡಿರುವ ಸಿಸಿ ರಸ್ತೆ ಕಾಮಗಾರಿ ಸ್ಥಳಕ್ಕೆ ಶಾಸಕ ದೊಡ್ಡನಗೌಡ ಪಾಟೀಲ್ ಅವರು ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.

ವರ್ತಕರ ಮಳಿಗೆಗಳಿಗೆ ರೈತರು ಪ್ರತಿನಿತ್ಯ ಬೆಳೆದ ದವಸ ಧಾನ್ಯಗಳನ್ನು ಎತ್ತಿನ ಬಂಡಿ, ಟ್ರ್ಯಾಕ್ಟರ್ ಸೇರಿದಂತೆ ಇತರೆ ವಾಹನಗಳ ಮೂಲಕ ಹೊತ್ತು ತರುತ್ತಾರೆ. ಹೀಗಾಗಿ ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ ನಿಗದಿತ ಅವಧಿಯೊಳಗೆ ಗುಣಮಟ್ಟತೆ ಕಾಪಾಡಿಕೊಂಡು ಕಾಮಗಾರಿ ಪೂರ್ಣಗೊಳಿಸುವಂತೆ ಕಾಮಗಾರಿ ಗುತ್ತಿಗೆದಾರರಿಗೆ ಸೂಚಿಸಿದರು.

ಎಪಿಎಂಸಿ ಪ್ರಾಂಗಣದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತಿದ್ದು, ತಡೆಗಟ್ಟಲು ಸುತ್ತಲೂ ತಡೆಗೋಡೆ ಮತ್ತು ಎರಡು ದ್ವಾರಬಾಗಿಲು ಮತ್ತು ಪ್ರಾಂಗಣದಲ್ಲಿ ಕೆಲವೆಡೆ ಸಿಸಿ ರಸ್ತೆ ನಿರ್ಮಾಣ ಅಗತ್ಯತೆ ಕುರಿತು ವರ್ತಕರು ಬೇಡಿಕೆ ಇಟ್ಟಿದ್ದು, ಕೆಕೆಆರ್’ಡಿಬಿ ಯೋಜನೆಯಡಿ ನಿರ್ಮಿಸಲು ಅವಕಾಶವಿದೆ. ಜೊತೆಗೆ ಕೃಷಿ ಉತ್ಪನ್ನ ಮಾರುಕಟ್ಟೆಯಿಂದ ತಡೆಗೋಡೆ ನಿರ್ಮಿಸಲು ಅವಕಾಶವಿರುವ ಕುರಿತು ಸೆಕ್ರೇಟರಿ ಬಳಿ ಮಾತನಾಡುವೆ ಎಂದರು.

ಪ್ರಾಂಗಣದಲ್ಲಿ ಶುದ್ಧ ಕುಡಿಯುವ ನೀರು ಮತ್ತು ಶೌಚಾಲಯ ಹಾಗೂ ವಿಶ್ರಾಂತಿಗೆ ಸುಸಜ್ಜಿತ ರೈತ ಭವನ ಇಲ್ಲ. ಹೀಗಾಗಿ ರೈತರು ಮತ್ತು ಹಮಾಲರು, ವರ್ತಕರು ತೊಂದರೆ ಅನುಭವಿಸುತ್ತಿರುವ ಕುರಿತು ಶಾಸಕರ ಗಮನಕ್ಕೆ ಮಾಧ್ಯಮದವರು ತಂದರು. ಎಪಿಎಂಸಿ ಮಾರುಕಟ್ಟೆಗೆ ಅಗತ್ಯ ಎಲ್ಲ ಮೂಲಸೌಕರ್ಯಗಳನ್ನು ಒದಗಿಸುವ ಭರವಸೆ ಶಾಸಕರು ನೀಡಿದರು.

ಈ ವೇಳೆ ವರ್ತಕರ ಸಂಘದ ಅಧ್ಯಕ್ಷ ಮಹಾಂತಯ್ಯ ಅರಳೆಲಿಮಠ, ಮುಖಂಡರಾದ ಸಿದ್ಧಲಿಂಗಪ್ಪ ಕಲಕಬಂಡಿ, ಸಂಗಮೇಶ ಶಿವನಗುತ್ತಿ, ಎಪಿಎಂಸಿ ಸೆಕ್ರೆಟರಿ ನೀಲಪ್ಪ ಶೆಟ್ಟಿ ಸೇರಿದಂತೆ ವರ್ತಕರು ಹಾಜರಿದ್ದರು.