ಕೃಷಿಪ್ರಿಯ..
ಸುದ್ದಿ ಸಮರ್ಪಣ |
ಕುಷ್ಟಗಿ : ಬೀದಿ ದೀಪಗಳ ನಿರ್ವಹಣೆ ಇಲ್ಲದೇ ಕಳೆದ ಎರಡು ತಿಂಗಳುಗಳಿಂದ ಪಟ್ಟಣದ ಪುರಸಭೆ ವ್ಯಾಪ್ತಿಯ 23 ವಾರ್ಡಗಳಲ್ಲಿ ರಾತ್ರಿ ಹೊತ್ತು ಸಮರ್ಪಕ ಬೆಳಕಿನ ವ್ಯವಸ್ಥೆ ಇಲ್ಲದೇ ಜನ ಕತ್ತಲಲ್ಲಿ ಪರದಾಡುವಂತಾಗಿದೆ.
ಈ ಕುರಿತು ಮಾಧ್ಯಮಕ್ಕೆ ದೂರು ವ್ಯಕ್ತಪಡಿಸಿರುವ ಪಟ್ಟಣದ ವಿವಿಧ ವಾರ್ಡಗಳ ನಿವಾಸಿಗಳು, ಪುರಸಭೆ ಅಧಿಕಾರಿಗಳು ಹಾಗೂ ಸದಸ್ಯರ ಗಮನಕ್ಕಿದ್ದರೂ ಬೀದಿ ದೀಪಗಳ ದುರಸ್ತಿಗೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾತ್ರಿ ವೇಳೆ ಬೀದಿ ದೀಪ ಸಮಸ್ಯೆ ಪರಿಣಾಮ ಮೊಬೈಲ್ ಟಾರ್ಚ್ ಸಹಾಯದಿಂದ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಸದ್ಯ ಮಳೆಗಾಲ, ಆಗಾಗ್ಗೆ ಮಳೆ – ಗಾಳಿ ಹೆಚ್ಚು. ಜೊತೆಗೆ ಹಾವು-ಚೇಳು ಇತರೆ ವಿಷ ಜಂತುಗಳ ಹಾವಳಿ ಮತ್ತು ಕಳ್ಳರ ಕಾಟವಿದೆ. ಬೀದಿ ಬೀದಿಗಳಲ್ಲಿ ಸಮರ್ಪಕ ಬೆಳಕಿನ ವ್ಯವಸ್ಥೆ ಇಲ್ಲದೇ ಮಕ್ಕಳು, ಮಹಿಳೆಯರು, ವೃದ್ದರು ಸಂಚರಿಸಲು ಭಯ ಪಡುವಂತಾಗಿದೆ. ಬಹುತೇಕ ವಾರ್ಡಗಳಲ್ಲಿ ಬೀದಿ ಬದಿಯ ವಿದ್ಯುತ್ ಕಂಬಗಳಲ್ಲಿನ ದೀಪಗಳು ಉರಿಯದೇ ಇದ್ದ ಪರಿಣಾಮ ಇವತ್ತಿಗೆ ಸುಮಾರು ಎರಡು ತಿಂಗಳು ಗತಿಸಿವೆ. ಪುರಸಭೆ ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಿ ವಾರ್ಡಗಳಲ್ಲಿನ ಬೀದಿ ದೀಪಗಳ ದುರಸ್ತಿಗೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಎರಡು ತಿಂಗಳ ಹಿಂದೆ ಬೀದಿ ದೀಪಗಳ ನಿರ್ವಹಣೆಯ ಪುರಸಭೆ ಸಿಬ್ಬಂದಿ ನಾಗರಾಜ ಎಂಬಾತ ಬೀದಿ ದೀಪಗಳ ದುರಸ್ತಿ ಕಾರ್ಯದಲ್ಲಿದ್ದಾಗ ಬಿದ್ದು ಕಾಲು ಮುರಿದುಕೊಂಡು ಸದ್ಯ ಚಿಕಿತ್ಸೆ ಪಡೆದು ವಿಶ್ರಾಂತಿಯಲ್ಲಿದ್ದಾನೆ. ಈ ವೇಳೆ ಬೀದಿ ದೀಪಗಳ ನಿರ್ವಹಣೆಗೆ ದುರಸ್ತಿ ಜ್ಞಾನವಿರುವ ಬೇರೆ ಸಿಬ್ಬಂದಿ ನಿಯೋಜಿಸುವ ಕೆಲಸ ಪುರಸಭೆ ಮುಖ್ಯಾಧಿಕಾರಿ ಮಾಡಬೇಕಿತ್ತು. ಆದರೆ, ಈ ಬಗ್ಗೆ ಸಾಕಷ್ಟು ಸಲ ಗಮನಕ್ಕೆ ತಂದರೂ ತಲೆಕೆಡಿಸಿಕೊಂಡಿಲ್ಲ. ಇದರಿಂದ ಜನರೊಂದಿಗೆ ನಿತ್ಯ ಸಂಪರ್ಕದಲ್ಲಿ ಸಿಗುವ ನಮಗೆ ಮನಬಂದಂತೆ ಬೈಯ್ಗುಳ ಎದುರಿಸುವಂತಾಗಿದೆ.
– ಪುರಸಭೆ ಸದಸ್ಯರು, ಕುಷ್ಟಗಿ.
ವಾರ್ಡಗಳ ಬೀದಿ ದೀಪಗಳ ಸಮಸ್ಯೆ ಗಮನಕ್ಕಿದೆ. ದುರಸ್ತಿ ಕಾರ್ಯ ಕೈಗೊಳ್ಳಲು ಪರ್ಯಾಯವಾಗಿ ಸಿಬ್ಬಂದಿ ನಿಯೋಜಿಸಲಾಗಿತ್ತು. ವಿದ್ಯುತ್ ಕಂಬ ಏರಲು ಸಿಬ್ಬಂದಿ ಹಿಂದೇಟು ಹಾಕುತ್ತಿದ್ದು, ಬೀದಿ ದೀಪಗಳ ನಿರ್ವಹಣೆಗೆ ಖಾಸಗಿ ವ್ಯಕ್ತಿಯೊಬ್ಬನನ್ನು ನಿಯೋಜಿಸಲು ಕ್ರಮಕೈಗೊಳ್ಳಲಾಗಿದೆ.
– ಧರಣೇಂದ್ರಕುಮಾರ,
ಮುಖ್ಯಾಧಿಕಾರಿ, ಪುರಸಭೆ ಕುಷ್ಟಗಿ.