ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಕೊರಡಕೇರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಖಾಪೂರು ಗ್ರಾಮದಲ್ಲಿನ ಹೂಳು ತುಂಬಿದ ಚರಂಡಿ ಸ್ವಚ್ಛತೆಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಕ್ರಮ ಕೈಗೊಂಡಿರುವುದು ಬುಧವಾರ ಬೆಳಿಗ್ಗೆ 11.30ರ ಸುಮಾರಿಗೆ ಕಂಡುಬಂತು.
ಗ್ರಾಮದ ಶ್ರೀ ಪಾಂಡುರಂಗ ದೇವಸ್ಥಾನ ಪ್ರದೇಶ ಸೇರಿದಂತೆ ಬಹುತೇಕ ಅರ್ಧ ಗ್ರಾಮದ ಕಾಲುವೆ ಕೊಳಚೆ ನೀರು ಊರಾಚೆ ಹರಿದು ಹೋಗದೆ ಹೂಳುತುಂಬಿಕೊಂಡು ರಸ್ತೆಯಲ್ಲಿ ಬಾಯ್ತೆರೆದ ಗುಂಡಿಗಳಲ್ಲಿ ಸಂಗ್ರಹಗೊಂಡು ಮಡುಗಟ್ಟಿತ್ತು. ಇದರಿಂದ ದುರ್ನಾತ ಹರಡಿ ಸೊಳ್ಳೆಗಳ ಹೆಚ್ಚಾಗಿ ಸಾಂಕ್ರಾಮಿಕ ಕಾಯಿಲೆಗಳ ಭೀತಿಯಲ್ಲಿ ಗ್ರಾಮಸ್ಥರು ಕಾಲಕಳೆಯುವಂತಾಗಿತ್ತು. ಇದರಿಂದ ಗ್ರಾಮಸ್ಥರು ಮಲೇರಿಯಾ, ಟೈಪಾಯಿಡ್ ಜ್ವರ ಹಿನ್ನೆಲೆ ಆಸ್ಪತ್ರೆಗೆ ಚಿಕಿತ್ಸೆಗೆ ಅಲೆದಾಡುವಂತಾಗಿತ್ತು. ಈ ಕುರಿತು ನಿನ್ನೆ ಮಂಗಳವಾರ ಸಂಜೆ 6.30ರ ಸುಮಾರಿಗೆ ಮಾಧ್ಯಮಕ್ಕೆ ದೂರು ನೀಡಿದ್ದರು.
ಈ ಕುರಿತು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನಿಂಗಪ್ಪ ಎಸ್. ಮಸಳಿ ಅವರ ಗಮನಕ್ಕೆ ತಂದು “ಕೃಷಿಪ್ರಿಯ” ವೆಬ್ ಪೋರ್ಟಲ್ ಅಲ್ಲಿ “ಚರಂಡಿ ಕೊಳಚೆಯಲ್ಲಿ ಶಾಖಾಪೂರು ಗ್ರಾಮ” ಎಂಬ ಶಿರ್ಷಿಕೆಯಡಿ ಸಚಿತ್ರ ವರದಿ ಪ್ರಕಟಿಸಲಾಗಿತ್ತು. ವರದಿಗೆ ಎಚ್ಚೆತ್ತ ಕೊರಡಕೇರಾ ಗ್ರಾಮ ಪಂಚಾಯಿತಿ ಅಧಿಕಾರಿಗಳು ತಾಲೂಕು ಪಂಚಾಯಿತಿ ಇಒ ಸೂಚನೆ ಮೇರೆಗೆ ರಸ್ತೆಯಲ್ಲಿ ಮಡುಗಟ್ಟಿ ನಿಂತಿದ್ದ ಕೊಳಚೆ ನೀರನ್ನು ಜೆಸಿಬಿ ಯಂತ್ರದ ಮೂಲಕ ತೆರವುಗೊಳಿಸಿ ಹೂಳು ತುಂಬಿದ ಕಾಲುವೆ ಸ್ವಚ್ಛತೆ ಗೊಳಿಸುತ್ತಿದ್ದಾರೆ. ಒಟ್ಟಾರೆ ಗ್ರಾಮದ ನೈರ್ಮಲ್ಯ ಕಾಪಾಡಲು ಕ್ರಮ ಕೈಗೊಂಡಿರುವುದಕ್ಕೆ ಗ್ರಾಮಸ್ಥರ ನಿಟ್ಟುಸಿರು ಬಿಡುವಂತಾಗಿದೆ.