ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕೊಪ್ಪಳ: 75ನೇ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಜಿಲ್ಲೆಯ ಕುಷ್ಟಗಿ ಪಟ್ಟಣದ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ಕೇಂದ್ರೀಯ ಬಸ್ ನಿಲ್ದಾಣ ಕಟ್ಟಡದ ಮೇಲೆ ಅಧಿಕಾರಿಗಳು ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರ ಇರಿಸದೇ ಗಲೀಜುಗೊಂಡ ರಾಷ್ಟ್ರಧ್ವಜಾರೋಹಣ ಮಾಡಿ ಅಪಮಾನ ಎಸಗಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ಶುಕ್ರವಾರ ಬೆಳಿಗ್ಗೆ 10.30ರ ಸುಮಾರಿಗೆ ನಡೆಯಿತು.
ನಿಲ್ದಾಣದ ಕಟ್ಟಡದ ಮೇಲೆ ರಾಷ್ಟ್ರಧ್ವಜಾರೋಹಣ ವೇಳೆ ಕೊಳೆಮೆತ್ತಿ ಗಲೀಜುಗೊಂಡ ರಾಷ್ಟ್ರ ಭಾವುಟ ಬಳಸಿದ್ದನ್ನು ಕಂಡ ಸಾರ್ವಜನಿಕರು, ಸಾರಿಗೆ ಸಂಸ್ಥೆಯ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಜೊತೆಗೆ ಧ್ವಜಾರೋಹಣ ವೇಳೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಫೋಟೋ ಹೊರತುಪಡಿಸಿ ಧೂಳು ಮೆತ್ತಿದ್ದ ಮಹಾತ್ಮಾ ಗಾಂಧೀಜಿ ಭಾವಚಿತ್ರವನ್ನಷ್ಟೇ ಪೂಜಿಸಿದ್ದಾರೆ ಎಂದು ಆರೋಪಿಸಿ ಕೆಲ ನಿಮಿಷ ಪ್ರತಿಭಟಿಸಿದರು. ಡೀಪೋ ವ್ಯವಸ್ಥಾಪಕ ಸುಂದರಗೌಡ ಪಾಟೀಲ್ ಅವರು ನಿಲ್ದಾಣದ ನಿಯಂತ್ರಣಾಧಿಕಾರಿಗಳು ಡಾ.ಅಂಬೇಡ್ಕರ್ ಅವರ ಭಾವಚಿತ್ರ ಇಟ್ಟು ಪೂಜಿಸುವುದನ್ನು ಮರೆತಿದ್ದಾರೆ. ಬಳಿಕ ಎಚ್ಚೆತ್ತು ಅಂಬೇಡ್ಕರ್ ಅವರ ಫೋಟೋ ಇರಿಸಿ ಗೌರವಿಸಲಾಗಿದೆ. ಇನ್ಮುಂದೆ ಈ ರೀತಿ ಆಗದಂತೆ ಕ್ರಮವಹಿಸುತ್ತೇನೆ ಕ್ಷಮಿಸುವಂತೆ ಕೋರಿದರು.
ಗಲೀಜುಗೊಂಡ ರಾಷ್ಟ್ರ ಭಾವುಟ ಆರೋಹಣ ಹಾಗೂ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಭಾವಚಿತ್ರ ಇರಿಸದೇ ಗಣರಾಜ್ಯೋತ್ಸವಕ್ಕೆ ಅಪಮಾನ ಎಸಗಿದ್ದೀರಿ, ಇದಕ್ಕೆ ಕಾರಣರಾದವರ ವಿರುದ್ಧ ಕ್ರಮಕೈಗೊಳ್ಳಬೇಕು. ಇನ್ಮುಂದೆ ಈರೀತಿ ಆಗದಂತೆ ಸಿಬ್ಬಂದಿಗೆ ತಿಳಿಹೇಳಬೇಕು, ಪುನರಾವರ್ತನೆಗೊಂಡರೆ ಬಸ್ ನಿಲ್ದಾಣಕ್ಕೆ ಹಾಗೂ ಡಿಪೋಗೆ ಬೆಂಕಿ ಹಚ್ಚುವುದಾಗಿ ಡಿಪೋ ವ್ಯವಸ್ಥಾಪಕ ಸುಂದರಗೌಡ ಪಾಟೀಲ್ ಅವರಿಗೆ ಸಾರ್ವಜನಿಕರು ಎಚ್ಚರಿಕೆ ನೀಡಿದರು.
ಕೆಲ ಹಿಂದೆ ರಾಷ್ಟ್ರೀಯ ಹಬ್ಬ ಆಚರಣೆ ಸಂದರ್ಭದಲ್ಲಿ ಡಾ.ಅಂಬೇಡ್ಕರರ ಫೋಟೋ ಇರಿಸದೇ ಅಪಮಾನಿಸಿದ ಘಟನೆ ನಡೆದಿದ್ದನ್ನು ಈಗ ಸ್ಮರಿಸಬಹುದು.