ಕೊಪ್ಪಳ ಜಿಪಂಗೆ ಇತ್ತೀಚಿಗೆ ಸಿಇಓ ಆಗಿ ಅಧಿಕಾರ ವಹಿಸಿಕೊಂಡಿರುವ ಬಿ.ಫೌಜಿಯಾ ತರನ್ನುಮ್ ಬೆಂಗಳೂರು ಮೂಲದವರು ತಮ್ಮ ಹುಟ್ಟುರಲ್ಲಿಯೇ ಶಿಕ್ಷಣ ಪೂರೈಸಿದ ಇವರು ಐಎಎಸ್ ಮೊದಲ ಪ್ರಯತ್ನದಲ್ಲಿಯೇ ಅದೃಷ್ಟ ಪರೀಕ್ಷೆ ಮೂಲಕ 2012 ರಲ್ಲಿ ಐ.ಆರ್.ಎಸ್ ನಲ್ಲಿ ಮೂರು ವರ್ಷಗಳ ಕಾಲ ಸೇವೆಸಲ್ಲಿಸಿದರು. ಪುನಃ ಐಎಎಸ್ ಕನಸಿನೊಂದಿಗೆ ಸತತ ಪ್ರಯತ್ನದ ಮೂಲಕ 2014 ರಲ್ಲಿ 31 ಸ್ಥಾನನಲ್ಲಿ ಪಾಸ್ ಆಗುವ ಮೂಲಕ 2015 ರಲ್ಲಿ ಉತ್ತರಕನ್ನಡ ಜಿಲ್ಲೆಯಲ್ಲಿ (ತರಬೇತಿ ಜೊತೆಗೆ) ಆಡಳಿತ ಆರಂಭಿಸಿದ ಇವರು ಎಸಿಯಾಗಿ ಚಾಮರಾಜನಗರ ಜಿಲ್ಲೆಯಲ್ಲಿ ಉತ್ತಮ ಸೇವೆ ನೀಡುವ ಮೂಲಕ ಜನಮನ್ನಣೆ ಗಳಿಸಿದರು. ಮುಂದೆ ಕಲಬುರಗಿ ಮಹಾನಗರ ಪಾಲಿಕೆಗೆ ಕಮೀಷನರ್ ಆಗಿ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಿಇಓ ಹಾಗೂ ತೋಟಗಾರಿಕೆ ಇಲಾಖೆ ನಿರ್ದೇಶಕರಾಗಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಾರೆ..!
– ಶರಣಪ್ಪ ಕುಂಬಾರ
ಕೊಪ್ಪಳ : ಜಿಲ್ಲಾ ಪಂಚಾಯಿತಿಆಡಳಿತದಲ್ಲಿ ಹೊಸ ಸಂಚಲನವನ್ನು ಮೂಡಿಸಿದ ಸಿಇಓ ಬಿ.ಫೌಜಿಯಾ ತರನ್ನುಮ್ ಒಬ್ಬ ಮಹಿಳಾ ಖಡಕ್ ಅಧಿಕಾರಿಯಾಗಿ ಹೊರಹೊಮ್ಮಿದ್ದಾರೆ..!
ಇಲ್ಲಿಯವರೆಗೆ ಜಿಡ್ಡು ಗಟ್ಟಿದ ವಾತಾವರಣದಲ್ಲಿದ್ದ ಕೊಪ್ಪಳ ಜಿಲ್ಲಾ ಪಂಚಾಯಿತಿ ಆಡಳಿತದಲ್ಲಿ ಸಾಕಷ್ಟು ಬದಲಾವಣೆ ತರುವ ಮೂಲಕ ಇಡೀ ಆಡಳಿತ ವ್ಯವಸ್ಥೆಗೆ ಚುರುಕು ಮುಟ್ಟಿಸುವಲ್ಲಿ ಸಿಇಓ ಅವರು ಯಶಸ್ವಿಯಾಗಿದ್ದಾರೆ. ಸ್ವತಃ ಸಿಇಓ ಅವರೇ ಜಿಲ್ಲೆಯ ವಿವಿಧ ಗ್ರಾಮಗಳಿಗೆ ತೆರಳುವ ಮೂಲಕ ಅಲ್ಲಿನ ಶಾಲೆಗಳಿಗೆ ಭೇಟಿ ನೀಡಿ, ಅಲ್ಲಿನ ಮಕ್ಕಳಿಗೆ ಕ್ಲಾಸ್ ತೆಗೆದುಕೊಳ್ಳುವುದು ಸೇರಿದಂತೆ ಆಯಾ ಗ್ರಾಮಗಳಲ್ಲಿನ ಕುಡಿಯುವ ನೀರಿನ ಸಮಸ್ಯೆ ಆಲಿಸುವುದು. ರಸ್ತೆ ದುರಸ್ತಿ , ಚರಂಡಿ ಸ್ಚಚ್ಛತೆ, ವಿದ್ಯುತ್ ಇತ್ಯಾದಿ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡುವು ಮೂಲಕ ಅಧಿಕಾರಿಗಳು ಸೇರಿದಂತೆ ಸಾರ್ವಜನಿಕರಿಗೆ ಅಚ್ಚರಿ ಮೂಡಿಸಿದ್ದಾರೆ.
