– ಶರಣಪ್ಪ ಕುಂಬಾರ.
ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಹಂಚಿನಾಳ ಟೋಲ್ ಗೇಟನಲ್ಲಿ ಇತ್ತೀಚಿಗೆ ಮೃತಪಟ್ಟಿರುವ ಕಾರ್ಮಿಕನ ಕುಟುಂಬಕ್ಕೆ ಯಾವುದೇ ತರಹದ ಪರಿಹಾರ ನೀಡದೆ ಟೋಲ್ ಗೇಟ್ ನಿರ್ವವಣೆ ಗುತ್ತಿಗೆ ಪಡೆದ ಸಂಸ್ಥೆ ಕೈ ತೊಳೆದುಕೊಂಡಿದೆ. ಇದರಿಂದ ಕಾರ್ಮಿಕರ ಸಾವಿಗೆ ಮಾತ್ರ ಈ ಟೋಲ್ ಗೇಟನಲ್ಲಿ ಬೆಲೆ ಇಲ್ಲದಂತಾಗಿರುವುದು ಸಾಬೀತಾಗಿದೆ..!?
ದಿನಾಂಕ 20-10-2021 ರಂದು ತಡ ರಾತ್ರಿ ಟೋಲ್ ಗೇಟ್ ಉದ್ಯೋಗಿ ತಾವರಗೇರಿಯ ಲೋಹಿತಕುಮಾರ ಮಲ್ಲಪ್ಪ ಸಿಂಧನೂರು (22) ಲಾರಿ ಹಾಯ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಆದರೆ, ಮೃತನ ಕುಟುಂಬಕ್ಕೆ ಸಂಸ್ಥೆ ಕವಡೆ ಕಾಸು ನೀಡಿಲ್ಲ. ಮುಂಬರುವ ದಿನಗಳಲ್ಲಿ ನೀಡುವ ಭರವಸೆ ಕೂಡಾ ನೀಡಿರುವುದಿಲ್ಲ. ಇದರಿಂದ ಆಕ್ರೋಶಗೊಂಡ ಮೃತ ಲೋಹಿತಕುಮಾರನ ಕುಟುಂಬಸ್ಥರು ಸೇರಿದಂತೆ ಸಹೋದ್ಯೋಗಿಗಳು, ತಾವರಗೇರಾ ಯುವಕರ ಪಡೆ 23-10-2021 ರಂದು ಹಂಚಿನಾಳ ಟೋಲ್ ವ್ಯವಹಾರ ನಿಲ್ಲಿಸುವ ಮೂಲಕ ಪ್ರತಿಭಟಿಸಿದ ಪ್ರಸಂಗ ಜರುಗಿತು. ಟೋಲ್ ಗೇಟ್ ನಲ್ಲಿ ಯಾವುದೇ ತರಹದ ಮೂಲಭೂತ ಸೌಲಭ್ಯಗಳನ್ನು ನೀಡಿಲ್ಲ. ಅಪಾಯದ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಟೋಲ್ ನಲ್ಲಿ ಅಂಬುಲೇನ್ಸ್ ವಾಹನದ ವ್ಯವಸ್ಥೆ ಇಲ್ಲ. ಮೃತ ಕಾರ್ಮಿಕನ ಕುಟುಂಬಕ್ಕೆ ಸೂಕ್ತ ಪರಿಹಾರವಾಗಿ 10 ಲಕ್ಷ ರೂಪಾಯಿಗಳನ್ನು ನೀಡಬೇಕೆಂದು ಒತ್ತಾಯಿಸಿದರು. ಹಣ ಎತ್ತುವಳಿಯ ಭರಾಟೆಯಲ್ಲಿ ಕೆ.ಆರ್.ಡಿ.ಸಿ.ಎಲ್ ನಿಂದ ಟೋಲ್ ಗೇಟ್ ಗುತ್ತಿಗೆ ಪಡೆದಿರುವ ಗದಗ ಮೂಲದ ಕೇಸರ್ ಎಂಬ ಖಾಸಗಿ ಸಂಸ್ಥೆ ಹಣ ಸಂಗ್ರಹಿಸುವ ಕಾರ್ಯವನ್ನು ಈಗಾಗಲೇ ಆರಂಭಿಸಿದೆ. ಕಾರ್ಮಿಕರಿಗೆ ಯಾವುದೇ ತರಹದ ರಕ್ಷಣೆ ಟೋಲ್ ನಲ್ಲಿ ಇಲ್ಲ ಎಂಬುದು ಮಾತ್ರ ಸ್ಪಷ್ಟವಾಗಿದೆ. ತಾವರಗೇರಾ ಪಟ್ಟಣದ ಯುವ ಮುಖಂಡ ಅರುಣಕುಮಾರ ನಲವತವಾಡ, ರಾಜ್ಯ ಖಾಸಗಿ ಮತ್ತು ಟ್ಯಾಕ್ಸಿ ವಾಹನಗಳ ಸಂಘದ ಅಧ್ಯಕ್ಷ ರವಿ ತಳುವಗೇರಾ ಸೇರಿದಂತೆ ಟೋಲ್ ಗೇಟ್ ಸಿಬ್ಬಂದಿ ಮೃತನ ಕುಟುಂಬಕ್ಕೆ ಪರಿಹಾರ ನೀಡುವಂತೆ ಈ ಸಂದರ್ಭದಲ್ಲಿ ಒತ್ತಾಯಿಸಿದರು..!!