ಕೊಪ್ಪಳ : ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ ಅವರು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ..!
ಕನ್ನಡ ರಾಜ್ಯೋತ್ಸವ ಹಿನ್ನಲೆಯಲ್ಲಿ ಪ್ರತಿ ವರ್ಷ ರಾಜ್ಯ ಸರಕಾರ ಕೊಡಮಾಡುವ ಪ್ರಶಸ್ತಿಗಳಲ್ಲಿ ಪ್ರಾಣೇಶ ಅವರನ್ನ ಸಂಕೀರ್ಣ ವಿಭಾಗದಲ್ಲಿ ಆಯ್ಕೆಮಾಡಲಾಗಿದೆ. ಬೀಚಿ ಎಂತಲೇ ಖ್ಯಾತಿಗೆ ಪಾತ್ರರಾಗಿರುವ ಗಂಗಾವತಿ ಪ್ರಾಣೇಶ ಅವರು ಹಾಸ್ಯದ ಮೂಲಕ ಮನೆಮಾತಾಗಿರುವರು. ಕೇವಲ ರಾಜ್ಯ ಅಲ್ಲದೆ, ದೇಶ ವಿದೇಶಗಳಲ್ಲಿ ಹಾಸ್ಯದ ಮೂಲಕ ಜನಜನಿತರಾದವರು. ಪ್ರಾಣೇಶ ಅವರು ತಮ್ಮ ಹೆಸರಿನ ಜೊತೆಗೆ ಹುಟ್ಟುರಾಗಿರುವ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ಹೆಸರನ್ನು ನಾಡಿಗೆ ಪಸರಿಸಿದವರು. ಹಾಸ್ಯ ಕಲೆಯೊಂದಿಗೆ ಸಮಾಜದಲ್ಲಿರುವ ಮೌಡ್ಯ, ಕಂದಾಚಾರದಂತಹ ಅನಿಷ್ಟ ಪದ್ಧತಿಗಳ ತಿಲಾಂಜಲಿಗೆ ಶ್ರಮಿಸಿದವರು. ನಾಡು, ನುಡಿ, ಭಾಷೆ ಹಾಗೂ ಶಿಕ್ಷಣಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿರುವ ಇವರು ತಮ್ಮ ಸಾವಿರಾರು ಹಾಸ್ಯ ಕಾರ್ಯಕ್ರಮಗಳ ಮೂಲಕ ೬ ಕೋಟಿ ಕನ್ನಡಿಗರ ಪಾಲಿಗೆ ಚಿರಪರಿಚಿತರು. ಹಾಸ್ಯದ ಜೊತೆಗೆ ವಿಶಿಷ್ಟ ಬರಹಗಾರರು ಕೂಡಾ ಹೌದು. ಕಡ್ಡಾಯ ಮತದಾನದ ಜೊತೆಗೆ ಯುವಕರನ್ನು ಮತದಾನಕ್ಕೆ ಸೆಳೆಯಲು ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಖ್ಯಾತ ಹಾಸ್ಯ ಕಲಾ ರಸಿಕನಿಗೆ ಎಂದು ಲಭಿಸಬೇಕಾಗಿದ್ದ ರಾಜ್ಯೋತ್ಸವ ಪ್ರಶಸ್ತಿ ತಡವಾಗಿ ಆದರೂ ಲಭಿಸಿರುವುದು ಕೊಪ್ಪಳ ಜಿಲ್ಲೆಯವರ ಪಾಲಿಗೆ ಇದೊಂದು ಹೆಮ್ಮೆಯೇ ಸರಿ..!