ಕುಷ್ಟಗಿ | ರಾಜ್ಯಮಟ್ಟದ ಕೃಷಿ ಪ್ರಶಸ್ತಿಗೆ ಅರ್ಜಿ ಆಹ್ವಾನ

ಸಂಗಮೇಶ ಮುಶಿಗೇರಿ
ಸುದ್ದಿ ಸಮರ್ಪಣ |

ಕುಷ್ಟಗಿ : ಕೃಷಿ ಇಲಾಖೆಯಿಂದ 2024-25ನೇ ಸಾಲಿನ ರಾಜ್ಯಮಟ್ಟದ ಕೃಷಿ ಪ್ರಶಸ್ತಿಗಾಗಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಈ ಕುರಿತು ಕೃಷಿ ಸಹಾಯಕ ನಿರ್ದೇಶಕರಾದ ಅಜ್ಮೀರ್ ಅಲಿ ಅವರು ಹೊರಡಿಸಿರುವ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕೃಷಿ ಪ್ರಶಸ್ತಿ ಕಾರ್ಯಕ್ರಮದಡಿ ಮುಂಗಾರು ಹಂಗಾಮಿನ ರಾಜ್ಯ ಮಟ್ಟದ ಬೆಳೆ ಸ್ಪರ್ಧೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಈ ಕೃಷಿ ಪ್ರಶಸ್ತಿ ಸ್ಪರ್ಧೆಗೆ ಆಸಕ್ತ ರೈತ ಮತ್ತು ರೈತ ಮಹಿಳೆಯರು ಪ್ರತ್ಯೇಕ ಅರ್ಜಿ ಸಲ್ಲಿಸಬಹುದಾಗಿದೆ. ಕೃಷಿ ಇಲಾಖೆಯ ಕೆ-ಕಿಸಾನ್ ಪೋರ್ಟಲನಲ್ಲಿ ಸಲ್ಲಿಸಬಹುದು. ಅಥವಾ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ತಮ್ಮ ಎಫ್.ಐ.ಡಿ ಯನ್ನು ಬಳಸಿಕೊಂಡು ಕೃಷಿ ಪ್ರಶಸ್ತಿ ಯೋಜನೆಯಡಿಯಲ್ಲಿ ಅರ್ಜಿಯನ್ನು ಸಲ್ಲಿಸಬಹುದು.

ರಾಜ್ಯ ಮಟ್ಟದ ಬೆಳೆ ಸ್ಪರ್ಧೆಗೆ ಆಯ್ಕೆ ಮಾಡಿರುವ ಮುಂಗಾರು ಹಂಗಾಮಿನ ಬೆಳೆಗಳಾದ ನೀರಾವರಿ ಮತ್ತು ಮಳೆಯಾಶ್ರಿತ ಭತ್ತ ಹಾಗೂ ಮಳೆಯಾಶ್ರಿತ ಮುಂಗಾರು ಬೆಳೆಗಳಾದ ಶೇಂಗಾ, ನವಣೆ, ಸಜ್ಜೆ, ಪೂರ್ಣ ಬೆಳೆಯ ತೊಗರಿ ಹಾಗೂ ಮುಸುಕಿನ ಜೋಳ, ಈ ಎಲ್ಲಾ ಬೆಳೆಗಳನ್ನು ಮುಂಗಾರು ಹಂಗಾಮಿನಲ್ಲಿ ಆಯ್ಕೆ ಮಾಡಲಾಗಿದೆ. ಪ್ರಸಕ್ತ ಸಾಲಿನಿಂದ ಕೃಷಿ ಪ್ರಶಸ್ತಿಯಡಿ ಬೆಳೆ ಸ್ಪರ್ಧೆಗೆ ಅರ್ಜಿ ಶುಲ್ಕವನ್ನು ರದ್ದು ಪಡಿಸಲಾಗಿರುತ್ತದೆ.
ಅರ್ಜಿ ಸಲ್ಲಿಸಲಿಚ್ಛಿಸುವ ರೈತರು ಕೃಷಿ ಪ್ರಶಸ್ತಿಯ ಮುಂಗಾರು ಹಂಗಾಮಿ ಸ್ಪರ್ಧೆಗೆ ಆಗಸ್ಟ್ 31ರ ರೊಳಗಾಗಿ ಅರ್ಜಿ ಸಲ್ಲಿಬೇಕು.

