ಸಂಭ್ರಮದ ಶ್ರೀ ಭೀಮಾಂಬಿಕಾ ದೇವಿ ಜಾತ್ರೆ : 9 ಜೋಡಿ ಸಾಮೂಹಿಕ ವಿವಾಹ

ಶರಣು ಲಿಂಗನಬಂಡಿ

ಕೃಷಿಪ್ರಿಯ ನ್ಯೂಸ್ |

ಕುಷ್ಟಗಿ : ಪಟ್ಟಣದ ಆರಾಧ್ಯ ದೇವತೆ ಶಿವಶರಣೆ ಇಟಗಿ ಭೀಮಾಂಬಿಕೆ ದೇವಿ ದೇವಸ್ಥಾನದ ಜಾತ್ರಾ ಮಹೋತ್ಸವ ಪ್ರಯುಕ್ತ ಶುಕ್ರವಾರ ಸಾಮೂಹಿಕ ವಿವಾಹ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಂಭ್ರಮದಿಂದ ಜರುಗಿದವು.

ಬೆಳಿಗ್ಗೆ ದೇವಸ್ಥಾನದಲ್ಲಿ ದೇವಿ ಮೂರ್ತಿಗೆ ಕುಂಕುಮಾರ್ಚನೆ, ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು.
ಪಟ್ಟಣದ ಮದ್ಧಾನಿ ಹಿರೇಮಠದ ಪೀಠಾಧಿಪತಿ ಕರಿಬಸವೇಶ್ವರ ಸ್ವಾಮೀಜಿ, ಕುಷ್ಟಗಿ, ನಿಡಶೇಸಿ ಗೆಜ್ಜೆಬಾವಿ ಪಶ್ಚಕಂತಿ ಹಿರೇಮಠದ ಅಭಿನವ ಕರಿಬಸವೇಶ್ವರ ಸ್ವಾಮೀಜಿ, ಹಾಲುಮತ ಸಮಾಜದ ಗುರುಗಳಾದ ಕೊರಡಕೇರಾದ ಶಿವಾನಂದಯ್ಯ ಗುರುವಿನ, ಶರಣಯ್ಯ ಗುರುವಿನ ಇವರುಗಳ ಸಾನ್ನಿಧ್ಯದಲ್ಲಿ ದೇವಸ್ಥಾನ ಸೇವಾ ಸಮಿತಿಯವರು ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಿದ್ದರು. ಈ ವೊಂದು ಶುಭ ವಿವಾಹ ಕಾರ್ಯಕ್ರಮದಲ್ಲಿ ಒಂಬತ್ತು ಜೋಡಿ ವಧುವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿ ಶ್ರೀಗಳಿಂದ ಆಶೀರ್ವಾದ ಪಡೆದರು.
ಈ ವೇಳೆ ವಿಧಾನಸಭಾ ವಿರೋಧ ಪಕ್ಷದ ಮುಖ್ಯ ಸಚೇತಕ ಹಾಗೂ ಶಾಸಕ ದೊಡ್ಡನಗೌಡ ಎಚ್. ಪಾಟೀಲ್ ಹಾಗೂ ಹಾಲುಮತ ಸಮುದಾಯ ಸೇರಿದಂತೆ ವಿವಿಧ ಸಮುದಾಯಗಳ ಮುಖಂಡರು ಹಾಜರಿದ್ದರು.

ಇದಕ್ಕೂ ಮುನ್ನ ದೇವಸ್ಥಾನದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಇಟಗಿ ಭೀಮಾಂಬಿಕೆ ದೇವಿ ಭಾವಚಿತ್ರದ ಮೆರವಣಿಗೆ ನಡೆಯಿತು. ಕುಂಭ ಕಳಸ ಹೊತ್ತ ನೂರಾರು ಮಹಿಳೆಯರು, ಮಕ್ಕಳು, ವಿವಿಧ ಸಮುದಾಯಗಳ ಪ್ರಮುಖರು, ಕಲಾಮೇಳದವರು ಮೆರವಣಿಗೆ ಕಳೆ ತಂದರು.