ಶರಣು ನಿಂಗಲಬಂಡಿ
ಕೃಷಿಪ್ರಿಯ ನ್ಯೂಸ್ |
ಕುಷ್ಟಗಿ : ಮತದಾನ ಮಾಡುವುದು ಪವಿತ್ರ ಕರ್ತವ್ಯ, ಪ್ರಜಾಪ್ರಭುತ್ವದ ವ್ಯವಸ್ಥೆ ಭದ್ರಪಡಿಸಲು ಮತ ಚಲಾಯಿಸಿ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನಿಂಗಪ್ಪ ಎಸ್.ಮಸಳಿ ಅವರು ಹೇಳಿದರು.
ಅವರು, ಪಟ್ಟಣದ ಮಾರುತಿ ವೃತ್ತದಲ್ಲಿ ಶುಕ್ರವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಜಿಲ್ಲಾ ಹಾಗೂ ತಾಲೂಕು ಸ್ವಿಪ್ ಸಮಿತಿ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಮತದಾನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು. ಮತದಾನ ಮಾಡುವದರಿಂದ ಪ್ರಜಾಪ್ರಭುತ್ವ ರಕ್ಷಿಸಲುಸಾಧ್ಯ, ಸ್ವಯಂ ಪ್ರೇರಿತರಾಗಿ ಮತ ಚಲಾಯಿಸಬೇಕು, ನಿಮ್ಮ ಮತ ನಿಮ್ಮ ಹಕ್ಕಾಗಿದೆ ಯಾವುದೇ ಆಸೆ ಆಮೀಷಗಳಿಗೆ ನಿಮ್ಮ ಹಕ್ಕನ್ನು ಮಾರಿಕೊಳ್ಳಬಾರದು ಎಂದು ಹೇಳಿದರು.
ಮಾರುತಿ ವೃತ್ತದಿಂದ ಆರಂಭಗೊಂಡ ಮತದಾನ ಜಾಗೃತಿ ಜಾಥಾ ಬಸವೇಶ್ವರ ವೃತ್ತದ ವರೆಗೆ ಸಾಗಿತು. ಜಾಥಾದಲ್ಲಿ ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ನಿಂಗನಗೌಡ ವಿ.ಹಿರೇಹಾಳ, ಸಂಗಮೇಶ ನಂದಾಪೂರು, ಎನ್.ಆರ್. ಎಲ್.ಎಂ. ತಾಲೂಕು ಸಂಯೋಜಕ ಮಾದೇಗೌಡ ಪೊಲೀಸ್ ಪಾಟೀಲ್, ತಾಲೂಕು ಪಂಚಾಯಿತಿ ಸಿಬ್ಬಂದಿ ವರ್ಗ ಸೇರಿದಂತೆ
ಎನ್.ಆರ್. ಎಲ್.ಎಂ. ಮಹಿಳಾ ಸಂಜೀವಿನಿ ಒಕ್ಕೂಟದ ನೂರಾರು ಮಹಿಳೆಯರು ಪಾಲ್ಗೊಂಡು ಮತದಾನ ಮಾಡಲು ನೀವು ಬನ್ನಿ, ನಿಮ್ಮ ಸ್ನೇಹಿತರನ್ನೂ ಕರೆತನ್ನಿ ಎಂಬ ನಾನಾ ಘೋಷ ವಾಕ್ಯಗಳ ಫಲಕ ಹಿಡಿದು ಜಾಗೃತಿ ಘೋಷಣೆಗಳನ್ನು ಕೂಗುತ್ತಾ ಸಾಗಿದರು.