ಸೂಚನೆ : ಕೃಷಿ ಪ್ರಶಸ್ತಿಯಲ್ಲಿ ಭಾಗವಹಿಸಲು ಇಚ್ಚಿಸುವವರು ರಾಜ್ಯ ಕೃಷಿ ಕ್ಷೇತ್ರದಲ್ಲಿ ವಿನೂತನ/ಹೊಸ ಅನ್ವೇಷಣೆ ಮತ್ತು ಸೃಜನಾತ್ಮಕ ಕಾರ್ಯಗಳಿಂದ ಗಮನಾರ್ಹ ಸಾಧನೆ ಮಾಡಿರುವ ಮತ್ತು ರೈತ ಸಮುದಾಯದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದವರಾಗಿರಬೇಕು. ಭಾಗವಹಿಸುವವರ ಸಂಶೋಧನೆ/ಸಾಧನೆಗಳು ಮೂಲ ಸ್ವರೂಪದ್ದಾಗಿರಬೇಕು. ಬೇರೆಯವರ ಸಾಧನೆಗಿಂತ ವಿಭಿನ್ನವಾಗಿರಬೇಕು. ಅಲ್ಲದೇ ಅವರ ಸಂಶೋಧನೆಗಳು/ಸಾಧನೆಗಳು ವ್ಯಾಪಕವಾಗಿ ಅಳವಡಿಸಲ್ಪಟ್ಟು ಕೃಷಿ ಕ್ಷೇತ್ರದ ಏಳಿಗೆಗೆ ಕಾರಣವಾಗಿರಬೇಕು. ಈ ಹಿಂದೆ ಕೃಷಿ ಪಂಡಿತ ಪ್ರಶಸ್ತಿ (ಪ್ರಥಮ, ದ್ವೀತಿಯ, ತೃತೀಯ ಹಾಗೂ ಉದಯೋನ್ಮುಖ) ಪಡೆದವರು ಮತ್ತೆ ಸ್ಪರ್ಧಿಸುವಂತಿಲ್ಲ. ಕೇಂದ್ರ ಅಥವಾ ರಾಜ್ಯ ಸರ್ಕಾರಿ ಸೇವೆಯಲ್ಲಿರುವ ಯಾವುದೇ ಇಲಾಖೆ/ವಿಶ್ವವಿದ್ಯಾಲಯ/ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ನೌಕರರು ಮತ್ತು ಅವರ ಕುಟುಂಬದ ಸದಸ್ಯರು ಸ್ಪರ್ಧೆಯಲ್ಲಿ ಭಾಗವಹಿಸುವಂತಿಲ್ಲ. ಆದರೆ ಕೃಷಿ, ಮತ್ತು ಕೃಷಿ ಸಂಬಂಧಿತವಾದ ಜಲಾನಯನ ಅಭಿವೃದ್ಧಿ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ ಮತ್ತು ಪಶು ವೈದ್ಯಕೀಯ ಇಲಾಖೆ/ವಿಶ್ವವಿದ್ಯಾಲಯ/ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ತಾಂತ್ರಿಕ ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿ ನಿವೃತ್ತರಾದ ನೌಕರರು ಮತ್ತು ಅವರ ಕುಟುಂಬ ವರ್ಗದವರನ್ನು ಹೊರತುಪಡಿಸಿ ಈ ಇಲಾಖೆಗಳಲ್ಲಿನ ನಿವೃತ್ತ ತಾಂತ್ರಿಕೇತರ ನೌಕರರು ಮತ್ತು ಈ ಇಲಾಖೆಗಳನ್ನು ಹೊರತುಪಡಿಸಿ ಉಳಿದ ಇಲಾಖೆಗಳ ನಿವೃತ್ತ ನೌಕರರು ಮತ್ತು ಅವರ ಕುಟುಂಬದವರು ಭಾಗವಹಿಸಬಹುದು ಎಂದು ಕೃಷಿ ಸಹಾಯಕ ನಿರ್ದೇಶಕರಾದ ಅಜ್ಮೀರ್ ಅಲಿ ಅವರು ತಿಳಿಸಿದ್ದಾರೆ.