ಸ್ವತಃ ಫೀಲ್ಡ್ ಗೆ : ಐಎಎಸ್ ಅಧಿಕಾರಿಯಾಗಿ ಎಸಿ ರೂಮ್ ಗೆ ಸೀಮಿತವಾಗದೆ ಸ್ವತಃ ತಾವೇ ಫೀಲ್ಡ್ ಗೆ ಇಳಿದು, ಜನರ ಮಧ್ಯದಲ್ಲಿದ್ದುಕೊಂಡು ಸೇವೆ ಸಲ್ಲಿಸುವುದು ಇವರ ವಿಶೇಷತೆ. ಜನರ ಬಳಿ ಇದ್ದುಕೊಂಡು ಸೇವೆ ಸಲ್ಲಿಸಬೇಕೆಂಬ ಮನದಾಸೆಯಿಂದ ಸೇವೆ ಆರಂಭಿಸಿದ ಫೌಜಿಯಾ ಅವರಿಗೆ ಸ್ಥಳದಲ್ಲಿಯೇ ಜನರ ಸಮಸ್ಯೆಗಳನ್ನು ಬಗೆಹರಿಸಿಕೊಡುವುದರಲ್ಲಿ ಇವರಿಗಿರುವ ವಿಶೇಷ ತೃಪ್ತಿ. ಕಲ್ಯಾಣ ಕರ್ನಾಟಕದ ವಿಶೇಷ ಅನುದಾನ ಸೇರಿದಂತೆ ವಿವಿಧ ಅನುದಾನಗಳ ಮೂಲಕ ಜಿಲ್ಲೆಯನ್ನ ಅಭಿವೃದ್ಧಿ ಕಡೆಗೆ ಕೊಂಡೊಯ್ಯಲು ನಿತ್ಯ ಶ್ರಮಿಸುತ್ತಿದ್ದಾರೆ.
ಸಿಇಓ ಶಿಕ್ಷಕಿಯಾಗಿ : ನಿತ್ಯ ಕೆಲಸದ ಒತ್ತಡದ ಮಧ್ಯದಲ್ಲಿಯೂ ಸಿಇಓ ಅವರು ಬಿಡುವಿನ ವೇಳೆ ದಾರಿ ಮಧ್ಯದಲ್ಲಿನ ಶಾಲೆ-ಕಾಲೇಜಗಳಿಗೆ ಹಾಗೂ ವಸತಿ ನಿಲಯಗಳಿಗೆ ಭೇಟಿ ಕೊಡುವುದು ಅಲ್ಲದೆ, ಅಲ್ಲಿನ ವ್ಯವಸ್ಥೆ ಕಡೆಗೆ ಗಮನ ಹರಿಸುವುದಲ್ಲದೆ, ಸ್ವಲ್ಪ ಸಮಯ ಬೋಧನೆ ಮಾಡುವುದು ಕೂಡಾ ಇವರ ಆಸಕ್ತಿಗಳಲ್ಲಿ ಒಂದಾಗಿದೆ.
ಖಾತ್ರಿಗೆ ಚುರುಕು : ಗ್ರಾಮೀಣ ಪ್ರದೇಶದ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಸಮರ್ಪಕ ಜಾರಿಗೆ ಇವರು ಸಾಕಷ್ಟು ಚುರುಕು ನೀಡಿದ್ದಾರೆ. ಯೋಜನೆಯ ಸದುಪಯೋಗದ ಜೊತೆಗೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಪ್ರೇರಣೆ ನೀಡುತ್ತಿದ್ದಾರೆ. ಇದರಲ್ಲಿನ ಭ್ರಷ್ಟಾಚಾರ ಮುಕ್ತವಾಗಬೇಕೆಂಬುವುದು ಇವರ ಆಶಯ ಕೂಡಾ ಹೌದಾಗಿದೆ.
