ಮುನೇತ್ರ
ಕೃಷಿಪ್ರಿಯ ನ್ಯೂಸ್ |
ಕುಷ್ಟಗಿ: ಹೆಣ್ಣನ್ನು ನಿಕೃಷ್ಟವಾಗಿ ನೋಡುವ ಕಾಲದಲ್ಲಿ 9ನೇ ವಯಸ್ಸಿಗೆ ಮದುವೆಯಾಗಿ, 17ನೇ ವಯಸ್ಸಿನಲ್ಲಿ ಶಿಕ್ಷಕಿಯಾದ ಸಾವಿತ್ರಿಬಾಯಿ ಪುಲೆ ಹಲವು ಸಂಕಷ್ಟಗಳ ನಡುವೆಯೇ ಅಸಂಖ್ಯಾತ ಹಿಂದುಳಿದ, ಬಡ ಶೂದ್ರ ಹೆಣ್ಣುಮಕ್ಕಳಿಗೆ ಅಕ್ಷರದ ಅವ್ವಳಾಗಿ ಕೀರ್ತಿ ಪಡೆದರು ಎಂದು ಪ್ರಗತಿಪರ ಚಿಂತಕ ಎಂ.ವಿರೂಪಾಕ್ಷಿ ಅವರು ಹೇಳಿದರು.
ಶ್ರೀಮತಿ ಬಸಮ್ಮ ಮರಿಯಪ್ಪ ತಾಳಕೇರಿ ಟ್ರಸ್ಟ್ ವತಿಯಿಂದ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ನಡೆದ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ಸಾವಿತ್ರಿಬಾಯಿ ಫುಲೆ ಉತ್ತಮ ಶಿಕ್ಷಕಿ ಪುರಸ್ಕಾರ 2024 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಾವಿತ್ರಿಬಾಯಿ ಅವರು ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಲು ಮನೆಮನೆಗೆ ತೆರಳಿ, ಶಾಲೆಗೆ ಕರೆದುಕೊಂಡು ಬರುತ್ತಿದ್ದರು. ಹೆಣ್ಣುಮಕ್ಕಳು ಶಿಕ್ಷಣ ಪಡೆಯಬಾರದು ಎನ್ನುವ ಕಾರಣಕ್ಕೆ ಆ ಸಂದರ್ಭದಲ್ಲಿ ಸಮಾಜ ಅವರಿಗೆ ಸಾಕಷ್ಟು ಅವಮಾನ ಮಾಡುತ್ತದೆ. ಅವೆಲ್ಲವನ್ನೂ ಅವರು ಸಮರ್ಥವಾಗಿ ಎದುರಿಸಿ ಭಾರತದ ಮೊದಲ ಶಿಕ್ಷಕಿಯಾಗಿ ಹೊರಹೊಮ್ಮಿದ ಸಾವಿತ್ರಿಬಾಯಿ ಇಂದಿನ ಶಿಕ್ಷಕ ವರ್ಗಕ್ಕೆ ಮಾದರಿಯಾಗಿದ್ದಾರೆ. ಅವರ ಹೆಸರಿನಲ್ಲಿ ಇಂದು ಉತ್ತಮ ಶಿಕ್ಷಕಿ ಪುರಸ್ಕಾರ ಪಡೆಯುವ ಶಿಕ್ಷಕಿಯರು ಸಾವಿತ್ರಿಬಾಯಿ ಪುಲೆಯವರಂತೆ ಸಮಾಜಮುಖಿಯಾಗಿ ತಮ್ಮ ಶಿಕ್ಷಕ ವೃತ್ತಿ ನಿಭಾಯಿಸಬೇಕು ಎಂದರು. ಸಂಸ್ಥೆಯ ಪ್ರಮುಖ ಸುಕರಾಜ ತಾಳಕೇರಿ ಅವರು ಮಾತನಾಡಿ, ಇಂದಿನ ದಿನಗಳಲ್ಲಿ ಸರ್ಕಾರದ ಉತ್ತಮ ಶಿಕ್ಷಕರ ಪ್ರಶಸ್ತಿ ಪುರಸ್ಕಾರಗಳು ಮಾರಾಟದ ಸರಕುಗಳಾಗಿವೆ. ನಿಜವಾದ ವೃತಿ ಕಳಕಳಿಯಿರುವ ಶಿಕ್ಷಕರಿಗೆ ಪ್ರಶಸ್ತಿ ಗೌರವ ಸಿಗಬೇಕಿದೆ. ಈ ನಿಟ್ಟಿನಲ್ಲಿ ಪ್ರಸಕ್ತ ವರ್ಷದಿಂದ ನಮ್ಮ ಟ್ರಸ್ಟ್ ವತಿಯಿಂದ ಸಾರ್ಥಕ ಸೇವೆಯಲ್ಲಿರುವ ಶಿಕ್ಷಕಿಯರನ್ನು ಗುರುತಿಸಿ ಜಿಲ್ಲಾ ಮಟ್ಟದ ಸಾವಿತ್ರಿಬಾಯಿ ಫುಲೆ ಉತ್ತಮ ಶಿಕ್ಷಕಿ ಪುರಸ್ಕಾರ ನೀಡಿ ಗೌರವಿಸಲಾಗುತ್ತದೆ ಎಂದರು.
