ಕುಷ್ಟಗಿ | ಲಕ್ಷಾಂತರ ರೂ. ಬೆಲೆಬಾಳುವ ಶ್ರೀಗಂಧದ ಮರಗಳ ಕಳ್ಳತನ!

ಕೃಷಿಪ್ರಿಯ..
ಸುದ್ದಿ ಸಮರ್ಪಣ |

ಕೊಪ್ಪಳ : ಜಿಲ್ಲೆಯ ಕುಷ್ಟಗಿ ಪಟ್ಟಣ ಸಮೀಪದ ರಾಷ್ಟ್ರೀಯ ಚತುಷ್ಪಥ ಹೆದ್ದಾರಿ -50ರ ಪಕ್ಕದ ನಡವಲಕೊಪ್ಪ ಸೀಮಾದ ಜಮೀನಿನಲ್ಲಿ ಬೆಳೆಸಿದ್ದ ಲಕ್ಷಾಂತರ ರೂ.ಗಳ ಮೌಲ್ಯದ ಶ್ರೀಗಂಧ ಮರಗಳನ್ನು ಕಳ್ಳರು ಕತ್ತರಿಸಿ ಒಯ್ದ ಘಟನೆ ಗುರವಾರ ಬೆಳಗಿನ ಜಾವ ನಡೆದಿದೆ.

ಪಟ್ಟಣದ ನಿವೃತ್ತ ಉಪನ್ಯಾಸಕ ಶಿವಸಂಗನಗೌಡ ಶಿವನಗುತ್ತಿ ಅವರಿಗೆ ಸೇರಿದ ಸರ್ವೇ ನಂ 11/2ರ ಸುಮಾರು 5 ಎಕರೆ 28 ಗುಂಟೆ ಜಮೀನಿನಲ್ಲಿ 2006ರಲ್ಲಿ 1 ಸಾವಿರ ಶ್ರೀಗಂಧ ಸಸಿಗಳು ಹಾಗೂ 4,500 ತೇಗದ ಸಸಿಗಳನ್ನು ನಾಟಿ ಮಾಡಲಾಗಿತ್ತು. ಇದರಲ್ಲಿ ಆಗಾಗ್ಗೆ ಒಂದೆರಡು ಮರಗಳು ಕಳ್ಳತನವಾಗಿ ಸದ್ಯ ಕಟಾವು ಹಂತದಲ್ಲಿದ್ದ 371 ಶ್ರೀ ಗಂಧದ ಮರಗಳು ಉಳಿದಿದ್ದವು. ಬೆಳಗಿನ ಜಾವ ಸದ್ದಿಲ್ಲದೇ ಜಮೀನಿಗೆ ನುಗ್ಗಿ ಉತ್ತಮ ಹಾರ್ಟ್ ವುಡ್ ಹೊಂದಿರುವ 13 ಶ್ರೀಗಂಧ ಮರಗಳನ್ನು ಕತ್ತರಿಸಿ ಹಾಕಿ ಎರಡು ಮರಗಳನ್ನು ದೋಚಿ ಪರಾರಿಯಾಗಿದ್ದಾರೆ.

