ಕುಷ್ಟಗಿ | ಪಿಂಜಾರ/ನದಾಫ್ ಪ್ರತ್ಯೇಕ ನಿಗಮಕ್ಕೆ ಅನುದಾನ ಒದಗಿಸಿ : ಸರ್ಕಾರಕ್ಕೆ ಮನವಿ

ಸಂಗಮೇಶ ಮುಶಿಗೇರಿ
ಸುದ್ದಿ ಸಮರ್ಪಣ |

ಕುಷ್ಟಗಿ : ಪಿಂಜಾರ/ನದಾಫ್ ಪ್ರತ್ಯೇಕ ನಿಗಮ ಹಾಗೂ ಇತರ 13 ಜಾತಿಗಳ ಅಭಿವೃದ್ಧಿ ನಿಗಮಕ್ಕೆ ಅವಶ್ಯ ಇರುವ ಅನುದಾನವನ್ನು ಒದಗಿಸಿ ಎಂದು ರಾಜ್ಯ ಸರ್ಕಾರಕ್ಕೆ ರಾಜ್ಯ ಪಿಂಜಾರ/ನದಾಫ್ ಸಂಘ ತಾಲೂಕು ಘಟಕ ಒತ್ತಾಯಿಸಿದೆ.

ಪಟ್ಟಣದ ತಾಲೂಕಾಡಳಿತ ಸೌಧದಲ್ಲಿ ಸೋಮವಾರ ತಹಸೀಲ್ದಾರ್ ಕಾರ್ಯಾಲಯದಲ್ಲಿ ಸಮಾವೇಶಗೊಂಡ ಸಂಘದ ಪದಾಧಿಕಾರಿಗಳು ಹಾಗೂ ಸಮುದಾಯದವರು ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ / ಜಿಲ್ಲಾಧಿಕಾರಿ ಮುಖಾಂತರ ಸಲ್ಲಿಸಿದರು.

ಹಾಲಿ ಸರಕಾರವು ಬಡವರ ಪರ ಸ್ಪಂಧಿಸುವ ಹಾಗೂ ಸಾಮಾಜಿಕ ನ್ಯಾಯವನ್ನು ನೀಡುವ ದಿಟ್ಟವಾದ ಸರಕಾರವೆಂದು ಆಡಳಿತಕ್ಕೆ ಬಂದಿದೆ. ಆದರೆ, ನಿಗಮಕ್ಕೆ ಈವರೆಗೂ ಯಾವುದೇ ಅನುದಾನ ನೀಡುತ್ತಿಲ್ಲ. ರಾಜ್ಯದಲ್ಲಿ ಸುಮಾರು 25 ಲಕ್ಷಗಳ ಜನಸಂಖ್ಯೆ ಹೊಂದಿದ ಅತ್ಯಂತ ಬಡ ಸಮಾಜಗಳನ್ನು ಕಡೆಗಣಿಸಿ ಪಿಂಜಾರ/ನದಾಫ್ ಸಮಾಜಕ್ಕೆ ಅನ್ಯಾಯ ಮಾಡುತ್ತಿದೆ. ಸಾಮಾಜಿಕ ಕಳಕಳಿಯುಳ್ಳ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅತ್ಯಂತ ಹಿಂದುಳಿದ ಹಾಗೂ ಶೋಷಿತ ಈ ಸಮಾಜವನ್ನು ಕಡೆಗಣಿಸದೇ ಸಮಾಜದ ಹಿತಾಸಕ್ತಿವಹಿಸಬೇಕು. ಕಷ್ಟಗಳನ್ನು ಗುರುತಿಸಿ, ಜನಸಂಖ್ಯೆ ಆಧಾರದ ಮೇಲೆ ಯೋಜನೆಗಳನ್ನು ರೂಪಿಸಲು ತಕ್ಷಣ “ಪಿಂಜಾರ/ನದಾಫ್ ಪ್ರತ್ಯೇಕ ನಿಗಮ” ಕ್ಕೆ ಅವಶ್ಯ ಇರುವ ಅನುದಾನವನ್ನು ನೀಡಬೇಕು ಎಂದು ಬರೆದ ಮನವಿ ಪತ್ರದಲ್ಲಿ ವಿನಂತಿಸಿದ್ದಾರೆ. ಬೇಡಿಕೆಗೆ ಸ್ಪಂಧಿಸದೇ ಇದ್ದಲ್ಲಿ ರಾಜ್ಯ ಸರಕಾರ ಹಿಂದುಳಿದ ಸಮಾಜಗಳಿಗೆ ಘೋರ ಅನ್ಯಾಯ ಎಸಗುತ್ತಿರುವ ಬಗ್ಗೆ ರಾಜ್ಯಾದ್ಯಂತ ಬಹಿರಂಗವಾಗಿ ಪ್ರತಿಭಟನೆ, ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಮನವಿ ಪತ್ರದಲ್ಲಿ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ರಾಜ್ಯ ಸರ್ಕಾರಕ್ಕೆ ಬರೆದ ಮನವಿ ಪತ್ರವನ್ನು ಗ್ರೇಡ್-2 ತಹಸೀಲ್ದಾರ್ ಮುರಳೀಧರ ಮುಕ್ತೇದಾರ ಅವರು ಸ್ವೀಕರಿಸಿದರು. ಈ ವೇಳೆ ರಾಜ್ಯ ಪಿಂಜಾರ/ನದಾಫ್ ಸಂಘದ ತಾಲೂಕು ಘಟಕ ಅಧ್ಯಕ್ಷ ಮೈಬೂಬಸಾಬ ವೈ. ನೆರೆಬೆಂಚಿ, ಕಾರ್ಯದರ್ಶಿ ಯಮನೂರಸಾಬ್ ಹಿರೇಗೊನ್ನಾಗರ, ಬುಡನಸಾಬ ನೆರೇಬೆಂಚಿ, ಹುಸೇನಸಾಬ ನೆರೇಬೆಂಚಿ, ಯಮನೂರಸಾಬ ಕಂದಕೂರು, ಮೋದಿನಸಾಬ ಮ್ಯಾದರಡೊಕ್ಕಿ, ದಾವಲಸಾಬ ಜೂಲಕುಂಟಿ, ಹುಸೇನಸಾಬ ಹುಲಿಯಾಪೂರು, ಫಕೀರಸಾಬ ಶಾಖಾಪೂರು ಇತರರಿದ್ದರು.