– ಕೊರೋನಾ ಹೆಸರಿನಲ್ಲಿ ಕಮರಿ ಹೋದ ನಿರುದ್ಯೋಗಿಗಳು..!

– ಶರಣಪ್ಪ ಕುಂಬಾರ.

ಕೊಪ್ಪಳ : ಕೊರೋನಾ ವೈರಸ್ ಹರಡುವ ಹೆಸರಿನಲ್ಲಿ ರಾಜ್ಯದ ನಿರುದ್ಯೋಗಿ ಲಕ್ಷಾಂತರ ಯುವಕರು ಕಮರಿ ಹೋಗಿದ್ದಾರೆ..!


ವಯೋಮಿತಿ ಮೀರುತ್ತಿರುವ ಬಿ.ಈಡಿ, ಬಿ.ಪಿ.ಈಡಿ, ಎಂ.ಈಡಿ, ಎಂ.ಪಿ.ಈಡಿ, ಡಿ.ಈಡಿ, ಡಿ.ಪಿ.ಈಡಿ, ಎಂ.ಎ ಇತ್ಯಾದಿ ಪದವಿ ಪಡೆದಿರುವ ಲಕ್ಷಾಂತರ ಯುವಕರು ಸರಕಾರಿ ಉದ್ಯೋಗಕ್ಕಾಗಿ ನಿತ್ಯ ಹಪಹಪಿಸುತ್ತಿದ್ದಾರೆ. ಒಂದು ಕಡೆ ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿದ್ದರೆ, ನಿಗದಿತ ವಯೋಮಿತಿ ಮೀರುತ್ತಿರುವುದು ನಿರುದ್ಯೋಗಿಗಳನ್ನು ಆತಂಕಕ್ಕೀಡುಮಾಡಿದೆ. ವಿಶೇಷವಾಗಿ ನಿರುದ್ಯೋಗಿ ಸಾವಿರಾರು ಬಿ.ಈಡಿ ಪದವಿ ನಿರುದ್ಯೋಗಿಗಳು ಕಳೆದ ಎರಡು ವರ್ಷಗಳಿಂದ ಶಿಕ್ಷಣ ಇಲಾಖೆಯ ಖಾಲಿ ಹುದ್ದೆಗಳಿಗೆ ಜರುಗಬೇಕಾಗಿದ್ದ ನೇಮಕಾತಿಗಾಗಿ ಜಾತಕ ಪಕ್ಷಿಯಂತೆ ಕಾಯ್ದುಕುಳಿತ್ತಿದ್ದಾರೆ. ಕೊರೋನಾ ಸುಳ್ಳು ನೆಪದ ಮೂಲಕ ಬೊಕ್ಕಸದಲ್ಲಿ ಯಾವುದೇ ತರಹದ ಹಣವಿಲ್ಲವೆಂದು ನೆಪವೊಡ್ಡಿ , ಕಳೆದ ಎರಡು ವರ್ಷಗಳಿಂದ ನೇಮಕಾತಿ ತಡೆದಿರುವ ಸರಕಾರಕ್ಕೆ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಉಪ ಚುನಾವಣೆಗಳು ಏತಕ್ಕೆ ಬೇಕು ಎಂದು ಶಿಕ್ಷಕ ಆಕಾಂಕ್ಷಿಗಳು ಕಿಡಿಕಾರಿದ್ದಾರೆ.

ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶಕುಮಾರ ಅವರನ್ನ ಸಾಮಾಜಿಕ ಜಾಲತಾಣಗಳಲ್ಲಿ ನೇರವಾಗಿ ತರಾಟೆಗೆ ತೆಗೆದುಕೊಳ್ಳುತ್ತಿರುವ ನಿರುದ್ಯೋಗಿ ಶಿಕ್ಷಕರು, 2019 ರಿಂದ 10 ಸಾವಿರ ಶಿಕ್ಷಕರನ್ನು ನೇಮಕಮಾಡಿಕೊಳ್ಳುವುದಾಗಿ ಸುಳ್ಳು ಹೇಳುವ ಸಚಿವರ ಮಾತನ್ನ ಯಾರು ಗಂಭೀರವಾಗಿ ತೆಗೆದುಕೊಳ್ಳಬಾರದು ಎಂದು ಟೀಕಿಸುತ್ತಿದ್ದಾರೆ.

ಕಳೆದ ಎರಡು ವರ್ಷಗಳಿಂದ ಯಾವುದೇ ತರಹದ ಶಾಲೆಗಳು ಆರಂಭವಿಲ್ಲದೆ, ಡೋಲಾಯಮಾನ ಸ್ಥಿತಿಯಲ್ಲಿರುವ ಅತಿಥಿ ಹಾಗೂ ಖಾಸಗಿ ಶಾಲಾ ಶಿಕ್ಷಕರ ಪರಿಸ್ಥಿತಿ ಅಧೋಗತಿಯಲ್ಲಿದೆ. ಇತ್ತ ಕೆಲಸವು ಇಲ್ಲದೆ, ಸಂಬಳವು ಇಲ್ಲದೆ, ಜಾತಕ ಪಕ್ಷಿ ಅಂತಾಗಿದ್ದೇವೆ ಕೂಡಲೇ ಸರಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದು ನಿರುದ್ಯೋಗಿ ಶಿಕ್ಷಕರಾದ ಶರಣಬಸವ ಚೌಕಿಮಠ, ನೀಲನಗೌಡ ಗೌಡ್ರ , ರೇಣುಕಾ ಗೌಡ್ರ, ಸೀಮಾ ಹಾದಿಮನಿ, ವಿಜಯಲಕ್ಷ್ಮಿ ಬಳಗೇರ, ಭೀಮಶಿ ಕೂಕನೂರು,  ಜಡಿಯಪ್ಪ. ಎಲ್.ಮಡಿವಾಳ, ಶರೀಫಸಾಬ್ ಗಿಡ್ಡೇಸಾಬನ್ನವರ, ರೇಖಾ ಚಕ್ರಸಾಲಿ, ಕಿರಣಕುಮಾರ ರಾಠೋಡ, ಮಲ್ಲಿಕಾರ್ಜುನ ಹಾದಿಮನಿ, ಅರಳಪ್ಪ , ಚಂದ್ರು ಸಾಂತಗೇರಿ ಸೇರಿದಂತೆ ಇನ್ನಿತರರು ಒತ್ತಾಯಪಡಿಸಿದ್ದಾರೆ..!!