– ಶರಣಪ್ಪ ಕುಂಬಾರ.
ಕೊಪ್ಪಳ: ಶಿಕ್ಷಕರ ಸಂಘದ ಹೆಸರು ಹೇಳಿಕೊಂಡು ಪ್ರತಿ ದಿನ ಕೊಪ್ಪಳ ಬಿಇಓ ಕಚೇರಿಯಲ್ಲೇ ಕೆಲ ಶಿಕ್ಷಕರು ಕಾಲಹರಣ ಮಾಡುತ್ತಿದ್ದಾರೆ ಇವರ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ರಾಷ್ಟ್ರೀಯ ಸಂಗೊಳ್ಳಿ ರಾಯಣ್ಣ ಸೇನೆಯ ತಾಲೂಕಾ ಅಧ್ಯಕ್ಷ ಕುಬೇರ ಮಜ್ಜಿಗಿ ಸೇರಿದಂತೆ ಪದಾಧಿಕಾರಿಗಳು ಕೊಪ್ಪಳ ಜಿಪಂ ಸಿಇಓ ಬಿ.ಫೌಜಿಯಾ ತರುನ್ನಮ್ ಅವರಿಗೆ ಮನವಿ ಪತ್ರ ಸಲ್ಲಿಸುವ ಮೂಲಕ ಒತ್ತಾಯಿಸಿದ್ದಾರೆ.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಸಿಸಿ ಟಿವಿ ಅಳವಡಿಸಲಾಗಿದ್ದು ಅವುಗಳು ಸಂಪೂರ್ಣ ನಿಷ್ಕ್ರಿಯವಾಗಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾಹಿತಿ ಅಧಿನಿಯಮದಲ್ಲಿ ಮಾಹಿತಿ ನೀಡಿರುತ್ತಾರೆ. ಸರ್ಕಾರಿ ಹಣವನ್ನು ವ್ಯಯಿಸಿ ಸಿಸಿ ಕ್ಯಾಮೆರಾ ಅಳವಡಿಸಲಾದ ಉದ್ದೇಶ ಇಲ್ಲಿ ಸಂಪೂರ್ಣ ವಿಫಲವಾಗಿದೆ ಆರೋಪಿಸಿದ್ದಾರೆ. “ಕಚೇರಿಯಲ್ಲಿ ಅಳವಡಿಸಲಾದ ಸಿಸಿ ಟಿವಿ ಕ್ಯಾಮೆರಾದ ಹಾರ್ಡ್ ಡಿಸ್ಕ್ ವರ್ಕ್ ಮಾಡದ ಕಾರಣ ದೃಶ್ಯಾವಳಿಗಳ ಮಾಹಿತಿ ಇರುವುದಿಲ್ಲ” ಎಂದು ಬಿಇಓ ಅವರು ಉತ್ತರ ನೀಡಿದ್ದಾರೆ. ಇದರಿಂದ ಅಧಿಕಾರಿಗಳ ಬೇಜವಾಬ್ದಾರಿತನ ಎದ್ದು ಕಾಣುತ್ತದೆ. ಅಲ್ಲದೆ ಶಾಲೆ ಬಿಟ್ಟು ಕಚೇರಿ ಸುತ್ತುವ ಶಿಕ್ಷಕರನ್ನು ರಕ್ಷಿಸುವ ಹುನ್ನಾರ ಇದಾಗಿದೆ ಎಂದು ಆರೋಪಿಸಿದ್ದಾರೆ. ಮಕ್ಕಳಿಗೆ ಪಾಠ ಹೇಳಿ ಅವರ ಭವಿಷ್ಯ ರೂಪಿಸಬೇಕಾದ ಕೆಲ ಶಿಕ್ಷಕರು ಸಂಘದ ಹೆಸರಿನಲ್ಲಿ ರಾಜಕಾರಣ ಮಾಡುತ್ತಿರುವುದು ಕೇಳಿ ಬಂದಿದೆ. ಕಾರಣ ಈ ಕುರಿತು ತನಿಖೆ ನಡೆಸಿ ಇಂಥಹ ಶಿಕ್ಷಕರನ್ನು ಅಮಾನತು ಮಾಡಬೇಕು. ಅವರ ರಕ್ಷಣೆಗೆ ನಿಂತ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಬೇಕು ಹಾಗೂ ನಿಷ್ಕ್ರಿಯವಾದ ಸಿಸಿ ಟಿವಿಗಳನ್ನು ದುರಸ್ತಿ ಮಾಡಬೇಕು. ಅಲ್ಲದೇ ಪ್ರತಿಯೊಂದು ಶಾಲೆಯಲ್ಲೂ ಸಿಸಿ ಟಿವಿ ಅಳವಡಿಸಬೇಕು. ಶಾಲೆಗೆ ಚಕ್ಕರ್ ಹೊಡೆದು, ವಿನಾಕಾರಣ ತಿರುಗುವ ಶಿಕ್ಷಕರ ಮೇಲೆ ಹದ್ದಿನ ಕಣ್ಣು ಇಡಬೇಕು ಎಂದು ಒತ್ತಾಯಪಡಿಸಿದ್ದಾರೆ.
ಸೇನೆಯ ಪದಾಧಿಕಾರಿಗಳಾದ ಸಿ.ಎಸ್.ಲಿಂಗರಾಜ್, ಮಂಜುನಾಥ ಬಂಗಾಳಿ, ಭೀಮಶಿ ದೇವರಮನಿ, ಕೃಷ್ಣ, ವೀರಣ್ಣ, ಮಾರುತಿ, ರಮೇಶ್ ಸೇರಿದಂತೆ ಇತರರು ಇದ್ದರು..!!