– ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಕೊಪ್ಪಳದ ಥ್ರೋ ಬಾಲ್ ಪ್ರತಿಭೆ..!

 

– ಶರಣಪ್ಪ ಕುಂಬಾರ.

ಕೊಪ್ಪಳ : ರಾಷ್ಟ್ರಮಟ್ಟದ ಸೀನಿಯರ್ ಥ್ರೋ ಬಾಲ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಕರ್ನಾಟಕ ತಂಡಕ್ಕೆ ಕೊಪ್ಪಳ ತಾಲ್ಲೂಕಿನ ಗಬ್ಬೂರು ಗ್ರಾಮದ ಯುವಕ ಎರಿಸ್ವಾಮಿ ಹರಿಜನ ಆಯ್ಕೆಯಾಗಿರುವುದು ವಿಶೇಷ..!

   ಅದರಲ್ಲು , ಹೈದ್ರಾಬಾದ್ ಕರ್ನಾಟಕದ ಆರು ಜಿಲ್ಲೆಗಳ ಪೈಕಿ ಏಕೈಕ ಕ್ರೀಡಾಪಟು ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ. ಮಂಡ್ಯ ಜಿಲ್ಲೆಯ ಕುತ್ತತ್ತಿಯಲ್ಲಿ ಇತ್ತೀಚೆಗೆ ರಾಜ್ಯ ಥ್ರೋ ಬಾಲ್ ಅಸೋಸಿಯೇಷನ್ ಕೈಗೊಂಡಿದ್ದ ಥ್ರೋ ಬಾಲ್ ಸೀನಿಯರ್ ತಂಡದ ಆಯ್ಕೆಯಲ್ಲಿ ಯರಿಸ್ವಾಮಿ ಸ್ಥಾನ ಪಡೆದುಕೊಂಡಿದ್ದಾರೆ. ಗದಗ ನಗರದ ಶ್ರೀ ಪ್ರಭುರಾಜೇಂದ್ರ ಶಾರೀರಿಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ಈ ಸಧ್ಯ ಬಿ.ಪಿ.ಈಡಿ ಅಭ್ಯಾಸದಲ್ಲಿರುವ ಎರಿಸ್ವಾಮಿ ಎಂಬ ಯುವ ಪ್ರತಿಭೆ ಕರ್ನಾಟಕದ ಥ್ರೋ ಬಾಲ್ ತಂಡಕ್ಕೆ ಆಯ್ಕೆಯಾಗಿರುವುದು ಈ ಭಾಗದ  ಕ್ರೀಡಾಪಟುಗಳ ಪಾಲಿಗೆ ಅತೀವ ಸಂತೋಷದ ಸಂಗತಿ. ಇದೇ ತಿಂಗಳು 29-10-2021 ರಿಂದ 31-10-2021 ರವರೆಗೆ ಹರಿಯಾಣ ರಾಜ್ಯದ ರೋಥಕ ಎಂ.ಡಿ.ವಿಶ್ವವಿದ್ಯಾಲಯದಲ್ಲಿ ಜರಗುವ ರಾಷ್ಟ್ರ ಮಟ್ಟದ “ಸೀನಿಯರ್ ಥ್ರೋ ಬಾಲ್” ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವುದು ನಮ್ಮ ಗಬ್ಬೂರು ಗ್ರಾಮ ಸೇರಿದಂತೆ ಕೊಪ್ಪಳ ಜಿಲ್ಲೆಯವರಿಗೆ ಹೆಮ್ಮೆಯ ಸಂಗತಿ ಎನ್ನುತ್ತಾರೆ ಗಬ್ಬೂರು ಗ್ರಾಮದ ಬಸವರಾಜ ಹಳ್ಳಿ. ಥ್ರೋ ಬಾಲ್ ರಾಜ್ಯ ತಂಡಕ್ಕೆ ಆಯ್ಕೆಗೆ ಕಾರಣಿಭೂತರಾಗಿರುವ ಶ್ರೀ ಪ್ರಭುರಾಜೇಂದ್ರ ಶಾರೀಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ರಮೇಶ ಚಿಕ್ಕನಗೌಡರ ಅವರನ್ನು ಕ್ರೀಡಾಪಟು ಎರಿಸ್ವಾಮಿ ನೆನೆಯುವುದನ್ನು ಮಾತ್ರ ಮರೆಯುತ್ತಿಲ್ಲ.

 

 

ಕ್ರೀಡಾಪಟು ಪರಿಚಯ : ಕೊಪ್ಪಳ ತಾಲೂಕಿನ ಗಬ್ಬೂರು ಗ್ರಾಮದಲ್ಲಿ ಜನಿಸಿದ ಎರಿಸ್ವಾಮಿ ಗಬ್ಬೂರುನಲ್ಲಿ ಪ್ರಾಥಮಿಕ ಶಿಕ್ಷಣ, ಗಿಣಿಗೇರಿಯಲ್ಲಿ ಪ್ರೌಢ ಶಿಕ್ಷಣ ಪೂರೈಸಿದ ಇವರು ಕೊಪ್ಪಳದ ಎಸ್.ಜಿ.ಕಾಲೇಜಿನಲ್ಲಿ ಪಿಯುಸಿ, ಪದವಿಯನ್ನು ಕೂಡಾ ಕೊಪ್ಪಳ ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜನಲ್ಲಿ ಪೂರ್ಣಗೊಳಿಸಿದ್ದಾರೆ. ಈ ಸಧ್ಯ ಗದಗ ನಗರದ ಶ್ರೀ ಪ್ರಭುರಾಜೇಂದ್ರ ಶಾರೀರಿಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ.ಪಿ.ಈಡಿ ಕೊನೆಯ ಸೆಮಿಸ್ಟರ್ ಅಭ್ಯಾಸ ಮಾಡುತ್ತಿದ್ದಾರೆ. ಪ್ರಾಥಮಿಕ ಶಿಕ್ಷಣದಿಂದ ಕ್ರೀಡಾ ಕ್ಷೇತ್ರದಲ್ಲಿ ಬಹಳ ಚೂಟಿಯಾಗಿರುವ ಎರಿಸ್ವಾಮಿ ಖೋ-ಖೋ, ಕಬ್ಬಡ್ಡಿ ವಾಲಿಬಾಲ್ ಅಂದರೇ, ಇವರಿಗೆ ಬಹಳಷ್ಟು ಅಚ್ಚುಮೆಚ್ಚು. ಪದವಿ ಅಭ್ಯಾಸದಲ್ಲಿರುವಾಗ ‘ಯುನಿವರ್ಸಿಟಿ ಬ್ಲೂ’ ಕೈತಪ್ಪಿದ್ದು ಎರಿಸ್ವಾಮಿಯವರಿಗೆ ಇನ್ನೂ ಮನಸ್ಸಿನಲ್ಲಿ ನೋವಾಗಿ ಉಳಿದುಕೊಂಡಿದೆ. ರಾಷ್ಟ್ರಮಟ್ಟದ ಥ್ರೋ ಬಾಲ್ ಸ್ಪರ್ಧೆಯಲ್ಲಿಯಾದರೂ ಸ್ಥಾನ ಪಡೆಯಲಿ ಎಂಬುದು ತಾಯಿ ಯಲ್ಲಮ್ಮ ಹರಿಜನ ಅವರ ಆಶಯದ ಜೊತೆಗೆ ‘ಕೃಷಿ ಪ್ರಿಯ’ ಪತ್ರಿಕೆ ಯ ಆಶಯ ನಮ್ಮದಾಗಿದೆ..!!