ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಕೊರಡಕೇರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಖಾಪೂರು ಗ್ರಾಮ ಚರಂಡಿ ಕೊಳಚೆಮಯವಾಗಿದ್ದು, ಸಾಂಕ್ರಾಮಿಕ ಕಾಯಿಲೆಗಳ ಭೀತಿಯಲ್ಲಿ ಗ್ರಾಮಸ್ಥರು ಕಾಲ ಕಳೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.!
ಅನೈರ್ಮಲ್ಯತೆಯಿಂದಾಗಿ ರೋಸಿ ಹೋಗಿರುವ ಗ್ರಾಮಸ್ಥರು ಇಂದು ಮಂಗಳವಾರ ಸಂಜೆ 7.30ರ ಸುಮಾರಿಗೆ ಮಾಧ್ಯಮ ಮುಂದೆ ಸೊಳ್ಳೆಗಳ ಕಡಿತದಿಂದ ಟೈಪಾಯಿಡ್, ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ಕಾಯಿಲೆಗಳಿಂದ ಬಳಲುತಿದ್ದು, ಚಿಕಿತ್ಸೆ ಪಡೆದ ಕುರಿತು ರಕ್ತ ಪರೀಕ್ಷೆ ಮಾಡಿಸಿಕೊಂಡಿರುವ ಕುರಿತು ಆಸ್ಪತ್ರೆಯ ರಿಪೋರ್ಟ್ ಚೀಟಿಗಳನ್ನು ಪ್ರದರ್ಶಿಸಿ ಅಳಲು ತೋಡಿಕೊಂಡರು.
ಸುಮಾರು 1300 ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ ನಾಲ್ವರು ಗ್ರಾಮ ಪಂಚಾಯಿತಿ ಸದಸ್ಯರಿದ್ದಾರೆ. ಆದರೆ, ಸ್ವಚ್ಛತೆ ಮಾತ್ರ ಮರೀಚಿಕೆಯಾಗಿದೆ. ಗ್ರಾಮದ ಎಲ್ಲಾ ಕಾಲುವೆಗಳು ಹೂಳುತುಂಬಿಕೊಂಡು ದುರ್ನಾತ ಹರಡಿದೆ. ಪಾಂಡುರಂಗ ದೇವಸ್ಥಾನ ಏರಿಯಾ ಸೇರಿದಂತೆ ಅರ್ಧ ಗ್ರಾಮದ ಕೊಳಚೆ ನೀರು ಹರಿದು ಮುಂದೆ ಸಾಗದೆ ರಸ್ತೆಯಲ್ಲಿ ಸಂಗ್ರಹಗೊಂಡು ಗುಂಡಿಗಳು ಬಾಯ್ತೆರೆದಿವೆ. ಅಂಗನವಾಡಿ, ಶಾಲೆಗಳಿಗೆ ತೆರಳುವ ಮಕ್ಕಳು, ವೃದ್ದರು, ಮಹಿಳೆಯರು, ವಾಹನಗಳು ಕೊಳಚೆನೀರು ತುಂಬಿರುವ ಗಲೀಜು ಗುಂಡಿಗಳಲ್ಲಿ ಇಳಿದೇ ಸಾಗಬೇಕು. ಸೊಳ್ಳೆಗಳ ಉತ್ಪತ್ತಿ ತಾಣವಾಗಿರುವ ಈ ಪ್ರದೇಶದಲ್ಲಿ ಸಾರ್ವಜನಿಕರು, ನಿವಾಸಿಗಳು ನರಕಯಾತನೆ ಅನುಭವಿಸುತ್ತಿದ್ದಾರೆ.
ಗ್ರಾಮ ಪಂಚಾಯಿತಿ ಅಧಿಕಾರಿಗಳು ಕನಿಷ್ಟ ಸೊಳ್ಳೆಗಳ ನಿಯಂತ್ರಣಕ್ಕೆ ಬ್ಲಿಚಿಂಗ್ ಪೌಡರ್ ಅಥವಾ ಫಾಗಿಂಗ್ ಸಹ ಮಾಡುತ್ತಿಲ್ಲ. ಮನೆಗಳಿಗೆ ತೆರಳಲು ರಸ್ತೆಯಿಲ್ಲದೇ ಕೊಳಚೆ, ತಿಪ್ಪೆಗುಂಡಿಗಳನ್ನು ದಾಟಿ ಸಂಚರಿಸುತ್ತಿದ್ದೇವೆ. ಈ ಕುರಿತು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಜನಪ್ರತಿನಿಧಿಗಳ ಗಮನಕ್ಕೆ ತಂದಾಗ ಫೋಟೋ ತೆಗೆದು ಹೋಗುತ್ತಾರೆಯೇ ವಿನಃ ಪರಿಹಾರ ಕಂಡುಕೊಳ್ಳುತ್ತಿಲ್ಲ. ಊರಿಗೆ ಊರೇ ಸಾಂಕ್ರಾಮಿಕ ಕಾಯಿಲೆಗೆ ತುತ್ತಾಗುವ ಮುನ್ನ ಸಂಬಂಧಿಸಿದ ಮೇಲಧಿಕಾರಿಗಳು ಎಲ್ಲಾ ಕಾಲುವೆಗಳ ಹೂಳು ತೆಗೆಸಬೇಕು. ರಸ್ತೆ ಮೇಲೆ ನಿಲ್ಲುವ ಕೊಳಚೆ ನೀರು ಊರಾಚೆ ಸಾಗಲು ಸಿಡಿ ನಿರ್ಮಾಣ ಮಾಡಿ ಶಾಶ್ವತ ಪರಿಹಾರ ಕಲ್ಪಿಸಲು ಕ್ರಮಕೈಗೊಳ್ಳಬೇಕು. ಆರೋಗ್ಯ ಪೂರ್ಣ ಪರಿಸರ ಕಲ್ಪಿಸಬೇಕು ಎಂದು ಒತ್ತಾಯಿಸಿದರು.