ಅಂದಾಜು 8 ರಿಂದ10 ಲಕ್ಷ ರೂ.ಗಳು ಬೆಲೆಬಾಳುವ ಮರಗಳು ಕಳ್ಳತನ ಆಗಿವೆ ಎಂದು ಅಂದಾಜಿಸಲಾಗಿದೆ. ಕಳ್ಳರ ಪತ್ತೆಗಾಗಿ ಸ್ಥಳೀಯ ಕುಷ್ಟಗಿ ಠಾಣೆ ಪೊಲೀಸರಿಗೆ ದೂರು ಸಲ್ಲಿಸಲಾಗಿದೆ. ಅದೇರೀತಿ ಸಾಮಾಜಿಕ ಅರಣ್ಯ ಇಲಾಖೆಯ ವಲಯ ಅಧಿಕಾರಿಗಳಿಗೂ ಪ್ರತ್ಯೇಕವಾಗಿ ದೂರು ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದ ಜಮೀನಿನ ಮಾಲೀಕ ಶಿವಸಂಗನಗೌಡ ಶಿವನಗುತ್ತಿ ಅವರು, ರಾಜ್ಯ ಸರ್ಕಾರ ಸ್ವಾಮ್ಯದ ಮೈಸೂರಿನ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (ಕೆ.ಎಸ್. ಡಿ.ಎಲ್) ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡು ವಾರದೊಳಗೆ ಶ್ರೀಗಂಧ ಮರಗಳ ಕಟಾವು ಪ್ರಕ್ರಿಯೆ ನಡೆಯುವ ಹಂತದಲ್ಲಿತ್ತು. ಆದರೆ, ನಮಗೆ ತಿಳಿದಂತೆ ಮಾಡಿಕೊಂಡ ರಕ್ಷಣೆ ಮಧ್ಯೆ ಶ್ರೀಗಂಧ ಮರಗಳ ಕಳ್ಳತನ ಘಟನೆ ನಡೆದಿದೆ.

  • ಲಕ್ಷಾಂತರ ರೂಪಾಯಿಗಳ ಸಾಲಸೋಲ ಮಾಡಿ ದಶಕಗಳ ಕಾಲ ಕಷ್ಟಪಟ್ಟು ಬೆಳೆಸಿದ ಶ್ರೀಗಂಧ ಮರಗಳ ರಕ್ಷಣೆಗೆ ರೈತರ ನೆರವಿಗೆ ಸರ್ಕಾರ ಮುಂದಾಗಬೇಕು. ಜೊತೆಗೆ ಬೆಲೆಬಾಳುವ ಮರಗಳು ಬೆಳೆದ ಜಮೀನಿನ ರೈತರಿಗೆ ಸಂಬಂಧಿಸಿದ ಇಲಾಖೆಯಿಂದ ಹಲವು ಬಿಗಿ ನಿಯಮಗಳನ್ನು ರೂಪಿಸಿದ್ದು, ಸಡಲೀಕರಣ ಮಾಡಿ ಬೆಳೆಗಾರರಿಗೆ ಅನುಕೂಲ ಮಾಡಿಕೊಡಬೇಕು ಎಂದು ಜಮೀನಿನ ಮಾಲೀಕ ಶಿವಸಂಗನಗೌಡ ಶಿವನಗುತ್ತಿ ಅವರು ಆಗ್ರಹಿಸಿದ್ದಾರೆ.

ಅರಣ್ಯ ಅಧಿಕಾರಿ ಭೇಟಿ: ಸಾಮಾಜಿಕ ವಲಯ ಅರಣ್ಯ ಇಲಾಖೆಯ ಅಧಿಕಾರಿ ಮಹಮ್ಮದ್ ರೀಯಾಜ್ ಹಾಗೂ ಸಿಬ್ಬಂದಿ ಶ್ರೀಗಂಧ ಮರಗಳ ಕಳ್ಳತನ ಮಾಡಿದ ಜಮೀನಿಗೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಶ್ರೀಗಂಧ ಬೆಳೆ ರಕ್ಷಣೆಗೆ ರೈತರು ಮುಂಜಾಗ್ರತಾ ಕ್ರಮವಾಗಿ ಶ್ವಾನ ಸಾಕಬೇಕು, ಸಿಸಿಟಿವಿ ಅಳವಡಿಸಬೇಕು, ಜಮೀನಿನಲ್ಲಿ ವಾಸ್ತವ್ಯ ಹೂಡಬೇಕು ಎಂಬುದು ಸೇರಿದಂತೆ ಇತರೆ ಮುಂಜಾಗ್ರತಾ ಕ್ರಮಗಳ ಕುರಿತು ಮಾಹಿತಿ ನೀಡಿದರು.