ಸಂಗಮೇಶ ಮುಶಿಗೇರಿ
ಸುದ್ದಿ ಸಮರ್ಪಣ |
ಕುಷ್ಟಗಿ : ವಿದ್ಯಾರ್ಥಿಗಳು ಪ್ರಾದೇಶಿಕ, ಐತಿಹಾಸಿಕ ಪ್ರಜ್ಞೆ ಬೆಳೆಸಿಕೊಂಡು ಸ್ವಾತಂತ್ರ್ಯ ಹೋರಾಟದ ಇತಿಹಾಸ ಹಾಗೂ ಐತಿಹಾಸಿಕ ಶಿಲ್ಪ, ಶಿಲಾಶಾಸನಗಳ ಅರಿಯಲು ಮುಂದಾಗಬೇಕು ಎಂದು ಶಿಕ್ಷಕ ಸಾಹಿತಿ ಡಾ.ಕೆ.ಶರಣಪ್ಪ ನಿಡಶೇಸಿ ಅವರು ಹೇಳಿದರು.
ಅವರು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹೈದರಾಬಾದ್-ಕರ್ನಾಟಕ ಪ್ರಾಂತ್ಯ ಸ್ವಾತಂತ್ರ್ಯ ಹೋರಾಟಗಾರ ಪರಮಪೂಜ್ಯ ಮಹಾತಪಸ್ವಿ ಮುರಡಿ ಭೀಮಜ್ಜ ಅವರ 68ನೇ ಪುಣ್ಯತಿಥಿ ಹಾಗೂ ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಮಾಜಿ ಶಾಸಕ ಪುಂಡಲೀಕಪ್ಪ ಜ್ಞಾನಮೋಟೆ ಅವರ 11ನೇ ಪುಣ್ಯಸ್ಮರಣೆ ಪ್ರಯುಕ್ತ ಶ್ರೀ ಮುರಡಿ ಭೀಮಜ್ಜ ಪುಣ್ಯಸ್ಮರಣೆ ಆಚರಣೆ ಸಮಿತಿ ವತಿಯಿಂದ ಆಯೋಜಿಸಿದ್ದ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು.
ಹೈದರಾಬಾದ್ ಕರ್ನಾಟಕ ಪ್ರಾಂತ್ಯ ವಿಮೋಚನೆಗಾಗಿ ಈ ಭಾಗದ ಮುರಡಿ ಭೀಮಜ್ಜ ಅವರ ಮಾರ್ಗದರ್ಶನದಲ್ಲಿ ಶಿಬಿರಾಧಿಪತಿ ಪುಂಡಲೀಕಪ್ಪ ಜ್ಞಾನಮೋಟೆ ಸೇರಿದಂತೆ ಅನೇಕ ಭೂಗತ ಹೋರಾಟಗಾರರು ರಜಾಕಾರರ ವಿರುದ್ದ ತೀವ್ರ ಹೋರಾಟ ಕೈಗೊಂಡರು. ಬ್ರಿಟಿಷ್ ಆಡಳಿತಕ್ಕೊಪಡುತಿದ್ದ ಗಜೇಂದ್ರಗಡದ ಗುಡ್ಡದ ಗುಹೆಯೊಂದರಲ್ಲಿ ಶಿಬಿರ ತೆರೆದು ಹೋರಾಟದ ರೂಪರೇಶಗಳನ್ನು ಹಾಕಿಕೊಳ್ಳತಿದ್ದರು. ಕೊಲೆ, ಸುಲಿಗೆ, ಅತ್ಯಾಚಾರ ನಡೆಸುತಿದ್ದ ರಜಾಕಾರರ ಅಟ್ಟಹಾಸ ಮೆಟ್ಟಿನಿಂತು ನಾಕಾ ಕಚೇರಿ ಸುಡುವುದು, ಸುಂಕದಕಟ್ಟೆ ದೋಚುವುದು ಸೇರಿದಂತೆ ಅನೇಕ ಕಾರ್ಯಾಚರಣೆ ನಡೆಸಿದ ಕುರುಹುಗಳು ನಮ್ಮ ಭಾಗದಲ್ಲಿ ಸಿಗುತ್ತವೆ. ಈ ಭಾಗದ ಸ್ವಾತಂತ್ರ್ಯ ಹೋರಾಟಗಾರರ ಜೀವನಗಾಥೆ ಕುರಿತು ‘ಸ್ವಾತಂತ್ರ್ಯಾಮೃತ’ ಮತ್ತು ‘ಸ್ವಾತಂತ್ರ್ಯ ಸೇನಾನಿ ಪುಂಡಲೀಕಪ್ಪ ಜ್ಞಾನಮೋಟೆ’ ಎಂಬ ಕೃತಿಗಳನ್ನು ರಚಿಸಲಾಗಿದೆ. ವಿದ್ಯಾರ್ಥಿಗಳು ಅವುಗಳನ್ನು ಓದಿ ದೇಶಪ್ರೇಮ ಅಳವಡಿಸಿಕೊಳ್ಳಬೇಕು. ತಾಲೂಕಿನ ಪ್ರತಿಯೊಂದು ಊರುಗಳಲ್ಲಿ ಸಿಗುವ ಶಿಲ್ಪ, ಶಿಲಾಶಾಸನಗಳನ್ನು ಅರಿತು ಪ್ರಾದೇಶಿಕ ಐತಿಹಾಸಿಕ ಪ್ರಜ್ಞೆ ಮೆರೆಯಬೇಕು ಎಂದು ಹೇಳಿದರು.
