ಹೊಸಪೇಟೆ : ರಾಜ್ಯದ 31 ನೇ ಜಿಲ್ಲೆಯಾಗಿ ‘ವಿಜಯನಗರ’ ಇಂದು ಅಧಿಕೃತವಾಗಿ ಜಾರಿಗೆ ಬಂದಿತು. ಹೊಸಪೇಟೆ ನಗರದ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಐತಿಹಾಸಿಕ ವಿದ್ಯಾರಣ್ಯ ಭವ್ಯ ವೇದಿಕೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೂತನ ಜಿಲ್ಲೆಯನ್ನು ಲೋಕಾರ್ಪಣೆಗೊಳಿಸಿದರು. ತುಂಗಭದ್ರಾ ಜಲಾಶಯ ನಿರ್ಮಾಣಕ್ಕೂ ಮುನ್ನ ಒಂದೇ ಸಮುದಾಯ ಹೆಚ್ಚಿರುವ 7 ಓಣಿಗಳಿಂದ ಕೂಡಿದ್ದ ಪುಟ್ಟ ಹೊಸಪೇಟೆ ಗ್ರಾಮವು, ತುಂಗಭದ್ರಾ ಜಲಾಶಯದ ಹಿನ್ನೀರಿನಲ್ಲಿ ಮುಳುಗಿದ ನೂರಾರು ಗ್ರಾಮಗಳ ಕುಟುಂಬಗಳು ಸೇರಿದಂತೆ ಜಲಾಶಯ ನಿರ್ಮಾಣಕ್ಕಾಗಿ ಅಖಂಡ ಆಂದ್ರಪ್ರದೇಶದಿಂದ ಆಗಮಿಸಿದ ಬಹುತೇಕ ಕುಟುಂಬಗಳ ಜಲಾಶಯ ನಿರ್ಮಾಣವಾದ ಬಳಿಕ ಇಲ್ಲಿಯೇ ವಾಸವಾಗಿ ಬೃಹತ್ತಾಗಿ ಬೆಳೆದ ಹೊಸಪೇಟೆ ಇಂದು ತಾಲೂಕಾ ಕೇಂದ್ರವಾಗಿ, ಉಪ ವಿಭಾಗ ಕೇಂದ್ರವಾಗಿದ್ದು ಇಂದು ನಮ್ಮ ಮುಂದೆ ಜಿಲ್ಲಾ ಕೇಂದ್ರದ ಮುಕುಟ ಪ್ರಾಯಕ್ಕೆ ಕಾರಣವಾಗಿದ್ದು ವಿಶೇಷ. ಸ್ಥಳಿಯ ಶಾಸಕ ಹಾಗೂ ಸಚಿವ ಆನಂದ ಸಿಂಗ್ ಮತ್ತು ಹಲವು ಸಂಘ ಸಂಸ್ಥೆಗಳ ಹೋರಾಟದ ಫಲವಾಗಿ ಇಂದು ನೂತನ ವಿಜಯನಗರ ಜಿಲ್ಲೆ ಇತಿಹಾಸ ಪುಟ ಸೇರಿತು. ವಿಶ್ವ ವಿಖ್ಯಾತ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿ ಮೆರೆದಿದ್ದ ಹಂಪಿಯನ್ನೇ ತನ್ನ ಮಡಿಲಲ್ಲಿಟ್ಟುಕೊಂಡ ಈ ನೂತನ ವಿಜಯನಗರ ಜಿಲ್ಲೆಯೊಳಗೆ ಕೊಟ್ಟೂರು, ಕೂಡ್ಲಿಗಿ, ಹೂವಿನ ಹಡಗಲಿ, ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ ತಾಲೂಕುಗಳನ್ನೊಳಗೊಂಡಿರುವ ಜಿಲ್ಲೆಯು ವಿಜಯನಗರದ ಗತ ವೈಭವವನ್ನು ಮರುಕಳಿಸಲಿ ಎಂಬುದಾಗಿ ಸಿ.ಎಂ.ಬಸವರಾಜ ಬೊಮ್ಮಾಯಿ ಅವರು ಆಶೆಯ ವ್ಯಕ್ತಪಡಿಸಿದರು. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸಚಿವರ ತಂಡ, ಹರಗುರ ಶರಣರು, ಸಂತರು ಸೇರಿದಂತೆ ಖ್ಯಾತ ನಾಮರು ನೂತನ ಜಿಲ್ಲೆಯ ಉದಯಕ್ಕೆ ಹಂಪಿ ವಿರೂಪಾಕ್ಷನ ಸನ್ನಿಧಿಯಲ್ಲಿ ಸಾಕ್ಷಿಯಾದರು..!