KRPP ಜತೆ ಹೊಂದಾಣಿಕೆ ಬಯಸಿದಲ್ಲಿ ಬಿಜೆಪಿಗೆ ಲೋಕ ಚುನಾವಣೆಯಲ್ಲಿ ಬೆಂಬಲ – ಜನಾರ್ದನ ರೆಡ್ಡಿ!

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ: ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಜೊತೆ ಹೊಂದಾಣಿಕೆ ಬಯಸಿದಲ್ಲಿ ಬಿಜೆಪಿಯೊಂದಿಗೆ ಲೋಕಸಭೆ ಚುನಾವಣೆಯಲ್ಲಿ ಕೆಲಸ ಮಾಡಲು ಸಿದ್ದನಿದ್ದೇನೆ ಎಂದು ಗಂಗಾವತಿ ಶಾಸಕ ಕೆ.ಆರ್.ಪಿ.ಪಿ. ಸಂಸ್ಥಾಪಕ ಗಾಲಿ ಜನಾರ್ಧನ ರೆಡ್ಡಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ಕೆಆರಪಿಪಿ ಮುಖಂಡ, ನಿವೃತ್ತ ತಹಸೀಲ್ದಾರ್ ಸಿ.ಎಂ.ಹಿರೇಮಠರ ಮನೆ ಅಗ್ನಿ ಅವಘಡಕ್ಕೀಡಾದ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ಅವರ ಮನೆಗೆ ಭೇಟಿ ನೀಡಿದ ಬಳಿಕ ಸ್ಥಳೀಯ ಸುದ್ದಿಗಾರರು ಬಿಜೆಪಿಗೆ ವಾಪಾಸು ಸೇರುವ ವದಂತಿ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಇಡೀ ಭಾರತ ದೇಶದ ಜನತೆ ನರೇಂದ್ರ ಮೋದಿಯವರೇ ಮತ್ತೆ ಪ್ರಧಾನಮಂತ್ರಿ ಆಗಲು ಆಶಯ ಹೊಂದಿದ್ದಾರೆ. ಅದೇ ನನ್ನ ಅಪೇಕ್ಷೆಯು ಆಗಿದೆ. ಹೀಗಾಗಿ ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಬಿಜೆಪಿಯೊಂದಿಗೆ ಹೊಂದಣಿಕೆಯಡಿ ಚುನಾವಣೆ ಎದುರಿಸಲು ತಾವು ಸಿದ್ಧನಿರುವುದಾಗಿ ತಿಳಿಸಿದರು.

ಆದರೆ, ಕಾಂಗ್ರೆಸ್ ಪಕ್ಷದೊಂದಿಗೆ ಎಂದಿಗೂ ಹೋಗುವುದಿಲ್ಲ ಹೋಗುವ ಪರಿಸ್ಥಿತಿ ಉದ್ಭವವಾಗುವುದಿಲ್ಲ. ಈ ಹಿಂದೆ ನರೇಂದ್ರ ಮೋದಿಯವರಿಗಾಗಿ ಬಿಜೆಪಿ ಸಪೋರ್ಟ್ ಮಾಡುತ್ತಾ ಬಂದಿದ್ದೇನೆ. ಇನ್ಮುಂದೆಯೂ ಅವರಿಗಾಗಿ ಬಿಜೆಪಿ ಸಪೋರ್ಟ್ ಮಾಡಲು ಸಿದ್ಧನಿದ್ದೇನೆ ಎಂದ ಜನಾರ್ದನ ರೆಡ್ಡಿ ಅವರು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ತಮ್ಮ ಜೊತೆಗೆ ಹೊಂದಾಣಿಕೆ ಬಯಸದಿದ್ದರೂ ಪರವಾಗಿಲ್ಲ. ತಮ್ಮ ಪಕ್ಷದಿಂದ ಕೊಪ್ಪಳ, ರಾಯಚೂರು, ಬಾಗಲಕೋಟೆ, ಬಳ್ಳಾರಿ ಮತ್ತು ಚಿತ್ರದುರ್ಗ ಈ ಐದು ಕ್ಷೇತ್ರದಲ್ಲಿ ಈಗಾಗಲೇ ಚುನಾವಣೆ ಸಿದ್ಧತೆ ಕೆಲಸ ಮಾಡುತ್ತಿರುವುದಾಗಿ ತಿಳಿಸಿದರು.

ಇಕ್ಬಾಲ್ ಅನ್ಸಾರಿ ವೇಸ್ಟ್ ಬಾಡಿ : ಗಂಗಾವತಿಯಲ್ಲಿ ತಮಗೆ ಇಕ್ಬಾಲ್ ಅನ್ಸಾರಿ ಅವರಿಂದ ಪದೆಪದೇ ವಾಗ್ದಾಳಿ ನಡೆಯುತ್ತಿರುವ ಕುರಿತು ಪ್ರತಿಕ್ರಿಯೆ ನೀಡಿದ ಜನಾರ್ಧನ ರೆಡ್ಡಿ ಅವರು, ಚುನಾವಣೆಗೆ ಇಕ್ಬಾಲ್ ಅನ್ಸಾರಿ ಕಾಂಗ್ರೆಸ್ ಪಾರ್ಟಿಯಲ್ಲಿ ವೇಸ್ಟ್ ಬಾಡಿ ಆಗಿದ್ದಾರೆ. ಲೋಕಸಭಾ ಚುನಾವಣೆ ಬಳಿಕ ಅವರನ್ನು ಕಸದಬುಟ್ಟಿಗೆ ಎಸೆಯಲಿದ್ದಾರೆ. ಹೀಗಾಗಿ ಅನ್ಸಾರಿ ಹೇಳಿಕೆ ನಮಗೆ ಯಾವ ಲೆಕ್ಕಕ್ಕೂ ಬರುವುದಿಲ್ಲ ಎಂದು ರೆಡ್ಡಿ ಅವರು ಕುಟುಕಿದರು.

