ಬೆಳೆ ಹಾನಿ ಪರಿಹಾರ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಕರ್ನಾಟಕ ಜನದರ್ಶನ ವೇದಿಕೆ ಒತ್ತಾಯ

ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |

ಕೊಪ್ಪಳ: ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮಸಾಗರದಲ್ಲಿ ಬೆಳೆ ಹಾನಿ ಪರಿಹಾರ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಜನದರ್ಶನ ವೇದಿಕೆ ಫೆ.27 ರಂದು ಮಂಗಳವಾರ ಒತ್ತಾಯಿಸಿದೆ.

ಈ ಕುರಿತು ಬರೆದ ಮನವಿ ಪತ್ರವನ್ನು ಗ್ರಾಮದ ಕಂದಾಯ ನಿರೀಕ್ಷಕರ ಕಾರ್ಯಾಲಯದಲ್ಲಿ ಉಪ ತಹಸೀಲ್ದಾರ್ ರೇಣುಕಾ ಕಲಬಾವಿ ಅವರ ಮುಖಾಂತರ ಸಂಘಟನೆ ಕಾರ್ಯಕರ್ತರು ಸಲ್ಲಿಸಿದರು. ಈ ವೇಳೆ ಮಾತನಾಡಿದ ರಾಜ್ಯಾಧ್ಯಕ್ಷ ದೇವಪ್ಪ ಎಸ್ ಮೆಣಸಗಿ ಮಾತನಾಡಿ, ಹನುಮಸಾಗರ ಹೋಬಳಿ ಕೇಂದ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವವಾಗಿದೆ. ಪ್ರತಿ ವಾರ್ಡ್ನಲ್ಲಿ ಜೆಜೆಎಂ ಕಾಮಗಾರಿ ಹೇಳತೀರದಾಗಿದೆ. ಕೂಡಲೇ ಉಪ ತಹಸೀಲ್ದಾರರು ಗ್ರಾಮ ಪಂಚಾಯಿತಿ ಅಧಿಕಾರಿಗಳನ್ನು ಸಭೆ ಕರೆದು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಪ್ರತಿ ರೈತರಿಗೂ ಬೆಳೆವಿಮೆ ಸಿಗುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಎಚ್ಚೆತ್ತು ಬೆಳೆವಿಮೆ ಪರಿಹಾರ ಹಾಗೂ ಪ್ರತಿ ಗ್ರಾಮ ಪಂಚಾಯಿತಿಗೆ ಮೇವಿನ ಬ್ಯಾಂಕ್ ತೆರೆಯುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕು. ಬೇಡಿಕೆ ಈಡೇರಿಸದಿದ್ದರೆ ಮುಂದಿನ ದಿನಮಾನಗಳಲ್ಲಿ ಹೋಬಳಿ ವ್ಯಾಪ್ತಿಯ ಎಲ್ಲಾ ಗ್ರಾಮಸ್ಥರೊಡಗೂಡಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ವೇಳೆ ಕಂದಾಯ ನಿರೀಕ್ಷಕ ಉಮೇಶಗೌಡ ಸೇರಿ ಗ್ರಾ.ಪಂ. ಸದಸ್ಯ ಬಸವರಾಜ ದ್ಯಾವಣ್ಣವರ, ಕ. ರಾ. ರೈತ ಸಂಘ ಅಧ್ಯಕ್ಷ ಯಮನೂರಪ್ಪ ಮಡಿವಾಳರ, ಚಂದ್ರಪ್ಪ ಮೆಣಸಗಿ, ಸಂಗಪ್ಪ ಸಜ್ಜನ, ವೀರೇಶ್ ಕೊಪ್ಪಳ, ಮಹಾಂತೇಶ ಬೆಳಗಲ, ಗಂಗಪ್ಪ ಮಡಿವಾಳರ, ಬಸವರಾಜ ಕವಲೂರು, ಮೈಲಾರಪ್ಪ ಮಾಸ್ಟರ ಹಾಗೂ ಸಂಘಟನೆ ಪದಾಧಿಕಾರಿಗಳು ಮತ್ತು ಅನೇಕ ರೈತ ಬಾಂಧವರು ಉಪಸ್ಥಿತರಿದ್ದರು.