– ಶರಣಪ್ಪ ಕುಂಬಾರ.
ಕೊಪ್ಪಳ : ಕಳೆದ ಎರಡು ವರ್ಷಗಳ ಜವಳಿ ವ್ಯಾಪಾರವನ್ನು ಕಸಿದುಕೊಂಡ ಕೊರೋನಾ ವೈರಸ್ ನೇಕಾರರ ಬದುಕನ್ನು ಮೂರಾಬಟ್ಟಿಯಾಗಿಸಿದೆ..!
ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ಕಳೆದ ವರ್ಷದಿಂದ ಹಿಡಿದು, ಈ ವರ್ಷವು ಕೂಡಾ ಯಾವುದೇ ತರಹದ ಸಭೆ, ಸಮಾರಂಭಗಳು, ಕಾರ್ಯಕ್ರಮಗಳು, ಮದುವೆ, ಆಚರಣೆ ಇತ್ಯಾದಿಗಳು ಸಂಭ್ರಮದಿಂದ ಇದುವರೆಗೂ ಜರುಗಿಲ್ಲ. (ಕುಟುಂಬಗಳಿಗೆ ಮಾತ್ರ ಸೀಮಿತವಾಗಿ ಜರುಗಿವೆ) ತಮ್ಮ ತಮ್ಮ ಭಾಗದ ಬಹು ದೊಡ್ಡ ಜಾತ್ರೆಗಳು ನಡೆಯದಿರುವ ಈ ಸಂದರ್ಬದಲ್ಲಿ ಯಾವುದೇ ತರಹದ ಜವಳಿ ಖರೀದಿ ನಡೆದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಜವಳಿ ತಯಾರಿಕೆಯಲ್ಲಿ ತಮ್ಮ ಬದುಕನ್ನು ಕಂಡುಕೊಂಡಿದ್ದ ನೇಕಾರರ ಕುಟುಂಬಗಳು ಇಂದು ಬಿದಿಗೆ ಬಂದಿವೆ. ಕಚ್ಚಾ ವಸ್ತುಗಳ ಬೆಲೆ ಮುಗಿಲು ಮುಟ್ಟಿದೆ. ಆದರೆ, ನೇಕಾರರು ತಯಾರಿಸಿದ ಸೀರೆ ಸೇರಿದಂತೆ ಮಗ್ಗಗಳಿಂದ ತಯಾರಾದ ವಸ್ತುಗಳ ಬೆಲೆ ಪಾತಾಳ ಕಂಡಿದೆ. 4 ಸಾವಿರ ರೂಪಾಯಿಗಳಿಗೆ ಲಭ್ಯವಾಗುತ್ತಿದ್ದ ಕಚ್ಚಾ ರೇಷ್ಮೆ ಇಂದು 5200 ರೂಪಾಯಿಗಳಿಗೆ ಬೆಲೆ ಏರಿಕೆ ಕಂಡಿದೆ. 250 ರೂಪಾಯಿಗಳಿಗೆ ಸಿಗುತ್ತಿದ್ದ ನೂಲು ಇಂದು 580 ರೂಪಾಯಿಗಳ ದರಕ್ಕೆರಿದೆ. ಈ ಮೊದಲು ಆರು ವಾರದ ಒಂದು ಸೀರೆಗೆ 500 ರೂಪಾಯಿಗಳ ಕೂಲಿ ಸಿಗುತ್ತಿತ್ತು. ಈಗ ಎಲ್ಲಾ ಕರ್ಚು ತೆಗೆದರೆ, 200 ರೂಪಾಯಿಗಳ ಕೂಲಿಗೆ ಬಂದು ನಿಂತಿದೆ. ನೇಕಾರರು ನೇಯ್ದ ಸೀರೆಗಳಿಗೆ ಬೇಡಿಕೆ ಕೊರತೆ ಮಧ್ಯೆ ಕೊರೋನಾ ಹೊಡೆತ ಪೆಟ್ಟಿನ ಮೇಲೆ ಪೆಟ್ಟು ಬಿದ್ದು , ನೂಲಿಗೆ ಶರಣಾಗುವ ಪರಿಸ್ಥಿತಿ ನೇಕಾರ ಕುಟುಂಬಗಳಿಗೆ ಎದುರಾಗಿದೆ ಎಂದು ಕಮತಗಿ ಪಟ್ಟಣದ ಹನುಮಂತ ಕುಬೇರಪ್ಪ ಗೋಕಾವಿ ಮನದಾಳದಿಂದ ತಮ್ಮ ಅಭಿಪ್ರಾಯ ಹಂಚಿಕೊಂಡರು. ನೇಕಾರರ ಬದುಕಿಗೆ ಸರಕಾರ ಕೂಡಲೇ ಸ್ಪಂದಿಸಬೇಕಾಗಿರುವುದು ಅವಶ್ಯವಿದೆ..!!