ಮಕ್ಕಳು ಮುಖ್ಯವಾಹಿನಿಗೆ : ಅಂಗನವಾಡಿ ಸೇರಿದಂತೆ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮುಖ್ಯವಾಹಿನಿಗೆ ತರುವುದು ಕೂಡಾ ಇವರ ಮುಖ್ಯ ಉದ್ಧೇಶವಾಗಿದೆ. ಶಿಕ್ಷಣದಿಂದ ಯಾವೊಬ್ಬ ಮಗು ಕೂಡಾ ವಂಚಿತರಾಗಬಾರದು ಎಂಬ ಉದ್ಧೇಶದಿಂದ ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ ಕೈಗೊಳ್ಳಲಾಗಿದೆ ಶೇಕಡಾ ನೂರರಷ್ಟು ದಾಖಲಾತಿಗೆ ತಕ್ಕಂತೆ ಹಾಜರಾತಿ ಇವರ ಗುರಿಯಾಗಿದೆ.
ಫಲಿತಾಂಶಕ್ಕೆ ಪ್ರೇರೇಪಣೆ : ಎಸ್.ಎಸ್.ಎಲ್.ಸಿ ಸೇರಿದಂತೆ ಪಿಯುಸಿ ಇತ್ಯಾದಿ ಪರೀಕ್ಷೆಯಲ್ಲಿ ಜಿಲ್ಲೆಯ ಮಕ್ಕಳ ಫಲಿತಾಂಶ ಶೇಕಡಾ ನೂರರಷ್ಟು ಆಗಬೇಕು ಎಂಬ ಮಹಾದಾಸೆಯಿಂದ ಈಗಾಗಲೇ ಜಿಲ್ಲೆಯಲ್ಲಿರುವ ಶಾಲಾ ಮುಖ್ಯ ಗುರುಗಳಿಗೆ ಹಾಗೂ ವಿಷಯ ಪರಿಣಿತರಿಗೆ ನೇರವಾಗಿ ಸಂವಾದ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ ಎನ್ನುವ ಸಿಇಓ ತರುನ್ನುಮ್ ಅವರು ಜಿಲ್ಲೆಯ ಫಲಿತಾಂಶ ಸುಧಾರಣೆ ಗೊಳಿಸುವ ಮೂಲ ಉದ್ಧೇಶ ಎನ್ನುತ್ತಾರೆ.
3ನೇ ಅಲೆಗೆ ಬಲೆ : ಜಗತ್ತನ್ನೇ ತಲ್ಲಣಗೊಳಿಸಿದ ಕೊರೋನಾ ಮಹಾಮಾರಿ ನಿಯಂತ್ರಣಕ್ಕೆ ಈಗಾಗಲೇ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. 3 ನೇ ಅಲೆಗಾಗಿ ಜಿಲ್ಲಾಡಳಿತ ರೋಗದ ವಿರುದ್ಧ ಹೋರಾಡಲು ಸಜ್ಜಾಗಿದೆ. ರೋಗದ ಅರಿವು, ಜಾಗೃತಿ ಮತ್ತು ಲಸಿಕೆ ಕುರಿತು ಕ್ರಮ ಕೈಗೊಳ್ಳಲಾಗಿದೆ. ಮಕ್ಕಳನ್ನು ಗುರಿಯಾಗಿಸಿಕೊಂಡು ಸಾಕಷ್ಟು ಚಿಂತನೆ ನಡೆಸಲಾಗಿದೆ. ಕೊರೋನಾ ಮೂರನೇ ಅಲೆಯ ನಿಯಂತ್ರಣಕ್ಕೆ ಬಲೆ ಹೆಣೆಯಲಾಗಿದೆ ಎಂದು ಸಿಇಓ ಬಿ.ಫೌಜಿಯಾ ತರನ್ನುಮ್ ‘ಕೃಷಿ ಪ್ರಿಯ’ ಪತ್ರಿಕೆಗೆ ಸ್ಪಷ್ಟಪಡಿಸಿದರು.