ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕೊಪ್ಪಳ: ಆಕಸ್ಮಿಕವಾಗಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಮನೆಯೊಂದು ಧಗಧಗನೇ ಬೆಂಕಿ ಹತ್ತಿ ಉರಿದ ಘಟನೆ ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ಗುರುವಾರ ಬೆಳಿಗ್ಗೆ 10 ರಿಂದ 11 ಗಂಟೆಯ ಆಸುಪಾಸಿನಲ್ಲಿ ನಡೆದಿದೆ.
ಪಟ್ಟಣದ ನಿವಾಸಿ ನಿವೃತ್ತ ತಹಸೀಲ್ದಾರ್, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಮುಖಂಡ ಚಂದ್ರಶೇಖರಯ್ಯ ಸ್ವಾಮಿ ಹಿರೇಮಠ ಎಂಬುವರಿಗೆ ಸೇರಿದ ಮಹಡಿ ಮನೆ ಇದಾಗಿದೆ. ಕೆಳ ಮಹಡಿಯ ಮನೆಗೆ ಬೆಂಕಿ ತಗುಲಿದ್ದು, ಮನೆಯಲ್ಲಿದ್ದ ಗೃಹೋಪಯೋಗಿ ಸಾಮಗ್ರಿ ಸೇರಿದಂತೆ ಕೃಷಿ ಉಪಕರಣಗಳಾದ ಡ್ರಿಪ್ ಪೈಪುಗಳು, ಪರ್ನಿಚರ್ಸ್, ಟಿವಿ, ಸಿಸಿ ಕ್ಯಾಮರಾ, ಪಿಒಪಿ ಸೇರಿದಂತೆ ಬಹುತೇಕ ಕೆಳಮನೆ ಬೆಂಕಿಗೆ ಆಹುತಿಯಾಗಿದೆ. ಮೆಲ್ಮಹಡಿಗಳು ಹೊಗೆನಟ್ಟಿಕೊಂಡಿವೆ. ಬೆಂಕಿ ಕಾಣಿಸಿಕೊಂಡಾಗ ಅಕ್ಕಪಕ್ಕದ ಮನೆಯವರು ಬೆಂಕಿ ನಂದಿಸಲು ಮುಂದಾಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಕುಷ್ಟಗಿ ಹಾಗೂ ಯಲಬುರ್ಗಾ ಅಗ್ನಿಶಾಮಕ ದಳ ಬೆಂಕಿ ನಂದಿಸುವಲ್ಲಿ ಹರಸಾಹಸ ಪಟ್ಟಿದ್ದಾರೆ. ಮೆಲ್ಮಹಡಿಯಲ್ಲಿದ್ದ ಮೂವರು ಮಹಿಳೆಯರನ್ನು ರಕ್ಷಣೆ ಮಾಡಿದ್ದಾರೆ. ಕುಷ್ಟಗಿ ಅಗ್ನಿಶಾಮಕ ಠಾಣೆಯ 23 ಪಾಯರ್ ಮ್ಯಾನ್, ಯಲಬುರ್ಗಾ ಠಾಣೆಯ 7 ಜನ ಪಾಯರ್ ಮ್ಯಾನ್’ಗಳು ಈ ಕಾರ್ಯಾಚರಣೆಯಲ್ಲಿ ಜೀವದ ಹಂಗು ತೊರೆದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಕಿಯಿಂದ ಹಾನಿಗೊಳಗಾದ ಮನೆ ಮಾಲಿಕ ನಿವೃತ್ತ ತಹಸೀಲ್ದಾರ್ ಚಂದ್ರಶೇಖರಯ್ಯ ಸ್ವಾಮಿ ಹಿರೇಮಠ ಅವರು, ಯಾರಿಗೂ ಜೀವಹಾನಿಯಾಗಿಲ್ಲ. ಅಂದಾಜು ಒಂದುವರೆ ಕೋಟಿ ರೂಪಾಯಿ ಹಾನಿಯಾಗಿದೆ ಎಂದು ದುಃಖ ತೋಡಿಕೊಂಡರು.