ಸಂಗಮೇಶ ಮುಶಿಗೇರಿ
ಸುದ್ದಿ ಸಮರ್ಪಣ |
ಕುಷ್ಟಗಿ : ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕೊಪ್ಪಳ ಜಿಲ್ಲಾ ಶಾಖೆಯಿಂದ ಸಾರ್ವಜನಿಕರಿಗೆ ಶುಕ್ರವಾರ ಡೆಂಗ್ಯೂ ಜ್ವರ ಜಾಗೃತಿ ಮೂಡಿಸಲಾಯಿತು.
ಡೆಂಗ್ಯೂ ಜ್ವರಗಳು ಕಾಣಿಸಿಕೊಂಡ ಪ್ರದೇಶವಾದ ತಾಲೂಕಿನ ಮೆಣಸಗೇರಿ ತಾಂಡಾದಲ್ಲಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮಕ್ಕೆ ನಿಡಶೇಸಿ-ಕುಷ್ಟಗಿ ವ ಗೆಜ್ಜೆಬಾವಿ ಪಶ್ಚಕಂತಿ ಹಿರೇಮಠದ ಅಭಿನವ ಕರಿಬಸವ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು.
ಬಳಿಕ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆಯ ನಿರ್ದೇಶಕ ಡಾ.ರವಿಕುಮಾರ ದಾನಿ ಅವರು, ಅನೈರ್ಮಲ್ಯತೆಯಿಂದ ಕೂಡಿರುವ ಪ್ರದೇಶಗಳಲ್ಲಿ ಜನ ವಾಸವಾಗಿರುವ ನಿವಾಸಗಳಿಗೆ ಭೇಟಿ ನೀಡಿದರು. ಮನೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛತೆ ಕಾಪಾಡುವುದು, ಪ್ಲಾಸ್ಟಿಕ್ ಡಬ್ಬಗಳಲ್ಲಿ, ಟೀ ಕಪ್ಪು, ಟೆಂಗಿನ ಚಿಪ್ಪುಗಳಲ್ಲಿ ಸಂಗ್ರಹಗೊಂಡ ಮಳೆ ನೀರಲ್ಲಿ ಹಾಗೂ ಮನೆಯ ಮುಂದಿನ ಬ್ಯಾರಲ್, ಸಿಮೇಂಟ್ ಡೋಣಿಗಳಲ್ಲಿ ಸಂಗ್ರಹಿಸಿಟ್ಟ ತಿಳಿ ನೀರಿನಲ್ಲಿ ಇಡೀಸ್ ಲಾರ್ವಾ ಸೊಳ್ಳೆಗಳು ಉತ್ಪತ್ತಿಯಾಗಿ ಡೆಂಗ್ಯೂ, ಮಲೇರಿಯಾ ಜ್ವರ ಹರಡಲು ಕಾರಣವಾಗುತ್ತದೆ. ಹಾಗಾಗಿ ಅವುಗಳನ್ನು ತೆರವುಗೊಳಿಸಿ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಬೇಕು ಜೊತೆಗೆ ವಾಸಿಸುವ ಪರಿಸರ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ನಿವಾಸಿಗಳಿಗೆ ಜಾಗೃತಿ ಮೂಡಿಸಿದರು. ನಂತರ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಘಟಕದ ವತಿಯಿಂದ ಉಚಿತವಾಗಿ ಸೊಳ್ಳೆ ಪರದೆ ಹಾಗೂ ಸೊಳ್ಳೆ ಬತ್ತಿಗಳನ್ನು ವಿತರಿಸಿದರು.
ಈ ವೇಳೆ ರೆಡ್ ಕ್ರಾಸ್ ಸಂಸ್ಥೆ ತಾಲೂಕು ನಿರ್ದೇಶಕ ಡಾ.ಬಸವರಾಜ ವಸ್ತ್ರದ, ಡಾ.ಮಂಜುನಾಥ ಗೊಂಡಬಾಳ, ಮಹಾಂತಯ್ಯ ಅರಳೆಲೆಮಠ, ಅಪ್ಪಣ್ಣ ನವಲೆ, ಮಲ್ಲಿಕಾರ್ಜುನ ಬಳಿಗಾರ, ಈರಣ್ಣ ಸಬರದ, ಸುರೇಶ ಸೇಬಿನಕಟ್ಟಿ ಇತರರಿದ್ದರು.