– ಶರಣಪ್ಪ ಕುಂಬಾರ.
ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ನಾರಿನಾಳ ಗ್ರಾಮದ ಜಮೀನಿನಲ್ಲಿ ಬಂಗಾರದ ಅದಿರು ಪತ್ತೆಯಾಗಿರುವುದು ವಿಶೇಷ..!
ಬಂಗಾರದ ಅದಿರು ಪತ್ತೆಗಾಗಿ ಆಗಮಿಸಿದ ಸಮೀಕ್ಷಾ ತಂಡವು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ನಾರಿನಾಳ ಗ್ರಾಮದ ಜಮೀನಿನಲ್ಲಿ ಬಿಡು ಬಿಟ್ಟಿದೆ. ಬಂಗಾರದ ಅದಿರು ಪತ್ತೆಗಾಗಿ ಸಂಶೋಧನಾ ಕಾರ್ಯವು ಜೋರಾಗಿ ನಡೆದಿದೆ.
ಅದಿರು ಸಮೀಕ್ಷೆಗಾಗಿ ಪರಿಣಿತರ ತಂಡವು ಡಿಗ್ಗಿಂಗ್ ಮೂಲಕ ಪರಿಶೀಲನೆ ಕೈಗೊಂಡಿದೆ. ನಾರಿನಾಳ ಗ್ರಾಮದ ಜಮೀನೊಂದರಲ್ಲಿ ಬಂಗಾರದ ಅದಿರು ಪತ್ತೆಗಾಗಿ ಕೇಂದ್ರ ಸರಕಾರದ ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ ಎಂಬ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳ ಪರಿಣಿತರ ತಂಡವು ಹಗಲಿರಳು ಸಮೀಕ್ಷೆ ಕೈಗೊಂಡಿದೆ. ಈಗಾಗಲೇ 113 ಮೀಟರಗಳಷ್ಟು ಭೂಮಿಯನ್ನು ಆಳ ಕೊರೆದ ತಂಡವು ಬಂಗಾರದ ಅದಿರು ಪತ್ತೆಯಾಗಿರುವ ಮಾಹಿತಿಯನ್ನು ಹೊರಹಾಕಿದೆ. ಭೂಗರ್ಭದಲ್ಲಿನ ಬಹುತೇಕ ಖನಿಜಯುಕ್ತ ಕಲ್ಲುಗಳನ್ನು ಸಮೀಕ್ಷಾ ತಂಡವು ಈಗಾಗಲೇ ಸಂಗ್ರಹಿಸಿದೆ. ಕುಷ್ಟಗಿ ತಾಲೂಕಿನ ಗಡಿಯಲ್ಲಿರುವ ಮ್ಯಾದರಡೊಕ್ಕಿ ಗ್ರಾಮದ ಜಮೀನಿನಲ್ಲಿ ಕಬ್ಬಿಣದ ಅದಿರು ಹೊಂದಿರುವುದು ಪಕ್ಕಾ ಆಗಿರುವಾಗಲೇ.. ಇದೇ ಭಾಗದ ನಾರಿನಾಳ ಗ್ರಾಮ ಸೇರಿದಂತೆ ತಾವರಗೇರಾ ಹೋಬಳಿ ವ್ಯಾಪ್ತಿಯ ಬಹುತೇಕ ಗ್ರಾಮಗಳಲ್ಲಿ ಬಂಗಾರದ ಅದಿರು ಪತ್ತೆಯಾಗಿರುವುದುರಿಂದ ಈ ಭಾಗದ ಜಮೀನುಗಳಿಗೆ ಚಿನ್ನದ ಬೆಲೆ ಬಂದಂತಾಗಿದೆ. ಕಲ್ಲು ಮಿಶ್ರಿತ ಈ ಭಾಗದ ಜಮೀನಿಗೆ ಏಲ್ಲಿಯೂ ಇಲ್ಲದಿರುವ ಬೇಡಿಕೆಯು ಬಂಗಾರದ ಅದಿರು ಪತ್ತೆಯಿಂದ ಇಲ್ಲಿನ ಜಮೀನುಗಳಿಗೆ ಮತ್ತಷ್ಟು ಬೇಡಿಕೆಗೆ ಪುಷ್ಟಿ ನೀಡಿದಂತಾಗಿದೆ. 2017 ರಲ್ಲಿ ಕೇಂದ್ರ ಸರ್ಕಾರ ಸ್ವಾಮ್ಯದ ಅಲ್ಫಾ ಜಿಯೋ ಇಂಡಿಯಾ ಲಿಮಿಟೆಡ್ ಎಂಬ ಖಾಸಗಿ ಸಂಸ್ಥೆಯು ಈ ಭಾಗದಲ್ಲಿ ಖನಿಜ ಸೇರಿದಂತೆ ಬೆಲೆ ಬಾಳುವ ತೈಲಗಳನ್ನು ಹೊಂದಿರುವ ಕುರಿತು ವೈಮಾನಿಕ ಸಮೀಕ್ಷೆ ಕೈಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು. ಏನೇ ಆಗಲಿ, ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದಿರುವ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ‘ನಾರಿನಾಳ ಗ್ರಾಮ’ ಬಂಗಾರದ ಅದಿರು ಪತ್ತೆ ಮೂಲಕ ಕುಗ್ಗಗ್ರಾಮವು ಮತ್ತಷ್ಟು ಬೆಳಕಿಗೆ ಬಂದಂತಾಗಿದೆ. ಅದಿರು ಸಮೀಕ್ಷೆ ಸುದ್ದಿಯಿಂದ ಈ ಭಾಗದ ಜಮೀನುಗಳಿಗೆ ಬಂಗಾರದ ಬೆಲೆ ಬಂದಿರುವುದಂತು ಸತ್ಯ..!!