ಕುಷ್ಟಗಿ | ಕನ್ನಡ ಸಾಹಿತ್ಯಕ್ಕೆ ಜೈನ ಕವಿಗಳ ಕೊಡುಗೆ ಅಪಾರ – ನಟರಾಜ ಸೋನಾರ

ಸಂಗಮೇಶ ಮುಶಿಗೇರಿ

ಸುದ್ದಿ ಸಮರ್ಪಣ |

ಕುಷ್ಟಗಿ : ಕನ್ನಡ ಸಾಹಿತ್ಯ ಬೆಳವಣಿಗೆಗೆ ಜೈನ ಕವಿಗಳ ಕೊಡುಗೆ ಅಪಾರವಾಗಿದೆ ಎಂದು ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಹಾಗೂ ಶಿಕ್ಷಕ ನಟರಾಜ ಸೋನಾರ ಅವರು ಹೇಳಿದರು.

ಅವರು ಪಟ್ಟಣದ ಶ್ರೀಮರಿಶಾಂತವೀರ ಸ್ವತಂತ್ರ ಮಹಿಳಾ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ದಿನ ದಿ.ಪಾರ್ಶ್ವನಾಥ ಗೋಗಿ ಹಾಗೂ ಪತ್ನಿ ದಿ.ಪದ್ಮಾವತಿ ಪಾರ್ಶ್ವನಾಥ ಗೋಗಿ ಇವರ ಸ್ಮರಣಾರ್ಥ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ “ಕನ್ನಡದಲ್ಲಿ ಜೈನ ಕವಿಗಳು” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
ಪ್ರಾಚೀನ ಕಾವ್ಯ, ಗದ್ಯ, ಕೃತಿಗಳು ಹೀಗೇ ಕನ್ನಡ ಸಾಹಿತ್ಯ ಶ್ರೀಮಂತ ಗೊಳ್ಳುವಲ್ಲಿ ಪಂಪ, ರನ್ನ, ಪೊನ್ನ ಜನ್ನ, ನಯಸೇನಂತಹ ಜೈನ ಕವಿಗಳ ಕೊಡುಗೆ ಅಪಾರವಾಗಿದೆ ಎಂದು ಬಣ್ಣಿಸಿದರು.

ಕಾರ್ಯಕ್ರಮ ಉದ್ಧಾಟಿಸಿದ ಸಿದ್ರಾಮಪ್ಪ ವಂದಾಲಿ ಅವರು ಮಾತನಾಡಿ, ಮೊಬೈಲ್ ಗೀಳಿಗೆ ಒಳಗಾಗಿರುವ ಜನರು ಅದರಿಂದ ಹೊರಬರಬೇಕು. ಪುಸ್ತಕಗಳನ್ನು ಓದುವ ರೂಢಿ ಬೆಳೆಸಿಕೊಳ್ಳಬೇಕು. ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ ಮೂಡಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ವಿರೇಶ ಬಂಗಾರಶೆಟ್ಟರ ಮಾತನಾಡಿ, ಹಿರಿಯರ ಸ್ಮರಣೆ ಮಾಡಿಕೊಳ್ಳಲು ಕನ್ನಡ ಸಾಹಿತ್ಯ ಪರಿಷತ್ತು ಪ್ರತಿ ವರ್ಷ ಕನ್ನಡ ಸಾಹಿತ್ಯ ವಿಷಯಗಳ ಕುರಿತು ದತ್ತಿ ಉಪನ್ಯಾಸ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರಲಾಗುತ್ತಿದೆ. ಇಂತಹ ಕಾರ್ಯಕ್ರಮಗಳು ಹೆಚ್ಚಾಗಿ ಮೂಡಿಬರಲು ಎಲ್ಲರ ಸಹಕಾರ ಅಗತ್ಯ. ಆಸಕ್ತರು ದತ್ತಿ ದಾನಿಗಳಾಗಬಹುದು ಎಂದು ಹೇಳಿರು.

ಮುಖ್ಯ ಅತಿಥಿಗಳಾಗಿ ಕೆ.ಎಂ.ಹಿರೇಮಠ, ಕೆಬಿಸ್ಥಾವರಮಠ, ಶಿವಯ್ಯ ಗಂಧದಮಠ, ದತ್ತಿದಾನಿ ಶಾಂತರಾಜ್ ಜೈನ್, ಕುಮಾರ ಬಡಿಗೇರ, ನಾಗರಾಜ ಬಡಿಗೇರ, ರಾಜು ಲಮಾಣಿ ಉಪಸ್ಥಿತರಿದ್ದರು. ಸಂಗೀತ ಬಳಗದ ಶಿವಲೀಲಾ ಹಿರೇಮಠ ಹಾಗೂ ಸಂಜನಾ ಸ್ಥಾವರಮಠ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಕಸಾಪ ಕಾರ್ಯದರ್ಶಿ ಮಹೇಶ ಜಿ.ಹೆಚ್. ನಿರೂಪಿಸಿದರು. ಉಪನ್ಯಾಸಕರು, ವಿದ್ಯಾರ್ಥಿ/ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.