– ಶರಣಪ್ಪ ಕುಂಬಾರ.
ಕೊಪ್ಪಳ : ಬಸವರಾಜ ಬೊಮ್ಮಾಯಿ ಎಂಬ ಜೆಡಿಎಸ್ ಮೂಲದ (ರಾಜಕಾರಣಿಗೆ) ಡಾಗರೇಜ್ ಸಸಿಗೆ ‘ಮುಖ್ಯಮಂತ್ರಿ’ ಎನ್ನುವ ದ್ರಾಕ್ಷಿ ಕಡ್ಡಿಯನ್ನು ಯಡಿಯೂರಪ್ಪನವರು ‘ಕಸಿ’ ಮಾಡುವ ಮೂಲಕ ಸಿಎಂ ಪಟ್ಟ ಕಟ್ಟಿದ್ದಾರೆ..!?
(ಇದೊಂದು ಪಕ್ಕಾ ತೋಟಗಾರಿಕೆ ಪದ್ಧತಿ ಹೋಲಿಕೆಯಲ್ಲಿ ಕರ್ನಾಟಕ ರಾಜ್ಯದ ಸದ್ಯದ ರಾಜಕೀಯ ಪರಿಸ್ಥಿತಿ ಕುರಿತಾದ ವಿಶ್ಲೇಷಣೆಯ ಸಣ್ಣ ಪ್ರಯತ್ನ ನಿಮಗಾಗಿ..!)
ಬೆಟ್ಟ ಗುಡ್ಡಗಳಲ್ಲಿ ನೀರಿಲ್ಲದೆ ವರ್ಷವಿಡೀ ಹಚ್ಚು ಹಸಿರಾಗಿ ಬದುಕುಳಿದು ಬೆಳೆಯುವ ವಿಶಿಷ್ಟವಾದ ‘ಡಾಗರೇಜ್’ ಸಸಿ ಬಗ್ಗೆ ಈಗ ಹೇಳಲೇಬೇಕು. ಇಂತಹ ಮಹತ್ವ ಗುಣ ಹೊಂದಿದ ಅರಣ್ಯ ಸಸಿಗೆ ದ್ರಾಕ್ಷಿ ಕಡ್ಡಿಗಳನ್ನು ಕಸಿ ಮಾಡಿ, ರೈತರು ಕಡಿಮೆ ಪ್ರಮಾಣದ ನೀರಿನಲ್ಲಿ ದ್ರಾಕ್ಷಿ ಬೆಳೆಸಿ ಅತಿ ಹೆಚ್ಚು ಇಳುವರಿ ಪಡೆಯುವುದು ಸಾಮಾನ್ಯ. ಅದರಂತೆ ರಾಜ್ಯದಲ್ಲಿಯೂ ಕೂಡಾ ಇದನ್ನೇ ಹೋಲುವಂತೆ ರಾಜಕಾರ ನಡೆದಿದೆ ಎಂದು ಹೇಳಬಹುದಾಗಿದೆ. ಕುಟುಂಬ ರಾಜಕಾರಣ ಹಾಗೂ ಸರ್ವಾಧಿಕಾರಿ ಧೋರಣೆಯುಳ್ಳ ಎನ್ನಲಾದ ಜೆಡಿಎಸ್ ಪಕ್ಷದ ಸುಪ್ರೀಂ ಆಗಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಗರಡಿಯಲ್ಲಿ ಪಳಗಿದ ಹಾಗೂ ಇವರ ಪಕ್ಕಾ ಅಭಿಮಾನಿ ಬಸವರಾಜ ಬೊಮ್ಮಾಯಿ ಅವರನ್ನು ಡಾಗರೇಜ್ ಸಸಿಗೆ ಹೋಲಿಕೆ ಮಾಡಲಾಗಿದೆ. ಡಾಗರೇಜ್ ಸಸಿಯಂತೆ ಏನೆಲ್ಲಾ ಇಲ್ಲವಾದರೂ ರಾಜಾಕಾರಣದಲ್ಲಿ ಬದುಕುಳಿದು, ನಿರತಂತರ ಕಠಿಣ ಹೋರಾಟಗಳ ಮಧ್ಯೆ ಹಲವು ಏಳು ಬೀಳುಗಳ ನಡುವೆ ರಾಜಕಾರಣದಲ್ಲಿ ಹೆಮ್ಮರವಾಗಿ ಬೆಳೆದಿರುವ ಬಸವರಾಜ ಬೊಮ್ಮಾಯಿ ಎಂಬ ‘ಡಾಗರೇಜ್’ ಸಸಿಗೆ ನೀರೂಣಿಸುವ ಮೂಲಕ ಸಾಕಷ್ಟು