ಪ್ರಾಂಶುಪಾಲ ಡಾ.ಎಸ್.ವಿ. ಡಾಣಿ ಅವರು ಮಾತನಾಡಿ, 1857ರಿಂದ 1947ರ ವರೆಗೆ ಅನೇಕ ಸ್ವಾತಂತ್ರ್ಯ ಹೋರಾಟಗಾರರು ಕೈಗೊಂಡ ಮಂದಗಾಮಿ, ತೀವ್ರಗಾಮಿ, ಕ್ರಾಂತಿಕಾರಿ ಈ ಮೂರು ಹಂತದ ಚೆಳುವಳಿಯಿಂದಾಗಿ ಭಾರತವು 15 ಆಗಸ್ಟ 1947 ರಂದು ಬ್ರಿಟಿಷ್ ಆಡಳಿತದಿಂದ ಸ್ವಾತಂತ್ರ್ಯ ವನ್ನು ಪಡೆಯಿತು. ಆದರೆ, ನಿಜಾಮನ ಕಪಿಮುಷ್ಟಿಯಲ್ಲಿದ್ದ ಹೈದರಾಬಾದ್ – ಕರ್ನಾಟಕ ಪ್ರಾಂತ್ಯಕ್ಕೆ ಸ್ವಾತಂತ್ರ್ಯ ಸಿಕ್ಕಿರಲಿಲ್ಲ. ಭಾರತ ಒಕ್ಕೂಟ ವ್ಯವಸ್ಥೆಗೆ ಒಳಪಡಲೊಪ್ಪದ ನಿಜಾಮ ಸರ್ಕಾರ ಪ್ರತ್ಯೇಕ ರಾಷ್ಟ್ರ ನಿರ್ಮಾಣಕ್ಕೆ ಮುಂದಾದಾಗಿತು. ಆಗ ಸರ್ಧಾರ ವಲ್ಲಭಭಾಯಿ ಪಟೇಲರ ದಿಟ್ಟ ನಿರ್ಧಾರ ಹಾಗೂ ಈ ಭಾಗದ ಹೋರಾಟದ ರುವಾರಿ ಪ್ರಾದೇಶಿಕ ಕಾಂಗ್ರೆಸ್ ಅಧ್ಯಕ್ಷ ಸ್ವಾಮಿರಮಾನಂದ ಮತ್ತು ಸ್ಥಳೀಯ ಮುರಡಿ ಭೀಮಜ್ಜ ಅವರ ನೇತೃತ್ವದಲ್ಲಿ ಶಿಬಿರಾಧಿಪತಿ ಪುಂಡಲೀಕಪ್ಪ ಜ್ಞಾನಮೋಟೆ ಆದಿಯಾಗಿ ಕೊಪ್ಪಳ ಜಿಲ್ಲೆಯ ಅನೇಕ ಹೋರಾಟಗಾರರ ತ್ಯಾಗ ಬಲಿದಾನದ ಪ್ರತೀಕವಾಗಿ 1948 ಸೆಪ್ಟೆಂಬರ್ 17 ರಂದು ಸ್ವಾತಂತ್ರ್ಯ ದೊರೆಯಿತು. ಹಾಗಾಗಿ ರಾಷ್ಟ್ರೀಯ ಹೋರಾಟವಷ್ಟೇಯಲ್ಲದೇ ಸ್ಥಳೀಯ ಮಟ್ಟದಲ್ಲಿ ಹೋರಾಡಿದ ನಮ್ಮ ಜನರ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ನಾವು ಅರಿಯಬೇಕು. ಹೋರಾಟದ ಕೆಚ್ಚೆದೆಯನ್ನು ಮೂಡಿಸಿಕೊಳ್ಳಬೇಕು. ನಮಗೆ ಸಿಕ್ಕಂತ ಸ್ವಾತಂತ್ರ್ಯವನ್ನು ಉಳಿಸಿಕೊಂಡು ಸಮಾಜದಲ್ಲಿ ಸಮಾನತೆ ತರುವುದರ ಮೂಲಕ ನಮ್ಮ ಬದುಕನ್ನು ಕಟ್ಟಿಕೊಳ್ಳಬೇಕಾಗಿದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಶ್ರೀ ಮುರಡಿ ಭೀಮಜ್ಜ ಪುಣ್ಯಸ್ಮರಣೆ ಆಚರಣೆ ಸಮಿತಿ ಸಂಚಾಲಕ ಅಮೃತರಾಜ ಜ್ಞಾನಮೋಟೆ ಪ್ರಾಸ್ತಾವಿಕ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಕಸಾಪ ತಾಲೂಕಾಧ್ಯಕ್ಷ ವೀರೇಶ ಬಂಗಾರಶೆಟ್ಟರ್, ಘೋರ್ಪಡೆ, ನಿವೃತ್ತ ಶಿಕ್ಷಕ ಚೆನ್ನಪ್ಪ ಬಜಿ, ಉಪನ್ಯಾಸಕಿ ವಿದ್ಯಾವತಿ ಕಾಲೇಜು ಉಪನ್ಯಾಸಕರು ಉಪಸ್ಥಿತರಿದ್ದರು. ಕಾಲೇಜು ಸಿಬ್ಬಂದಿ ಹಾಗೂ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಇದ್ದರು. ಉಪನ್ಯಾಸಕ ಮಹಾಂತೇಶ ಗವಾರಿ ನಿರೂಪಿಸಿದರು.