ಬಂಡರಗಲ್ | ಶಿವಶರಣ ನಿಜಸುಖಿ ಹಡಪದ ಅಪ್ಪಣ್ಣ ಜಯಂತಿ ಆಚರಣೆ ಸಂಭ್ರಮ

ಸಂಗಮೇಶ ಮುಶಿಗೇರಿ
ಸುದ್ದಿ ಸಮರ್ಪಣ |

ಕುಷ್ಟಗಿ : ಜಗಜ್ಯೋತಿ ಬಸವಣ್ಣನವರ ಆಪ್ತ ಕಾರ್ಯದರ್ಶಿ ವಚನಕಾರ ಶಿವಶರಣ ನಿಜಸುಖಿ ಹಡಪದ ಅಪ್ಪಣ್ಣನವರ 890ನೇ ಜಯಂತಿಯನ್ನು ತಾಲೂಕಿನ ಬಂಡರಗಲ್ ಗ್ರಾಮದಲ್ಲಿ ಹಡಪದ ಸಮುದಾಯ ಬಾಂಧವರು ಸೋಮವಾರ ಸಂಭ್ರಮದಿಂದ ಆಚರಿಸಿದರು.

ಗ್ರಾಮದ ವೃತ್ತದಲ್ಲಿ ಶಿವಶರಣ ನಿಜಸುಖಿ ಹಡಪದ ಅಪ್ಪಣ್ಣನವರ ಹಾಗೂ ಅವರ ಧರ್ಮಪತ್ನಿ ಶರಣೆ ಲಿಂಗಮ್ಮನವರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಪುಷ್ಪ ಸಮರ್ಪಿಸುವ ಮೂಲಕ ಗಣ್ಯರು ಗೌರವ ಸಮರ್ಪಿಸಿದರು.

ಈ ವೇಳೆ ಮಾತನಾಡಿದ ಯುವಮುಖಂಡ ದೊಡ್ಡಬಸನಗೌಡ ಪಾಟೀಲ್ ಬಯ್ಯಾಪೂರು ಹಾಗೂ ಜಿ.ಪಂ. ಮಾಜಿ ಸದಸ್ಯ ಕೆ.ಮಹೇಶ ಅವರು, 12ನೇ ಶತಮಾನದಲ್ಲಿ ಅಣ್ಣ ಬಸವಣ್ಣನವರ ನೇತೃತ್ವದ ಬಸವಾದಿ ಶರಣರು ಸಮಾಜದಲ್ಲಿನ ಕಂದಾಚಾರ, ಮೌಢ್ಯ, ಮೇಲು-ಕೀಳುಗಳನ್ನು ಮೆಟ್ಟಿನಿಂತು ಸಮಸಮಾಜ ನಿರ್ಮಾಣಕ್ಕೆ ನಾಂದಿ ಹಾಡಿದರು. ವಚನ ಸಾಹಿತ್ಯದ ಮೂಲಕ ಕಾಯಕ ನಿಷ್ಠೆ, ನಡತೆ, ನೋಟ, ನುಡಿ, ನಿರ್ಮಲ ಭಕ್ತಿಯಿಂದ ಶ್ರೇಷ್ಟರು ಎಂದು ಪ್ರತಿಪಾದಿಸಿದರು. ಅಂತಹ ಮಹಾನ್ ಶರಣರ ಜೀವನ ಸಂದೇಶ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಎಲ್ಲರೂ ಸಮಾನರೆಂಬ ಮನೋಭಾವನೆಯಿಂದ ಬದುಕಬೇಕಾಗಿದೆ ಎಂದರು.

ಈ ವೊಂದು ಸರಳ ಅರ್ಥಪೂರ್ಣ ಆಚರಣೆ ಕಾರ್ಯಕ್ರಮದಲ್ಲಿ ಜಿ.ಪಂ. ಮಾಜಿ ಸದಸ್ಯ ಪ್ರಕಾಶ್ ರಾಥೋಡ್, ಬ್ಲಾಕ್ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷ ಮಹಾಂತೇಶ ಅಗಸಿಮುಂದಿನ, ತಾ.ಪಂ. ಮಾಜಿ ಸದಸ್ಯ ಸುರೇಶ ಕುಂಟನಗೌಡ್ರು, ಬಿಜೆಪಿ ಮಂಡಲ ಮಾಜಿ ಅಧ್ಯಕ್ಷ ಬಸವರಾಜ್ ಹಳ್ಳೂರು, ಕಲ್ಯಾಣ ಕರ್ನಾಟಕ ಗಣಿ ಮಾಲಕರ ಸಂಘದ ಅಧ್ಯಕ್ಷ ಬಾಲನಗೌಡ ಪೊಲೀಸ್ ಪಾಟೀಲ್, ಹಡಪದ ಸಮಾಜ ಸಂಘದ ಅಧ್ಯಕ್ಷ ಸೋಮಪ್ಪ ಹಡಪದ, ಹಿರಿಯರಾದ ಬಸಯ್ಯ ಹಿರೇಮಠ, ರಾಮಲಿಂಗಪ್ಪ ಬಿಸಿಲದಿನ್ನಿ, ರಂಗಪ್ಪ ವಣಗೇರಿ, ಮಲ್ಲಯ್ಯ ಹಿರೇಮಠ, ಶಿವಸಂಗಪ್ಪ ಔಡಲ್, ಅಂದಯ್ಯ ಹಿರೇಮಠ, ಬಸವರಾಜ ಬಂಡರಗಲ್ ಸೇರಿದಂತೆ ಕಾಟಾಪುರ, ಹೂಲಗೇರಿ, ಮನ್ನೇರಾಳ, ಸೇಬಿನ ಕಟ್ಟಿ, ಕಬ್ಬರಗಿ, ಬೀಳಗಿ, ಯರಿಗೂನಾಳ, ಅಂಟರಠಾಣಾ, ಹುಚ್ಚನೂರ ಗ್ರಾಮಗಳ ಹಡಪದ ಸಮಾಜದ ಹಿರಿಯರು ಮುಖಂಡರು ಉಪಸ್ಥಿತರಿದ್ದರು.