ಅಂಜನಾದ್ರಿ ಅಭಿವೃದ್ಧಿಗೆ ದೊಡ್ಡ ಯೋಜನೆ ಮಾಡಿರುವೆ: ಶ್ರೀ ರಾಮ ಜನ್ಮಭೂಮಿ ಅಯೋಧ್ಯೆ ಮಾದರಿಯಲ್ಲಿ ಮುಂದಿನ ದಿನಗಳಲ್ಲಿ ಅಂಜನಾದ್ರಿಯನ್ನು ಅಭಿವೃದ್ಧಿಮಾಡಲು ದೊಡ್ಡ ಯೋಜನೆ ರೂಪಿಸಲಾಗಿದೆ. ಹೊಸಪೇಟೆಯ ಶ್ರೀಪಾದ ಎನ್ನುವವರು ಅದ್ಭುತವಾದ ಯೋಜನೆ ಮಾಡಿದ್ದಾರೆ, ಕಲಿಯುಗದ ವೈಕುಂಠ ಎಂದು ಭಾವಿಸುವ ಆ ಮಟ್ಟಕ್ಕೆ ಭಗವಂತನೇ ಸೃಷ್ಟಿಸಿರುವ ತುಂಗಭದ್ರಾ ನದಿ, ಬೆಟ್ಟದ ಸಾಲುಗಳು, ಅರಣ್ಯ ಸೇರಿದಂತೆ ಎಲ್ಲವನ್ನು ಒಳಗೊಂಡಿದ್ದು, ಅದನ್ನು ಶ್ರೀ ವಾಲ್ಮೀಕಿ ಅಭಯಾರಣ್ಯ ಎಂದು ನಾಮಕರಣ ಮಾಡಬೇಕು ಎಂದು ಸರ್ಕಾರಕ್ಕೆ ವಿಧಾನಸಭೆಯಲ್ಲಿ ಒತ್ತಾಯಿಸಿದ್ದೇನೆ. ಅದೇ ರೀತಿಯಲ್ಲಿ ಅಭಿವೃದ್ಧಿ ಕಾರ್ಯಗಳು ಕೂಡಾ ಸಾಕ್ಷಾತ್ ಭಗವಂತ ಕೂಡಾ ಭೂಲೋಕದ ಕಿಷ್ಕಿಂದೆಯಲ್ಲಿದ್ದಾನೆ ಎಂಬ ರೀತಿಯಲ್ಲಿ ಹಳೆಯ ವಿಜಯನಗರ ಸಾಮ್ರಾಜ್ಯದ ಸ್ಮಾರಕ ಮಾದರಿಯಲ್ಲಿ ವಿನ್ಯಾಸ ಮಾಡಲಾಗುತ್ತಿದೆ. ಇನ್ನೂ ಎರ್ಡ್ಮೂರು ತಿಂಗಳಲ್ಲಿ ವಿನ್ಯಾಸ ನೋಡಬಹುದು. ಮೂಲ ಅಂಜನಾದ್ರಿಗೆ ಯಾವುದೇ ತರಹ ಧಕ್ಕೆ ಬರದಂತೆ ಅಭಿವೃದ್ಧಿ ಪಡಿಸಲಾಗುತ್ತದೆ. ರಾಜ್ಯ ಕಾಂಗ್ರೆಸ್ ಸರ್ಕಾರ ನೀಡಿರುವ 20 ಕೋಟಿ ಹಣದಲ್ಲಿ ಶೌಚಾಲಯ, ಶಾಪಿಂಗ್ ಮಹಲ್, ಯಾತ್ರಾ ನಿವಾಸ ನಿರ್ಮಾಣವಾಗುತ್ತಿದೆ ಎಂದು ತಿಳಿಸಿದರು.

ಅಗ್ನಿ ಅವಘಡದಿಂದ ನಮ್ಮ ಪಕ್ಷದ ಮುಖಂಡ ಸಿಎಂ ಹಿರೇಮಠ ಅವರ ಮನೆ ಹಾನಿಯಾಗಿದೆ. ದೇವರ ದಯೆಯಿಂದ ಕುಟುಂಬದಲ್ಲಿ ಪ್ರಾಣಹಾನಿಯಾಗಿಲ್ಲ. ಸಿಎಂ ಹಿರೇಮಠ ಅವರಿಗೆ ಮಾರಲ್ ಸಪೋಟಾಗಿ ನಾನು ಸದಾ ಇರುತ್ತೇನೆ ಎಂದು ಶಾಸಕ ಗಾಲಿ ಜನಾರ್ಧನ ರೆಡ್ಡಿ ಅವರು ಹೇಳಿದರು.

ಈ ವೇಳೆ ಕೆಆರ್‌ಪಿಪಿ ರಾಜ್ಯ ಉಪಾಧ್ಯಕ್ಷ ಮನೋಹರಗೌಡ ಹೇರೂರು, ಜಿಲ್ಲಾಧ್ಯಕ್ಷ ಸಂಗಪ್ಪ ಬಾದವಾಡಗಿ, ಮುಖಂಡರಾದ ಸಿ.ಎಂ.ಹಿರೇಮಠ, ಸ್ಥಳೀಯ ಪ್ರಮುಖರಾದ ಶಿವಶಂಕರಪ್ಪ ಕುರಿ, ಶಶಿಧರ ಮುದೇನೂರು, ರಾಮಣ್ಣ ನಾಯಕ, ಯಮನೂರಪ್ಪ ಚೌಡಕಿ ಇತರರಿದ್ದರು.