ಸಂಗಮೇಶ ಮುಶಿಗೇರಿ
ಸುದ್ದಿ ಸಮರ್ಪಣ |
ಕುಷ್ಟಗಿ : ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕುಷ್ಟಗಿ ತಾಲೂಕು ಘಟಕದಿಂದ ಆ.5 ರಂದು ಬೆಳಿಗ್ಗೆ ರಾಜ್ಯ ಮಟ್ಟದ ಹೋರಾಟ ಕುರಿತು ಹಾಗೂ ಶಿಕ್ಷಕರಿಗೆ ಆಗಿರುವ ಅನ್ಯಾಯದ ಕುರಿತು ಕುಷ್ಟಗಿ ವಿಧಾನಸಭಾ ಕ್ಷೇತ್ರದ ಶಾಸಕ, ತಹಸೀಲ್ದಾರ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗೆ ಚಳುವಳಿ ಪತ್ರ ವಿತರಣೆಗೆ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕು ಘಟಕ ನಿರ್ಧರಿಸಿದೆ.
ಈ ಕುರಿತು ಸಂಘದ ತಾಲೂಕು ಘಟಕದ ಅಧ್ಯಕ್ಷ ಮಲ್ಲಪ್ಪ ಕುದರಿ ಅವರ ಅಧ್ಯಕ್ಷತೆಯಲ್ಲಿ ಸಂಘದ ಪದಾಧಿಕಾರಿಗಳು, ಪ್ರಾಥಮಿಕ ಶಾಲೆಗಳ ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರು ಗುರು ಭವನದಲ್ಲಿ ಸಭೆ ನಡೆಸಿ 2017ರ ಹೊಸ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಈ ಮೊದಲು ನೇಮಕಾತಿ ಹೊಂದಿದವರಿಗೆ ಪೂರ್ವಾನ್ವಯಗೊಳಿಸಬಾರದು. ಆದರೆ, ಸರ್ಕಾರ ಪೂರ್ವಾನ್ವಯಗೊಳಿಸಿದ್ದರಿಂದ ಪ್ರಾಥಮಿಕ ಶಾಲಾ ಸೇವಾನಿರತ ಶಿಕ್ಷಕರಿಗೆ ಅನ್ಯಾಯವಾಗಿರುವುದನ್ನು ಖಂಡಿಸಿದರು.
ತಮಗಾದ ಅನ್ಯಾಯ ಸರಿಪಡಿಸಲು ಮತ್ತು ಸೇವಾ ಜೇಷ್ಠತೆಯ ಆಧಾರದ ಮೇಲೆ ಮುಖ್ಯ ಶಿಕ್ಷಕರಿಗೆ ಬಡ್ತಿ ನೀಡಬೇಕು ಎಂಬ ಬೇಡಿಕೆಗಳ ಕುರಿತು ರಾಜ್ಯ ಘಟಕ ಇದೇ ಆಗಸ್ಟ್ 12 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಒಂದು ದಿನದ ಬೃಹತ್ ಹೋರಾಟ ಹಮ್ಮಿಕೊಂಡಿದೆ. ಈ ನಿಟ್ಟಿನಲ್ಲಿ ಶಿಕ್ಷಕರೆಲ್ಲಾ ಒಗ್ಗಟ್ಟಾಗಿ ನಮ್ಮ ಬೇಡಿಕೆಗಳನ್ನು ಸರ್ಕಾರ ಈಡೇರಿಸಲು ಗಮನಸೆಳೆಯಲು ಹೋರಾಡುವ ಅನಿವಾರ್ಯತೆ ಒದಗಿಬಂದಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ರಾಜ್ಯ ಘಟಕ ಹಾಗೂ ಜಿಲ್ಲಾ ಘಟಕದ ನಿರ್ದೇಶನದಂತೆ ಮೊದಲನೇ ಹಂತವಾಗಿ ಆಗಸ್ಟ್ 05 ಸೋಮವಾರ ಬೆಳಿಗ್ಗೆ ತಾಲೂಕು ಹಂತದಲ್ಲಿ ಸ್ಥಳೀಯ ಶಾಸಕ, ತಹಸೀಲ್ದಾರ್ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ ಪತ್ರ ಸಲ್ಲಿಸುವ ಚಳುವಳಿ ನಡೆಸುವ ಕುರಿತು ರಾಜ್ಯ ಕಮೀಟಿ ನಿರ್ಧಾರ ಕೈಗೊಂಡಿದೆ ಎಂದ ಅಧ್ಯಕ್ಷ ಮಲ್ಲಪ್ಪ ಕುದರಿ ಅವರು, ಅಂದು ಶಿಕ್ಷಕರು ಬೆಳಿಗ್ಗೆ ಅರ್ಧ ದಿನ ಕರ್ತವ್ಯಕ್ಕೆ ರಜೆ ಸಲ್ಲಿಸಿ ಕಾಲ್ನಡಿಗೆ ಮೂಲಕ ಮನವಿ ಪತ್ರ ಸಲ್ಲಿಸುವ ಚಳವಳಿಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಹೈದರಲಿ ಜಾಲಿಹಾಳ, ಪ್ರಮುಖರಾದ ನಿಂಗಪ್ಪ ಗುನ್ನಾಳ, ಲಕ್ಷ್ಮಣ ಪೂಜಾರಿ, ಅಮರೇಗೌಡ ನಾಗೂರ, ಶಿವಪ್ಪ ವಾಗ್ಮೊರೆ, ಗುರಪ್ಪ ಕುರಿ, ರುದ್ರೇಶ ಬೂದಿಹಾಳ, ಸಿದ್ದರಾಮಪ್ಪ ಅಮರಾವತಿ, ಅಮರೇಗೌಡ ಸಣ್ಣನಿಂಗಪ್ಪನವರ, ರಾಘವೇಂದ್ರ ಮೆದಿಕೇರಿ, ಮಂಜುನಾಥ ಲಕ್ಷ್ಮೇಶ್ವರ, ಮಂಜುನಾಥ ಬಾವಿ, ಎಸ್.ಎಸ್. ತೆಮ್ಮಿನಾಳ, ಭರ್ಮಪ್ಪ ಪರಸಾಪುರ, ಶಂಕರ ಉಪ್ಪಾರ, ಕಳಕ ಮಲ್ಲೇಶ ಭೋಗಿ, ಮಂಜಪ್ಪ ಪೂಜಾರಿ ಸೇರಿದಂತೆ ಮುಖ್ಯಶಿಕ್ಷಕರು ಹಾಗೂ ಶಿಕ್ಷಕರು ಹಾಜರಿದ್ದರು.