ಸಂಗಮೇಶ ಮುಶಿಗೇರಿ
ಸುದ್ದಿ ಸಮರ್ಪಣ |
ಕುಷ್ಟಗಿ : ಯುವಕರು ದುಶ್ಚಟಗಳಿಂದ ದೂರವಿದ್ದು, ಮಾನಸಿಕ ಮತ್ತು ದೈಹಿಕ ಆರೋಗ್ಯ ಉತ್ತಮವಾಗಿಟ್ಟುಕೊಳ್ಳಬೇಕು ಎಂದು ಪ್ರಾಂಶುಪಾಲ ಡಾ.ಎಸ್.ವಿ. ಡಾಣಿ ಅವರು ಹೇಳಿದರು.
ಅವರು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಡಿಟೋರಿಯಂ ಹಾಲನಲ್ಲಿ ಗುರುವಾರ ಡಾ.ಮಹಾಂತ ಶಿವಯೋಗಿಗಳ ಜನ್ಮದಿನ ಪ್ರಯುಕ್ತ ನಡೆದ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಕ್ಕಳೊಂದಿಗೆ, ಯುವಕರೊಂದಿಗೆ ಇರುವ ಉಪನ್ಯಾಸಕರು, ಶಿಕ್ಷಕರು ಅವರಿಗೆ ವ್ಯಸನ, ಚಟಗಳಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮ, ಹಾನಿಗಳ ಕುರಿತು ಜಾಗೃತಿ ಮೂಡಿಸಿದರೆ ಚಟಗಳಿಂದ ಮುಕ್ತರಾಗುತ್ತಾರೆ ಅವರ ಬದುಕು ಬಂಗಾರವಾಗುತ್ತದೆ. ಇದರ ಜವಾಬ್ದಾರಿ ತೆಗೆದುಕೊಳ್ಳಬೇಕು. ವ್ಯಸನ ಮುಕ್ತ ಸಮಾಜ ಮಾಡಲು ತಮ್ಮ ಕಾಯಕ ಮಾಡಿ ಎಂದು ಲಿಂ.ಡಾ.ಮಹಾಂತ ಶಿವಯೋಗಿಗಳು ತಮ್ಮ 71ನೇ ಜನ್ಮ ದಿನ ಆಚರಣೆ ಕಾರ್ಯಕ್ರಮದಲ್ಲಿ 101 ಶಿಕ್ಷಕರನ್ನು ಸನ್ಮಾನಿಸಿ ಆಶೀರ್ವಾದಿಸಿದ್ದನ್ನು ಸ್ಮರಿಸಿದರು.
ಅಪ್ಪಟ ಬಸವತತ್ವ ಅಭಿಮಾನಿಯಾಗಿದ್ದ ಇಳಕಲ್ಲಿನ ಚಿತ್ತರಗಿ ಶ್ರೀ ವಿಜಯಮಹಾಂತೇಶ್ವರ ಸಂಸ್ಥಾನ ಮಠದ ಲಿಂ.ಡಾ.ಮಹಾಂತ ಶಿವಯೋಗಿಗಳು ಪ್ರತಿಯೊಬ್ಬರೂ ಕಾಯಕ ತತ್ವ ಅಳವಡಿಸಿಕೊಳ್ಳಬೇಕು. ಗಳಿಸಿದ ಸಂಪತ್ತನ್ನು ಸದ್ವಿನಿಯೋಗ ಮಾಡಿಕೊಂಡು ಮಾನಸಿಕವಾಗಿ, ದೈಹಿಕವಾಗಿ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಬೇಕು ಎಂಬ ವಿಚಾರದೊಂದಿಗೆ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಶ್ರೀಗಳು ಮುಂದಾಗಿದ್ದರು. ರಾಜ್ಯಾ ಸೇರಿದಂತೆ ದೇಶ ವಿದೇಶಗಳಲ್ಲಿ ಸಂಚರಿಸಿ ದುಶ್ಚಟಗಳನ್ನು ತಮ್ಮ ಮಹಂತ ಜೋಳಿಗೆಯಲ್ಲಿ ಭಿಕ್ಷೆಯಾಗಿ ಹಾಕಿಸಿಕೊಂಡು ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದರು.
ಹಾಗಾಗಿ ಅವರ ಜನ್ಮದಿನದಂದು ರಾಜ್ಯ ಸರ್ಕಾರ ಆಗಸ್ಟ್ 01 ರಂದು ವ್ಯಸನ ಮುಕ್ತ ದಿನಾಚರಣೆಯನ್ನಾಗಿ ಆಚರಿಸುತ್ತಿದೆ. ಯುವಕರು ಶ್ರೀಗಳ ವಿಚಾರ ಧಾರೆಗಳನ್ನು ಅಳವಡಿಸಿಕೊಂಡು ಜಾಗೃತರಾಗಿ ದುಶ್ಚಟಗಳಿಂದ ದೂರವಿರಬೇಕು. ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡಿಕೊಂಡು ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಹೇಳಿದರು.
ಬಳಿಕ ವಿದ್ಯಾರ್ಥಿಗಳಿಗೆ ಮದ್ಯಪಾನ, ಮಾದಕವಸ್ತು ಹಾಗೂ ತಂಬಾಕು ಉತ್ಪನ್ನಗಳನ್ನು ತ್ಯಜಿಸುತ್ತೇನೆ. ಇನ್ನೆಂದೂ ಇವುಗಳನ್ನು ಮುಟ್ಟುವುದಿಲ್ಲ ಎಂದು ಪ್ರತಿಜ್ಞಾ ವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಭೋಜರಾಜ, ರವಿ, ಅಶೋಕ ಕೆಂಚರೆಡ್ಡಿ, ರಾಘವೇಂದ್ರ ಪತ್ತಾರ, ವಿದ್ಯಾವತಿ ಗೋಟೂರು, ಶಿವಗಂಗಮ್ಮ, ರತ್ನಮ್ಮ ಬೆದವಟ್ಟಿ, ಸಕ್ಕೂಬಾಯಿ, ಶೇಖರಪ್ಪ ದೊಡ್ಡಮನಿ, ಮಂಜುನಾಥ, ಶಿವಪ್ರಸಾದ ಜುಂಜಾ, ಅಧ್ಯಾಪಕರು, ಸಿಬ್ಬಂದಿವರ್ಗ, ವಿದ್ಯಾರ್ಥಿಗಳು ಭಾಗವಹಿಸಿದ್ದರು.