– ಶರಣಪ್ಪ ಕುಂಬಾರ.
ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಹಸೀಲ್ದಾರ ಕಚೇರಿಯಲ್ಲಿ ಜರುಗಿದ ಇದೊಂದು ಅಪರೂಪದ ಕ್ಷಣವಾಗಿತ್ತು..!
ತಹಸೀಲ್ದಾರ ಕಚೇರಿಯ ವಾಹನ ಚಾಲಕ ರಾಜಾಸಾಬ್ ಇವರ (31.05.2021) ನಿವೃತ್ತಿಯ ಕೊನೆಯ ದಿನ. ರಾಜಾಸಾಬ್ ಅವರು ವೃತ್ತಿಯ ಕೊನೆಯ ದಿನದಂದು ತನ್ನ ವಾಹನಕ್ಕೆ ವಂದಿಸುವ ಮೂಲಕ ಮನೆಗೆ ಹೊರಡುವ ಸಮಯವದು. ಇಂತಹ ಅವಿಸ್ಮರಣೀಯ ಸಮಯದಲ್ಲಿ ನಡೆದಿರುವುದೇ ಇವತ್ತಿನ ಹಾಗೂ ಈ ಸುದ್ದಿಯ ವಿಶೇಷ. ನಿವೃತ್ತಿಯಾದೆ ಎಂದು ಭಾರವಾದ ಮನಸ್ಸಿನಿಂದ ಚಾಲಕ ರಾಜಾಸಾಬ್ ಅವರು ಕಚೇರಿಯಿಂದ ಹೊರಡಬೇಕೆನ್ನುವಾಗ ಸ್ವತಃ ತಹಸೀಲ್ದಾರ ಎಂ.ಸಿದ್ಧೇಶ ಅವರು ತಾವೇ ವಾಹನ ಚಾಲನೆ ಮಾಡುವ ಮೂಲಕ ತಾವು ನಿತ್ಯ ಕುಳಿತುಕೊಳ್ಳುವ ವಾಹನದ ಸಿಟಿನಲ್ಲಿ (ತಹಸೀಲ್ದಾರ ಕುಳಿತುಕೊಳ್ಳುವ ಸ್ಥಳದಲ್ಲಿ) ವಾಹನ ಚಾಲಕ ರಾಜಾಸಾಬ್ ಅವರನ್ನು ಕುಳಿತುಕೊಳ್ಳಲು ಹೇಳಿ, ಚಾಲಕನನ್ನು ಮನೆಯವರೆಗೂ ಹೋಗಿ ಬಿಟ್ಟು ಬಂದು, ನಿವೃತ್ತಿಯ ಮನಸ್ಸಿಗೆ ಹಾಗೂ ಚಾಲಕ ವೃತ್ತಿಗೆ ಗೌರವ ಸಲ್ಲಿಸಿರುವ ಪ್ರಸಂಗ ಎಲ್ಲರನ್ನು ಮನ ಮುಟ್ಟುವಂತೆ ಮಾಡಿತು. ವೃತ್ತಿಯ 58 ವರ್ಷಗಳವರೆಗೆ ಅದೆಷ್ಟೋ.. ಘನವೆತ್ತ ಅಧಿಕಾರಿಗಳನ್ನು ಹೊತ್ತು ಕಾರ್ಯ ಮುಗಿಸಿದ ಬಳಿಕ ಅವರವರ ಮನೆಗಳಿಗೆ ನಿತ್ಯ ಬಿಟ್ಟು ಬಂದು, ಯಾವುದೇ ಕಳಂಕವಿಲ್ಲದೆ ಸೇವೆ ಸಲ್ಲಿಸಿದ್ದ ವಾಹನ ಚಾಲಕ ರಾಜಾಸಬ್ ಅವರು ನಿವೃತ್ತಿಯ ಕೊನೆಯ ದಿನ ತಾನು ಗೌರವದ ಮೂಲಕ ಉನ್ನತ ಅಧಿಕಾರಿಗಳು ಕುಳಿತುಕೊಳ್ಳುವ ಸೀಟಿನಲ್ಲಿ ಮನೆಯತನಕ ಬಂದಿದ್ದು , ಹೆಮ್ಮೆಯ ಸಂಗತಿ ಎಂದು ರಾಜಾಸಾಬ್ ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಪ್ರಸಂಗ ಕಣ್ಣು ತುಂಬಿಕೊಂಡ ಇಡೀ ತಹಸೀಲ್ದಾರ ಕಚೇರಿ ಸಿಬ್ಬಂದಿ ರಾಜಾಸಾಬ್ ಸೇವೆಗೆ ತಮ್ಮದೊಂದು ಸಲಾಂ ಸಲ್ಲಿಸಿದರು..!!