ಸಾಹಿತಿ ದಾನಪ್ಪ ನಿಲೋಗಲ್, ಪ್ರಾಚಾರ್ಯ ಡಾ.ಎಸ್.ವಿ.ಡಾಣಿ, ಬಿಇಒ ಸುರೇಂದ್ರ ಕಾಂಬಳೆ, ಮಾಲತಿ ನಾಯಕ, ಮಾಲಾ ಪಡಸಾಲಿಮನಿ ಅವರು ಮಾತನಾಡಿದರು. ಶಿಕ್ಷಕ ಡಾ.ಜೀವನಸಾಬ ಬಿನ್ನಾಳ ಅವರು ಭಾರತದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಪುಲೆ ಜೀವನ ಸಾಧನೆ ಕುರಿತು ವಿಶೇಷ ಉಪನ್ಯಾಸ ನೀಡಿದರು. ಇದೇವೇಳೆ ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಶಿಕ್ಷಕಿಯರಿಗೆ ಜಿಲ್ಲಾ ಮಟ್ಟದ ಸಾವಿತ್ರಿಬಾಯಿ ಫುಲೆ ಉತ್ತಮ ಶಿಕ್ಷಕಿ ಪುರಸ್ಕಾರ – 2024 ನೀಡಿ ಗೌರವಿಸಲಾಯಿತು. ಅದೇರೀತಿ ಡಾ.ಬಿ.ಆರ್. ಅಂಬೇಡ್ಕರ್ ಫಿಲೋಶಿಪ್ ಪುರಸ್ಕಾರ ಪಡೆದ ಸಾಧಕರನ್ನು ಸನ್ಮಾನಿಸಲಾಯಿತು.
ಶ್ರೀಮತಿ ಬಸಮ್ಮ ತಾಳಕೇರಿ ಕಾರ್ಯಕ್ರಮ ಉದ್ಘಾಟಿಸಿದರು. ಗಣ್ಯರಾದ ಟಿ.ರತ್ನಾಕರ, ಎಚ್. ಎನ್. ಬಡಿಗೇರ, ಮುಖ್ಯಶಿಕ್ಷಕಿ ನಿಂಗಮ್ಮ ತುಂಬದ, ಶಂಷಾದ ಬೇಗಂ ಕನಕಗಿರಿ, ಎಂ.ಆರ್. ಬೇರಿ, ಶಿವಪ್ಪ ಭಜಂತ್ರಿ, ಅಲ್ಲಮಪ್ರಭು ಪೂಜಾರ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಬಾಲಚಂದ್ರ ಇತರರು ಇದ್ದರು. ಶರಣಪ್ಪ ತೆಮ್ಮಿನಾಳ, ಮಹೇಶ ಹಡಪದ ಕಾರ್ಯಕ್ರಮ ನಿರೂಪಿಸಿದರು.
ಸಾವಿತ್ರಿಬಾಯಿ ಅವರು ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಲು ಮನೆಮನೆಗೆ ತೆರಳಿ, ಶಾಲೆಗೆ ಕರೆದುಕೊಂಡು ಬರುತ್ತಿದ್ದರು. ಹೆಣ್ಣುಮಕ್ಕಳು ಶಿಕ್ಷಣ ಪಡೆಯಬಾರದು ಎನ್ನುವ ಕಾರಣಕ್ಕೆ ಆ ಸಂದರ್ಭದಲ್ಲಿ ಸಮಾಜ ಅವರಿಗೆ ಸಾಕಷ್ಟು ಅವಮಾನ ಮಾಡುತ್ತದೆ. ಅವೆಲ್ಲವನ್ನೂ ಅವರು ಸಮರ್ಥವಾಗಿ ಎದುರಿಸಿ ಭಾರತದ ಮೊದಲ ಶಿಕ್ಷಕಿಯಾಗಿ ಹೊರಹೊಮ್ಮಿದ ಸಾವಿತ್ರಿಬಾಯಿ ಇಂದಿನ ಶಿಕ್ಷಕ ವರ್ಗಕ್ಕೆ ಮಾದರಿಯಾಗಿದ್ದಾರೆ.
– ಎಂ.ವಿರೂಪಾಕ್ಷಿ, ಪ್ರಗತಿಪರ ಚಿಂತಕ.