ಮಹಾಂತೇಶ ಚಕ್ರಸಾಲಿ
ಕೃಷಿಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಜಹಗೀರಗುಡದೂರು ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವ ಪ್ರಯುಕ್ತ ನಿರ್ಮಿಸಲಾದ ನೂತನ ರಥೋತ್ಸವ ಸೋಮವಾರ ಸಂಜೆ 6.30ರ ಸುಮಾರಿಗೆ ಸಾವಿರಾರು ಭಕ್ತರ ಜಯಘೋಷಗಳೊಂದಿಗೆ ಭಕ್ತಿ ಸಂಭ್ರಮದಿಂದ ನಡೆಯಿತು.
ಬೆಳಿಗ್ಗೆ ದೇವಸ್ಥಾನದಲ್ಲಿ ಶ್ರೀ ಶರಣಬಸವೇಶ್ವರ ಮೂರ್ತಿಗೆ ಮಹಾಭಿಷೇಕ, ಬಿಲ್ವ, ಪುಷ್ಪಾರ್ಚನೆ, ಭಜನೆ, ವಿಶೇಷ ಧಾರ್ಮಿಕ ಪೂಜಾ ಕೈಂಕರ್ಯಗಳು ಜರುಗಿದವು. ಗ್ರಾಮದ ಗುರುಹಿರಿಯರು, ಸರ್ಕಾರಿ ನೌಕರರು, ಮುಖಂಡರು, ಜನಪ್ರತಿನಿಧಿಗಳ ಸಹಕಾರದಲ್ಲಿ ಸುಮಾರು 20 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ತೇರು ಶ್ರೀ ಶರಣಬಸವೇಶ್ವರ ಜಾತ್ರೆಗೆ ಮೆರಗು ತಂದಿದ್ದು, ವಿಶೇಷ. ಜಾತ್ರಾ ಮಹೋತ್ಸವ ನಿಮಿತ್ತ ಆಗಮಿಸಿದ್ದ ಕೊಪ್ಪಳ ಗವಿಮಠದ ಅಭಿನವ ಶ್ರೀಗವಿಸಿದ್ದೇಶ್ವರ ಮಹಾಸ್ವಾಮಿಜಿ ಗೋಧೂಳಿ ಸಮಯಕ್ಕೆ ನೂತನ ಮಹಾ ರಥೋತ್ಸವಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಜಹಗೀರಗುಡದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ, ಸರ್ವ ಸದಸ್ಯರು, ಸರ್ಕಾರಿ ನೌಕರರು, ಮುಖಂಡರು, ಗುರುಹಿರಿಯರು ಉಪಸ್ಥಿತರಿದ್ದರು.
ಸಕಲ ವಾದ್ಯ ವಾದನ ಜಯಘೋಷಗಳೊಂದಿಗೆ ರಥ ಬೀದಿಗೆ ಸಾಗಿದ ನೂತನ ತೇರಿಗೆ ಜಹಗೀರಗುಡದೂರು ಸುತ್ತಮುತ್ತಲಿನ ಪಟ್ಟಲಚಿಂತಿ, ಹನುಮನಾಳ, ಮಲಕಾಪೂರು, ವೆಂಕಟಾಪೂರು, ಹನುಮಸಾಗರ ಸೇರಿದಂತೆ ಅನೇಕ ಹಳ್ಳಿಗಳಿಂದ ಆಗಮಿಸಿದ್ದ ಭಕ್ತಾದಿಗಳು, ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದ್ದ ನವಜೋಡಿಗಳು ಭಕ್ತಿ ಭಾವದಿಂದ ಉತ್ತತ್ತಿ ಬಾಳೆಹಣ್ಣು ಸಮರ್ಪಿಸಿ ನೂತನ ಮಹಾ ರಥೋತ್ಸವ ಸಂಭ್ರಮಕ್ಕೆ ಸಾಕ್ಷಿಯಾದರು.
ಜಾತ್ರಾ ಮಹೋತ್ಸವ ಪ್ರಯುಕ್ತ ಪೊಲೀಸ್ ಇಲಾಖೆ ಹನುಮಸಾಗರ ಠಾಣೆ ಪಿಎಸ್’ಐ ವಿರುಪಾಕ್ಷಪ್ಪ ಅವರು ಪೊಲೀಸ್ ಸಿಬ್ಬಂದಿ ನಿಯೋಜಿಸಿ ಭದ್ರತೆ ಒದಗಿಸಿ ಸಂಚಾರ ಸುವ್ಯವಸ್ಥೆ ಕಾಪಾಡಿದರು.