ಅಳೆದು ತೂಗಿ ಯಡಿಯೂರಪ್ಪನವರು ಸಿಎಂ ಪಟ್ಟವನ್ನು ಈಗಾಗಲೇ ಕಟ್ಟಿದ್ದಾರೆ ಎಂದು ಹೇಳಬಹುದು. ರೈತರು ಸಾಕಷ್ಟು ನೀರಿಕ್ಷೆಯಿಟ್ಟುಕೊಂಡು ಕಸಿ ಮಾಡಿದ ದ್ರಾಕ್ಷಿ ಬೆಳೆಗೆ ಕಲ್ಲು ಕಂಬಗಳನ್ನು ನಡಹಾಕಿ, ಟೆಲಿಫೋನ್ ಮಾದರಿ ಅಥವಾ ರೂಫ್ ಮಾದರಿಯಲ್ಲಿ ಹೊದಿಕೆ ಹಾಕಿ, ಸಮೃದ್ಧಿ ಬೆಳೆಯ ಜೊತೆಗೆ ಅಧಿಕ ಇಳುವರಿ ಪಡೆಯುವ ದ್ರಾಕ್ಷಿ ಬೆಳೆಗಾರರ ‘ಸ್ವಾರ್ಥ’ ಕನಸುಗಳಂತೆ ಯಡಿಯೂರಪ್ಪನವರು ಕೂಡಾ ತಮ್ಮ ಮಕ್ಕಳ ಭವಿಷ್ಯದ ‘ಸ್ವಾರ್ಥ’ ರಾಜಕಾರಣ ತಲೆಯಲ್ಲಿಯಿಟ್ಟುಕೊಂಡು ದ್ರಾಕ್ಷಿ ರೂಪದಲ್ಲಿ ಸಿಎಂ ಬೊಮ್ಮಾಯಿ ಅವರನ್ನು ಬೆಳೆಸಲು ಮುಂದಾಗಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಅನ್ನದಾತ ತಾನು ಬೆಳೆದ ದ್ರಾಕ್ಷಿ ಫಸಲು ‘ಹುಳಿ’ ಆಗಬಾರದೆಂದು ತೆಗೆದುಕೊಳ್ಳುವ ‘ತಿನ್ನಿಂಗ್’ ಮತ್ತು ಪೆಸ್ಟಿಸೈಡ್ ನಂತೆ ರಾಜ್ಯ ಸಚಿವ ಸಂಪುಟದಲ್ಲಿ ತನಗಿಷ್ಟವಾದವರನ್ನು ಅಧಿಕಾರದ ಮುನ್ನಾಲೆಗೆ ಕರೆತರುವ ಇರಾದೆ ಯಡಿಯೂರಪ್ಪನವರದ್ದಾಗಿದೆ ಎಂಬ ಮಾತುಗಳು ವಿಧಾನಸಭೆ ಮೊಗಸಾಲೆಯಲ್ಲಿ ಕೇಳಿ ಬಂದಿವೆ. ಕೃಷಿಕರ ಆಶಯದಂತೆ ದ್ರಾಕ್ಷಿ ಫಸಲು ‘ಹುಳಿ’ ಆಗುವ ಬದಲಾಗಿ ‘ಸಿಹಿ’ ಆಗುವಂತೆ ಯಡಿಯೂರಪ್ಪನವರು ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡು ಮುಖ್ಯಮಂತ್ರಿ ಗಾದಿಗೆ ಅವಕಾಶಮಾಡಿಕೊಟ್ಟಿರುವ ಬಸವರಾಜ ಬೊಮ್ಮಾಯಿ ಅವರು ಕೂಡಾ ಆಡಳಿತ ನೀಡುವಲ್ಲಿ ರಾಜ್ಯದ ಜನರ ಪಾಲಿಗೆ ದ್ರಾಕ್ಷಿಯಂತೆ ಹುಳಿ ಆಗದೆ, ಸಿಹಿ.. ಸಿಹಿಯಾದ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಕನ್ನಡ ನಾಡಿಗೆ ಹೆಸರಾಗಬೇಕಾಗಿರುವುದು ಬಾಕಿ ಇದೆ..!?.