ಕೊಪ್ಪಳ (ಕುಷ್ಟಗಿ) : ಭಾನುವಾರ (28-11-2021) ಶಾಲೆ ಆರಂಭಿಸಬೇಕೆಂದು ಶಿಕ್ಷಣ ಇಲಾಖೆ ಏಕಾಏಕಿ ನಿರ್ಧಾರ ತೆಗೆದುಕೊಂಡು ಆದೇಶ ಹೊರಡಿಸಿರುವುದರಿಂದ ತಾಲೂಕಿನ ಶಿಕ್ಷಕ ವೃಂದ ಗೊಂದಲಕ್ಕೀಡಾಗಿದ್ದಾರೆ..! ಹೌದು, ಈ ಆದೇಶವನ್ನು ಶನಿವಾರ ಶಾಲಾವಧಿಯ ನಂತರ ಶಿಕ್ಷಕರಿಗೆ ವಾಟ್ಸಾಫ್ ಸಂದೇಶ ರವಾನಿಸಿದ್ದು, ತರಗತಿ ಮುಗಿಸಿ ಎಲ್ಲಾ ಮಕ್ಕಳು ಮನೆಗೆ ಮರಳಿದ್ದರಿಂದ ಶಾಲಾ ಆರಂಭದ ಕುರಿತು ಹೇಗೆ ಮಾಹಿತಿ ನೀಡಬೇಕು ಎಂಬ ಗೊಂದಲಕ್ಕೆ ಈಡಾಗಿದ್ದಾರೆ. ಕೆಲ ಸ್ಥಿತಿವಂತ ಮಕ್ಕಳಲ್ಲಿ ಮೊಬೈಲ್ ಹೊಂದಿರಬಹುದು. ಆದರೆ, ಬಹುತೇಕ ಬಡ ಮಕ್ಕಳಲ್ಲಿ ಮೊಬೈಲ್ ಇರದ ಹಿನ್ನೆಲೆ ಅಂಥ ಮಕ್ಕಳಿಗೆ ಹೇಗೆ ಮಾಹಿತಿ ನೀಡುವುದು? ಎಂಬ ಪ್ರಶ್ನೆ ಶಿಕ್ಷಕರಲ್ಲಿ ಕಾಡುತ್ತಿದೆ. ನವೆಂಬರ್ ೧೯ರಂದು ಹೆಚ್ಚಿನ ಮಳೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಧಿಕಾರಿಗಳು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ ಆದೇಶವೂ ಅದೇ ದಿನ ಬೆಳಿಗ್ಗೆ ೧೦ರ ಸುಮಾರಿಗೆ ಶಿಕ್ಷಕರಿಗೆ ವಾಟ್ಸಾಫ್ ಸಂದೇಶ ಬರುವ ವೇಳೆಗೆ ಸ್ಥಳೀಯ ಸೇರಿದಂತೆ ಗ್ರಾಮೀಣ ಭಾಗದಿಂದ ಅನೇಕ ವಿಧ್ಯಾರ್ಥಿಗಳು ಹಾಗೂ ಶಿಕ್ಷಕರು ಶಾಲೆಗೆ ಹಾಜರಾಗಿದ್ದರು. ಆದೇಶ ಬಂದ ನಂತರ ಪುನಃ ಮಳೆಯಲ್ಲಿಯೇ ನೆನೆದು ಮನೆ ತಲುಪಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಶನಿವಾರವೂ ಸಹ ಶಾಲಾ ಅವಧಿ ಮುಗಿದ ಸಂದರ್ಭದಲ್ಲಿ ಭಾನುವಾರ ಶಾಲೆಗಳನ್ನು ನಡೆಸಬೇಕು ಎಂಬ ವಾಟ್ಸಾಫ್ ಸಂದೇಶ ರವಾನಿಸಲಾಗಿದೆ. ವಿದ್ಯಾರ್ಥಿಗಳು ಮನೆ ತಲುಪಿರುವಾಗ ಮಾಹಿತಿ ನೀಡುವುದಾದರೂ ಹೇಗೆ ಎಂಬ ಗೊಂದಲ ಮೂಡಿಸಿರುವುದಂತು ಸತ್ಯ. ಶಿಕ್ಷಣ ಇಲಾಖೆ ಅಧಿಕಾರಿಗಳು ಏಕಾಏಕಿ ಆದೇಶ ಹೊರಡಿಸುವ ಮುನ್ನ ಶಾಲಾ ಅವಧಿ ಆರಂಭಕ್ಕೂ ಮುನ್ನ ಅಥವಾ ಹಿಂದಿನ ದಿನ ರಜೆ ಘೋಷಿಸುವ ಹಾಗೂ ಶಾಲೆ ಆರಂಭಿಸುವ ಆದೇಶಗಳನ್ನು ಹೊರಡಿಸಿದರೆ ಶಿಕ್ಷಕರಿಗೆ ಮತ್ತು ಮಕ್ಕಳಿಗೆ ಅನುಕೂಲವಾಗುತ್ತದೆ ಎಂಬ ಅಭಿಪ್ರಾಯಗಳು ಶಿಕ್ಷಕ ವಲಯದಲ್ಲಿ ಕೇಳಿಬಂದಿವೆ..!!