ಕೊಪ್ಪಳ ಲೋಕ ಸಮರಕ್ಕೆ ಸಂಸದ ಸಂಗಣ್ಣ ಬದಲು ಡಾ.ಕೆ.ಬಸವರಾಜಗೆ “ಬಿಜೆಪಿ” ಮಣೆ!

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ: ಬರುವ ಲೋಕಸಭೆ ಚುನಾವಣೆಗೆ ಭಾರತೀಯ ಜನತಾ ಪಕ್ಷ 2ನೇ ಪಟ್ಟಿ ಬಿಡುಗಡೆಯಾಗಿದ್ದು, ರಾಜ್ಯದ 20 ಕ್ಷೇತ್ರಗಳಲ್ಲಿ ಕೊಪ್ಪಳ ಲೋಕಸಭಾ ಹಾಲಿ ಸಂಸದ ಸಂಗಣ್ಣ ಕರಡಿ ಅವರಿಗೆ ಟಿಕೆಟ್ ತಪ್ಪಿದೆ. ಮೂಲತಃ ಕುಷ್ಟಗಿಯವರಾದ ಕೊಪ್ಪಳದ ಕೆ.ಎಸ್. ಮಲ್ಟಿಸ್ಪೇಷಲ್ ಆಸ್ಪತ್ರೆಯ ಖ್ಯಾತ ತಜ್ಞವೈದ್ಯ ಡಾ.ಬಸವರಾಜ ಕ್ಯಾವಟರ್ ಅವರಿಗೆ ಬಿಜೆಪಿ ಹೈಕಮಾಂಡ್ ಮಣೆ ಹಾಕಿದೆ.!!

ಕುಷ್ಟಗಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕೆ.ಶರಣಪ್ಪ ವಕೀಲರ ಕಿರಿಯ ಪುತ್ರ ಡಾ.ಬಸವರಾಜ ಕ್ಯಾವಟರ್ ಇವರಾಗಿದ್ದು, ಎಲುಬು ಕೀಲು ತಜ್ಞವೈದ್ಯರಾಗಿ ದೇಶದಲ್ಲಿ ಹೆಸರುವಾಸಿಯಾಗಿದ್ದಾರೆ. ಸದ್ಯ ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಸ್ವಂತ ಆಸ್ಪತ್ರೆ ತೆರೆದು ಸೇವೆಗೆ ಮುಂದಾಗಿದ್ದಾರೆ.

ಬೆಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಅಸಂಖ್ಯಾತ ದೇಶ- ವಿದೇಶಗಳ ರೋಗಿಗಳಿಗೆ ಚಿಕಿತ್ಸೆ ನೀಡಿ ಹೆಸರುವಾಸಿಯಾಗಿದ್ದಾರೆ. ಅಲ್ಲದೆ ಸಾಕಷ್ಟು ಬಡ ಕುಟುಂಬಗಳ ರೋಗಿಗಳಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ನೀಡಿ ಜನಾನುರಾಗಿಯಾಗಿದ್ದಾರೆ. ಈ ಹಿಂದೆ ಅವರ ತಂದೆ ಕೆ.ಶರಣಪ್ಪ ಅವರು ಶಾಸಕರಾಗಿ ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳು ಇಂದಿಗೂ ಜನ ಮರೆತಿಲ್ಲ. ಇನ್ನೊಬ್ಬ ಸಹೋದರ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ತಮ್ಮ ಸೇವಾ ಅವಧಿಯಲ್ಲಿ ಅಭಿವೃದ್ಧಿ ಕಾರ್ಯಗಳ ಮುಖಾಂತರ ತಂದೆಯವರಂತೆ ಜನಮನದಲ್ಲಿ ಉಳಿದಿದ್ದಾರೆ.

ಸದ್ಯ ಎರಡನೇ ಅವಧಿಗೆ ಭಾರತೀಯ ಜನತಾ ಪಕ್ಷದ ಜಿಲ್ಲಾ ಉಪಾಧ್ಯಕ್ಷರಾಗಿ ಮುಂದುವರಿದಿದ್ದಾರೆ. ತಂದೆ ಮತ್ತು ಅಣ್ಣನ ಬಲ ಹಾಗೂ ತಮ್ಮ ವೈದ್ಯ ಸೇವೆ ಜೊತೆಗೆ ಪಂಚಮಸಾಲಿ ಸಮುದಾಯ ಸೇರಿದಂತೆ ಲಿಂಗಾಯತ ಸಮುದಾಯಗಳ ಬಲವಿದೆ. ಕ್ಯಾವಟರ್ ಕುಟುಂಬದ ರಾಜಕೀಯ ಜೀವನ ಕಂಡಿರುವ ಇತರೆ ಹಿಂದುಳಿದ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರ ಸಮುದಾಯಗಳು ಡಾ.ಬಸವರಾಜ ಕ್ಯಾವಟರ್ ಅವರ ವೈದ್ಯಕೀಯ ವೃತ್ತಿ ಸೇವೆ ಜೊತೆಗೆ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಗೆಲ್ಲಿಸುತ್ತಾರೆ ಎಂಬ ಲೆಕ್ಕಾಚಾರ ಮೊದಲಿನಿಂದಲೂ ಕೇಳಿಬರುತಿತ್ತು.

ಬಿಜೆಪಿ ವರಿಷ್ಠರು ಬುಧವಾರ ಸಂಜೆ ಬಿಡುಗಡೆ ಮಾಡಿದ ಎರಡನೇ ಪಟ್ಟಿಯಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಡಾ.ಬಸವರಾಜ ಕ್ಯಾವಟರ್ ಅವರ ಹೆಸರು ಪ್ರಕಟವಾಗಿದೆ. ಡಾ. ಬಸವರಾಜ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪುತ್ರನ ಆತ್ಮೀಯ ಸ್ನೇಹಿತರಾಗಿದ್ದು, ಕಳೆದಬಾರಿಯ ಲೋಕಸಭೆ ಟಿಕೆಟ್ ಗಿಟ್ಟಿಸಿಕೊಳ್ಳಲು ಗೆಳೆಯನ ಮುಖಾಂತರ ಯತ್ನಿಸಿದ್ದರು ಎನ್ನಲಾಗಿತ್ತು, ಆಗ ಸಂಸದ ಸಂಗಣ್ಣ ಕರಡಿ ಅವರಿಗೆ ಟಿಕೆಟ್ ಕೈತಪ್ಪುತ್ತದೆ ಎಂದು ಭಾರಿ ಸದ್ದು ಸಹ ಕೇಳಿಬಂದಿತ್ತು. ಕೊನೆ ಗಳಿಗೆಯಲ್ಲಿ ಸಂಗಣ್ಣ ಕರಡಿ ಅವರು ಮತ್ತೊಮ್ಮೆ ಟಿಕೆಟ್ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದನ್ನು ಸ್ಮರಿಸಬಹುದು.

ಈ ಬಾರಿ ಲೋಕಸಭೆ ಚುನಾವಣೆಗೆ ಬಿಜೆಪಿಯ ಒಟ್ಟು 8 ಹಾಲಿ ಸದಸ್ಯರಾದ ಪ್ರತಾಪ್‌ ಸಿಂಹ, ಡಿವಿ ಸದಾನಂದ ಗೌಡ, ಕರಡಿ ಸಂಗಣ್ಣ, ಶಿವುಕುಮಾರ್‌ ಉದಾಸಿ, ಜಿ.ಎಸ್‌. ಬಸವರಾಜು ಅವರಿಗೆ ಟಿಕೆಟ್‌ ತಪ್ಪಿದೆ.