ಕೊಪ್ಪಳ ಪಿಯು ಕಾಲೇಜುಗಳಲ್ಲಿ ರಜೆ ಗೊಂದಲ

 

 

 

ಕೃಷಿ ಪ್ರಿಯ ವಾರ್ತೆ |

ಕೊಪ್ಪಳ : ಇಂದು (29-11-2021) ಕಾಲೇಜು ತೆರೆಯಬೇಕೋ ಬೇಡವೋ ಎಂಬ ನಿರ್ಧಾರ ಕೈಗೊಳ್ಳದೇ ಪಿ.ಯು. ಇಲಾಖೆ ವಿದ್ಯಾರ್ಥಿಗಳನ್ನು ಗೊಂದಲದಲ್ಲಿ ಕೆಡವಿದೆ. ಇದರಿಂದಾಗಿ ಕೆಲವು ಕಾಲೇಜುಗಳು ತೆರೆದಿದ್ದರೆ, ಇನ್ನು ಕೆಲ ಕಾಲೇಜುಗಳು ಮುಚ್ಚಿದ್ದು, ವಿದ್ಯಾರ್ಥಿಗಳು ಪರದಾಡುವಂತಾಗಿದೆ.

ಮಳೆ ಹಿನ್ನೆಲೆಯಲ್ಲಿ ಎರಡು ದಿನ ನೀಡಲಾಗಿದ್ದ ರಜೆ ದಿನಗಳನ್ನು ಮುಂದಿನ ಭಾನುವಾರಗಳಲ್ಲಿ ಸರಿದೂಗಿಸುವಂತೆ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದರು. ಆ ಪ್ರಕಾರ, ಇಂದು ಕೊಪ್ಪಳ ಜಿಲ್ಲೆಯಲ್ಲಿ ಖಾಸಗಿ ಶಾಲೆಗಳೂ ಸೇರಿದಂತೆ ಒಂದರಿಂದ ಹತ್ತನೇ ತರಗತಿಯವರೆಗಿನ ಎಲ್ಲಾ ಶಾಲೆಗಳೂ ಕಾರ್ಯ ನಿರ್ವಹಿಸುತ್ತಿವೆ. ಆದರೆ, ಪಿಯು ಕಾಲೇಜುಗಳಲ್ಲಿ ತರಗತಿ ನಡೆಸುವ ಕುರಿತು ಸ್ಪಷ್ಟ ನಿರ್ದೇಶನವಿಲ್ಲದ್ದರಿಂದ, ವಿದ್ಯಾರ್ಥಿಗಳು ಗೊಂದಲಕ್ಕೆ ಸಿಲುಕಿದ್ದಾರೆ.

ಜಿಲ್ಲೆಯಾದ್ಯಂತ ಕೆಲವು ಕಾಲೇಜುಗಳು ಇಂದು ತರಗತಿಗಳನ್ನು ನಡೆಸುತ್ತಿವೆ. ಆದರೆ, ಕೊಪ್ಪಳ ನಗರದ ಬಾಲಕರ ಸರಕಾರಿ ಪದವಿಪೂರ್ವ ಕಾಲೇಜು ಮತ್ತು ಹಲಗೇರಿಯ ಸರಕಾರಿ ಪದವಿಪೂರ್ವ ಕಾಲೇಜುಗಳು ರಜೆಯಲ್ಲಿವೆ. ತರಗತಿಗಳನ್ನು ನಡೆಸುವ ಕುರಿತು ಡಿಡಿಪಿಯು ರವಿಕುಮಾರ್ ಅವರು ಸ್ಪಷ್ಟ ನಿರ್ದೇಶನ ನೀಡಿರದ ಹಿನ್ನೆಲೆಯಲ್ಲಿ ಇಂತಹ ಅವ್ಯವಸ್ಥೆ ತಲೆದೋರಿದೆ ಎನ್ನಲಾಗಿದೆ.

ಭಾನುವಾರ ತರಗತಿ ನಡೆಸುವ ಕುರಿತು ಜಿಲ್ಲೆಯ ಬಹುತೇಕ ಕಾಲೇಜುಗಳ ಪ್ರಾಚಾರ್ಯರು ನಿನ್ನೆಯೇ ನಿರ್ಧಾರ ತೆಗೆದುಕೊಂಡಿದ್ದಾರೆ. ಆದರೆ, ಕೆಲವು ಕಾಲೇಜುಗಳ ಪ್ರಾಚಾರ್ಯರು ಈ ಕುರಿತು ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ. ಭಾನುವಾರ ಕಾಲೇಜು ನಡೆಸದಿದ್ದರೂ ಮುಂದಿನ ದಿನಗಳಲ್ಲಿ ಯಾರಿಗೂ ಗೊತ್ತಾಗುವುದಿಲ್ಲ. ಹೆಚ್ಚುವರಿಯಾಗಿ ಏಕೆ ಕೆಲಸ ಮಾಡಬೇಕು ಎಂಬ ಧೋರಣೆ ಇಂತಹ ನಿರ್ಧಾರದ ಹಿಂದಿದೆ ಎಂದು ಕೆಲವರು ಪಾಲಕರು ಆರೋಪಿಸಿದ್ದಾರೆ.

ಕೊಪ್ಪಳದ ಬಾಲಕರ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಇಂತಹ ಅವ್ಯವಸ್ಥೆ ಧಾರಾಳವಾಗಿದೆ ಎಂಬ ದೂರುಗಳಿವೆ. ರಜೆ ದಿನಗಳಲ್ಲಿ ಬರುವ ಗಣ್ಯರ ಜಯಂತಿ ಆಚರಣೆಗಳೂ ಹೀಗೆಯೇ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿವೆ. ಈ ಕಾಲೇಜಿನ ಪ್ರಾಚಾರ್ಯೆ ರಮಾ ಕೆ. ಅವರು ಹೊಸಪೇಟೆಯಲ್ಲಿ ಮನೆ ಮಾಡಿರುವುದರಿಂದ, ರಜೆ ದಿನಗಳಲ್ಲಿ ಅವರು ಕಾಲೇಜಿಗೆ ಬರುವುದೇ ಇಲ್ಲ. ಹಿಂದಿನ ದಿನವೇ ಹಾಜರಿ ಪುಸ್ತಕದಲ್ಲಿ ಸಹಿ ಮಾಡಿ ಚಕ್ಕರ್ ಹೊಡೆಯುತ್ತಾರೆ ಎಂದು ವಿದ್ಯಾರ್ಥಿಗಳು ಆಪಾದಿಸುತ್ತಾರೆ.

ಭಾನುವಾರದ ತರಗತಿ ಗೊಂದಲ ಕುರಿತು ಡಿಡಿಪಿಯು ರವಿಕುಮಾರ್ (8618303406 / 9900799910) ಹಾಗೂ ಪ್ರಾಚಾರ್ಯೆ ರಮಾ ಕೆ. (8762359512 / 8762359512) ಅವರನ್ನು ಸಂಪರ್ಕಿಸಲು ಪ್ರಯತ್ನಿಸಲಾಯಿತಾದರೂ ಇಬ್ಬರೂ ಕರೆ ಸ್ವೀಕರಿಸಲಿಲ್ಲ. ಈ ಹಿನ್ನೆಲೆಯಲ್ಲಿ, ಜಿಲ್ಲಾಧಿಕಾರಿಗಳೇ ಈ ಕುರಿತು ಸ್ಪಷ್ಟ ನಿರ್ದೇಶನ ಹೊರಡಿಸಬೇಕಾದ ಅನಿವಾರ್ಯತೆ ತಲೆದೋರಿದೆ..!