ಮಹಾಂತೇಶ ಚಕ್ರಸಾಲಿ
ಕೃಷಿಪ್ರಿಯ ನ್ಯೂಸ್ |
ಕೊಪ್ಪಳ : ಜನೇವರಿ 22-2024 ರಂದು ಸೋಮವಾರ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ಲೋಕಾರ್ಪಣೆ ಹಾಗೂ ಶ್ರೀರಾಮಲಲ್ಲ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯಂದು ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮನಾಳ ಗ್ರಾಮದಲ್ಲಿ ನಗರವೊಂದಕ್ಕೆ ಶ್ರೀರಾಮ ನಗರ ಎಂದು ನಾಮಕರಣ ಮಾಡಿರುವುದು ವಿಶೇಷ..!
ಶ್ರೀರಾಮನ ಭಂಟ ಹನುಮ ಜನಿಸಿದ ನಾಡು ನಮ್ಮ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕಿಷ್ಕಿಂದೆ ಅಂಜನಾದ್ರಿ ಬೆಟ್ಟ ಎಂಬುದು ನಮ್ಮ ಸೌಭಾಗ್ಯ. ಅಷ್ಟೇ ಅಲ್ಲದೆ ನಮ್ಮ ಜಿಲ್ಲೆಯಲ್ಲಿ ಅನೇಕ ಹಳ್ಳಿಗಳು ಹನುಮನ ಹಾಗೂ ರಾಮನ ಹೆಸರಲ್ಲಿ ಗುರುತಿಸಿಕೊಂಡಿವೆ. ಅದರಲ್ಲಿ ಹನುಮಂತನ ತಳುಕು ಹಾಕಿಕೊಂಡಿರುವ ಹನುಮನಾಳ ಗ್ರಾಮವೂ ಕೂಡಾ ಒಂದು. ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ಲೋಕಾರ್ಪಣೆ ಹಾಗೂ ಶ್ರೀರಾಮಲಲ್ಲ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯ ದಿನದಂದು ಹನುಮನಾಳ ಗ್ರಾಮದ 4ನೇ ವಾರ್ಡಿನಲ್ಲಿ ಗ್ರಾಮಸ್ಥರು ಶ್ರೀರಾಮ ಮತ್ತು ಹನುಮಂತನ ಭಾವಚಿತ್ರ ಇರಿಸಿ ವಿಶೇಷ ಪೂಜೆ ನೆರವೇರಿಸುವ ಮೂಲಕ ವಾರ್ಡಿಗೆ ಶ್ರೀರಾಮ ನಗರ ಎಂದು ನಾಮಕರಣ ಮಾಡಿ ಅಂದಿನ ದಿನ ಸದಾ ನೆನಪುಳಿಯುವಂತೆ ಮಾಡಿದ್ದಾರೆ. ಸಂಜೆ ಮಹಿಳೆಯರು ಹಾಗೂ ಮಕ್ಕಳು ದೀಪ ಬೆಳಗಿಸಿ ಶ್ರೀರಾಮೋತ್ಸವದ ಸಂಭ್ರಮಕ್ಕೆ ಸಾಕ್ಷಿಯಾದರು.
ಈ ಸುಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ಮಂಜುನಾಥ ಜೋಗೊಂಡರ, ಯಲ್ಲಪ್ಪ ಯಾವಗಲ್, ಬಸಯ್ಯ ಹಿರೇಮಠ, ಯಲ್ಲಪ್ಪ ಬೇನಾಳ, ತೇವರಪ್ಪ ಚಿಕ್ಕನಾಲ, ರೋಹಿತ್ ಮಲ್ಲಾಡದ ಸೇರಿದಂತೆ ಗ್ರಾಮದ ಗುರುಹಿರಿಯರು ಇದ್ದರು.