ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕೊಪ್ಪಳ: ಭವಿಷ್ಯದ ಶಿಕ್ಷಣಕ್ಕಾಗಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ಯಶಸ್ಸು ಹೊಂದುವುದು ವಿದ್ಯಾರ್ಥಿಗಳಿಗೆ ಅನಿವಾರ್ಯವಾಗಿದೆ ಎಂದು ಹಿರಿಯ ಉಪನ್ಯಾಸಕ ಹನುಮೇಶ ಡಬೇರ ಅವರು ಹೇಳಿದರು.
ಅವರು, ಜಿಲ್ಲೆಯ ಕುಷ್ಟಗಿ ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬಿಳ್ಕೋಡುಗೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು. ಪ್ರಸ್ತುತ ಸ್ಪರ್ಧಾತ್ಮಕ ಕಾಲ ಘಟ್ಟದಲ್ಲಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯಬೇಕು. ಆಗಲೇ ತಮಗಿಷ್ಟವಾದ ಕ್ಷೇತ್ರದಲ್ಲಿ ಅಧ್ಯಯನ ಮಾಡಲು ಅನುಕೂಲವಾಗಲಿದೆ ಎಂದರು.
ಸರ್ಕಾರವು ವಿದ್ಯಾರ್ಥಿಗಳು ಗುಣಾತ್ಮಕ ಫಲಿತಾಂಶ ಹೊಂದಲು ಮೂರು ಪರೀಕ್ಷೆಗಳನ್ನು ಆಯೋಜಿದೆ. ಆದರೆ, ವಿದ್ಯಾರ್ಥಿನಿಯರು ಮೊದಲ ಪರೀಕ್ಷೆಯಲ್ಲಿಯೇ ಉತ್ತಮ ಅಂಕ ಪಡೆಯಲು ಯತ್ನಿಸಬೇಕು. ಎರಡನೆಯದು ಮೂರನೆಯದು ಎಂಬ ಅದೃಷ್ಟದ ಪರೀಕ್ಷೆಗೆ ಮುಂದಾಗಬಾರದು ಎಂದು ಸಲಹೆ ನೀಡಿದ ಹನಮೇಶ ಡಬೇರ್ ಅವರು, ಉತ್ತಮ ಅಂಕ ಪಡೆದುಕೊಳ್ಳುವ ಮೂಲಕ ಕಾಲೇಜಿಗೆ ಕೀರ್ತಿ ತರಬೇಕು ಎಂದು ಹೇಳಿದರು.
ಅಧ್ಯಕ್ಷತೆವಹಿಸಿದ್ದ ಪ್ರಾಚಾರ್ಯ ಮಾಲಾ ಪಿ., ಉಪನ್ಯಾಸಕರಾದ ಡಾ.ವಿಜಯಕುಮಾರ, ಬಲರಾಮ ಜೋಷಿ, ಹಾಗೂ ಡಾ. ನಾಗರಾಜ ಹೀರಾ ಅವರು ಮಾತನಾಡಿದರು.
ಇದೇವೇಳೆ ಕಳೆದ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಕಾಲೇಜು ಟಾಪರ್ಸ್ ಗಳಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು. ಅದೇರೀತಿ ರಾಜ್ಯ ಮಟ್ಟದ ಸಿರಿಗನ್ನಡ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಪಡೆದ ಹದಿನೆಂಟು ವಿದ್ಯಾರ್ಥಿಗಳಿಗೆ ಸ್ವರ್ಣ ಪದಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಿರಿಗನ್ನಡ ಪ್ರತಿಭಾ ಪರೀಕ್ಷೆಗೆ ಹದಿನೆಂಟು ವಿಧ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ ಉಪನ್ಯಾಸಕರಾದ ಡಾ. ನಾಗರಾಜ ಹೀರಾ ಇವರಿಗೆ ಕನ್ನಡ ಕಣ್ಮಣಿ ಪ್ರಶಸ್ತಿ ಪದಕ ಪುರಸ್ಕಾರ ಪ್ರದಾನ ಮಾಡಲಾಯಿತು. ಬಳಿಕ ಪ್ರಥಮ ಪಿಯುಸಿ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿರುವ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಶುಭ ಕೋರಿದರು.
ಉಪನ್ಯಾಸಕರಾದ ದಾದಪೀರ್, ರಾಜಶೇಖರ ಹಿರೇಮಠ, ದೊಡ್ಡ ಬಸವ ಕುರಿ, ಯಮನೂರಪ್ಪ ಶ್ರೀದೇವಿ, ಶೋಭಾ, ಸಂತೋಷ ಕುಮಾರ್ ಉಪಸ್ಥಿತರಿದ್ದರು. ಪ್ರಹ್ಲಾದ ಕುಲಕರ್ಣಿ ಸ್ವಾಗತಿಸಿದರು, ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥರಾದ ಹೆಚ್. ಬಿ. ಚೌದ್ರಿಯವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.