– ಶರಣಪ್ಪ ಕುಂಬಾರ.
ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ವೆಂಕಟೇಶ್ವರ ದೇವಸ್ಥಾನದ ಮುಂಭಾಗದಲ್ಲಿ ದಸರಾ ಹಬ್ಬದ ನಿಮಿತ್ತವಾಗಿ ಹಮ್ಮಿಕೊಂಡಿದ್ದ ಹಾಲುಗಂಬ ಹತ್ತುವ ಸ್ಪರ್ಧೆಯು ಯಶಸ್ವಿಯಾಗಿ ಜರುಗಿತು..!
ಪ್ರತಿವರ್ಷದ ಸಂಪ್ರದಾಯದಂತೆ ಯಾದವ ಸಮುದಾಯ (ಗೊಲ್ಲರ) ಹಾಲುಗಂಬವನ್ನು ಅತ್ಯಂತ ಭಕ್ತಿ ಪೂರ್ವಕ ಸಿದ್ಧತೆಗೊಳಿಸಿದ್ದರು. ನೀರು ಸಂಗ್ರಹ ಸೇರಿದಂತೆ ಕಂಬಕ್ಕೆ ಪೂಜಾ ವಿಧಿವಿಧಾನಗಳನ್ನು ಕೈಗೊಳ್ಳಲಾಗಿತು. ಸುರುಮ ಮೆತ್ತಿದ ಕಂಬವನ್ನು ಹತ್ತುವ ಸ್ಪರ್ಧೆಯು ಅತ್ಯಂತ ರೋಮಾಂಚಕವಾಗಿತು. ಅನೇಕರು ಕಂಬ ಹತ್ತುವುದರಲ್ಲಿ ವಿಫಲವಾಗುವುದು ಸಾಮಾನ್ಯವಾಗಿತ್ತು. ಕೊನೆಗೆ ಬಚನಾಳ ಗ್ರಾಮದ ಛತ್ರಪ್ಪ ಸಣ್ಣಮರಿಯಪ್ಪ ಕೊಪ್ಪಳ ಎಂಬ ಸ್ಪರ್ಧಾಳು ಕಂಬ ಏರುವುದರಲ್ಲಿ ಯಶಸ್ವಿಯಾದನು. ಯಶಸ್ವಿಯಾದ ಛತ್ರಪ್ಪ ಕೊಪ್ಪಳ ಅವರಿಗೆ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಕೊಡಮಾಡಿದ 11 ತೊಲೆಯ ಬೆಳ್ಳಿಯ ಕಡಗವನ್ನು ಸ್ಥಳೀಯ ಉದ್ಯಮಿ ಹಾಗೂ ಮುಖಂಡ ಬಸನಗೌಡ ಮಾಲಿಪಾಟೀಲ ನೀಡಿ ಗೌರವಿಸಿದರು. ತಾವರಗೇರಾ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರು ಈ ಮನಮೋಹಕ ಹಾಲುಗಂಬ ಹತ್ತುವ ಸ್ಪರ್ಧೆಯನ್ನು ಬಂಗಾರ ವಿನಿಮಯದ ದಸರಾ ಹಬ್ಬದಂದು ಕಣ್ಣು ತುಂಬಿಕೊಂಡರು. ಯಾದವ ಸಮುದಾಯದ ಮುಖಂಡರು ಸೇರಿದಂತೆ ಪಟ್ಟಣದ ಹಿರಿಯರು ಭಾಗವಹಿಸಿದ್ದರು..!!