ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕೊಪ್ಪಳ: ಪ್ರಯಾಣಿಕರನ್ನು ತುಂಬಿಸಿಕೊಂಡು ಸಂಚರಿಸುತಿದ್ದ ಸಾರಿಗೆ ನಿಗಮದ ಬಸ್ಸೊಂದು ರಸ್ತೆಬದಿ ವಾಲಿನಿಂತಿದ್ದು, ಅದೃಷ್ಟವಶಾತ್ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾದ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಬಿಜಕಲ್ ಗ್ರಾಮದ ಬಳಿ ಬುಧವಾರ ಮದ್ಯಾಹ್ನ ಮೂರುಗಂಟೆ ಸುಮಾರಿಗೆ ನಡೆದಿದೆ.
ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ಕುಷ್ಟಗಿ ಡಿಪೋಗೆ ಸೇರಿದ ಬಸ್ ಇದಾಗಿದ್ದು, ಪಟ್ಟಣದ ಬಸ್ ನಿಲ್ದಾಣದಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರನ್ನು ತುಂಬಿಸಿಕೊಂಡು ತಾಲೂಕಿನ ಗ್ವಾತಗಿ ಗ್ರಾಮದ ಕಡೆಗೆ ದೋಟಿಹಾಳ ಮಾರ್ಗವಾಗಿ ಪ್ರಯಾಣಿಸುತಿದ್ದ ಸಂದರ್ಭದಲ್ಲಿ ಬಿಜಕಲ್ ಗ್ರಾಮದ ಬಳಿ ಎದುರುಗೊಂಡು ಬಂದ ಮತ್ತೊಂದು ವಾಹನಕ್ಕೆ ದಾರಿ ಬಿಟ್ಟುಕೊಡುವ ಸಂದರ್ಭದಲ್ಲಿ ಬಸ್ಸಿನ ಚಕ್ರಗಳು ರಸ್ತೆ ಬದಿರ ಮಣ್ಣಲ್ಲಿ ಸಿಲುಕಿ ವಾಲಿಕೊಂಡಿದೆ. ಪ್ರಯಾಣಿಕರು ಕೂಡಲೇ ಬಸ್ಸಿನೊಳಗಿಂದ ಆಚೆ ಬಂದಿದ್ದು, ಸಂಪೂರ್ಣ ಬಸ್ ವಾಲಿ ಪಲ್ಟಿಯಾಗಿದ್ದರೆ ಭಾರಿ ಅನಾಹುತವೆ ಸಂಭವಿಸುತಿತ್ತು. ಅದೃಷ್ಟವಶಾತ್ ಯಾರಿಗೂ ತೊಂದರೆಯಾಗಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.