ಅಧ್ಯಯನ ಕೊರತೆಯಿಂದ ಕನ್ನಡಕ್ಕೆ ಪೆಟ್ಟು: ಪತ್ರಕರ್ತ ಚಾಮರಾಜ ಸವಡಿ

 

 

ಕಲಬುರಗಿ: ಇಂದಿನ ಆಧುನಿಕ ಯುಗದ ತಾಂತ್ರಿಕ ಭರಾಟೆ ಮಧ್ಯದಲ್ಲಿ ಕನ್ನಡ ಭಾಷೆಗೆ ಸಾಕಷ್ಟು ಪೆಟ್ಟು ಬೀಳುತ್ತಿದೆ. ವಿಶೇಷವಾಗಿ ಮಾಧ್ಯಮ ಕ್ಷೇತ್ರಗಳಲ್ಲಿ ಸಾಕಷ್ಟು ತಪ್ಪುಗಳು ಕಂಡುಬರುತ್ತಿವೆ ಎಂದು ಕೊಪ್ಪಳದ ಹಿರಿಯ ಪತ್ರಕರ್ತ ಚಾಮರಾಜ ಸವಡಿ ವಿಷಾದ ವ್ಯಕ್ತಪಡಿಸಿದರು.

 

 

 

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಹಾಗೂ ಕಲಬುರಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಂಯೋಗದಲ್ಲಿ ಕಲಬುರಗಿ ನಗರದ ಪತ್ರಿಕಾ ಭವನದಲ್ಲಿ ಹಮ್ಮಿಕೊಂಡಿದ್ದ “ಮಾಧ್ಯಮದಲ್ಲಿ ಕನ್ನಡ ಬಳಕೆ” ಕುರಿತ ಒಂದು ದಿನದ ಕಾರ್ಯಾಗಾರದಲ್ಲಿ ವಿಷಯ ಮಂಡಿಸಿ ಅವರು ಮಾತನಾಡಿದರು.

ಕನ್ನಡ ಭಾಷೆಗೆ ತನ್ನದೇ ಆದ ಇತಿಹಾಸವಿದೆ. ಆದರೆ, ತಂತ್ರಾಂಶದಲ್ಲಿ ವೈವಿಧ್ಯತೆ ತಾರದ ಕಾರಣಕ್ಕಾಗಿ ಕನ್ನಡ ಭಾಷೆಯ ಪ್ರಸ್ತುತಿಯ ಸೊಗಸು ಜಡ್ಡುಗಟ್ಟಿದಂತಾಗಿದೆ. ಇನ್ನೊಂದೆಡೆ ಅಧ್ಯಯನದ ಕೊರತೆಯಿಂದಾಗಿ, ದೃಶ್ಯ ಮಾಧ್ಯಮದಲ್ಲಿ ಕನ್ನಡ ಭಾಷೆ ನಿತ್ಯ ಕೊಲೆಯಾಗುತ್ತಿದೆ. ಇದರ ನಿಯಂತ್ರಣಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ದೂರು ನೀಡಿ ಸರಿಪಡಿಸುವ ಪರಿಸ್ಥಿತಿ ಉಂಟಾಗಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ಸಾಹಿತ್ಯದಲ್ಲಿನ ಭಾಷೆಯೇ ಬೇರೆ, ಪತ್ರಿಕೋದ್ಯಮದ ಭಾಷೆಯೇ ಬೇರೆ. ಈ ಸೂಕ್ಷ್ಮ ಗೊತ್ತಿರಬೇಕು. ಪತ್ರಕರ್ತರು ನಿತ್ಯ ಅಧ್ಯಯನಶೀಲರಾಗಬೇಕಾಗಿದೆ. ಎಷ್ಟು ಬರೆಯಲಾಗಿದೆ ಎನ್ನುವುದಕ್ಕಿಂತ ಆಸಕ್ತಿಯಿಂದ ಮತ್ತು ಸ್ಪಷ್ಟವಾಗಿ ಎಷ್ಟು ಬರೆಯಲಾಗಿದೆ ಎಂಬುದು ಮುಖ್ಯ. ಹೀಗೆ ಕನ್ನಡ ಕಲಿತಿದ್ದೇ ಆದರೆ, ಇತರ ಭಾಷೆಗಳನ್ನು ಸುಲಭವಾಗಿ ಕಲಿಯಬಹುದು ಎಂದು ಚಾಮರಾಜ ಸವಡಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಆರ್. ವೆಂಕಟೇಶ ಕಾರ್ಯಾಗಾರ ಉದ್ಘಾಟಿಸಿದರು. ಜಿಲ್ಲಾ ಕಾನಿಪ ಸಂಘದ ಅಧ್ಯಕ್ಷ ಭವಾನಿಸಿಂಗ್ ಠಾಕೂರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ಜಾಗೃತಿ ಸಮಿತಿ ಸದಸ್ಯ ಡಾ. ಸ್ವಾಮಿರಾವ್ ಕುಲಕರ್ಣಿ, ಮಾಧ್ಯಮ ಅಕಾಡೆಮಿ ಸದಸ್ಯ ದೇವೇಂದ್ರಪ್ಪ ಕಪನೂರು, ಪತ್ರಕರ್ತ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಹನುಮಂತರಾವ್ ಬೈರಾಮಡಗಿ, ಖಜಾಂಚಿ ರಾಜು ದೇಶಮುಖ, ಸಂಘದ ಪ್ರಧಾನ ಕಾರ್ಯದರ್ಶಿ ದೇವೇಂದ್ರಪ್ಪ ಆವಂಟಿ, ಕಾರ್ಯಕಾರಿ ಸಮಿತಿ ಸದಸ್ಯ ಸಂಗಮನಾಥ ರೇವತಗಾಂವ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ನಗರದ ವಿವಿಧ ಕಾಲೇಜುಗಳ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹಾಜರಿದ್ದರು.