ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕೊಪ್ಪಳ : ಹಾಡಹಗಲೇ ಕಳ್ಳತನಕ್ಕೆ ಯತ್ನಿಸಿದ ಕಳ್ಳನೋರ್ವ ಸಾರ್ವಜನಿಕರ ಕೈಗೆ ಸಿಕ್ಕುಬಿದ್ದ ಘಟನೆ ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ಏ.5 ಶುಕ್ರವಾರ ಸಂಜೆ ನಡೆದಿದೆ.
ಪಟ್ಟಣದ ಗಜೇಂದ್ರಗಡ ರಸ್ತೆ ಸಾರ್ವಜನಿಕ ಆಸ್ಪತ್ರೆ ಮುಂಭಾಗದ ವಿದ್ಯಾನಗರದ ಪ್ರದೇಶದಲ್ಲಿರುವ ಮನೆಯೊಂದಕ್ಕೆ ನುಗ್ಗಿದ ಕಳ್ಳ ಮನೆಯವರು ಮಲಗಿರುವುದನ್ನು ಗಮನಿಸಿ ಶರ್ಟ್ ಮತ್ತು ಪ್ಯಾಂಟ್ ಅಲ್ಲಿನ ಹಣ ದೋಚಲು ಯತ್ನಿಸಿದ್ದಾನೆ. ಎಚ್ಚೆತ್ತ ಮನೆಯವರು ಆಜುಬಾಜು ನಿವಾಸಿಗಳನ್ನು ಜಮಾಯಿಸಿ ಕಳ್ಳನನ್ನು ಹಿಡಿದು ವಿಚಾರಣೆ ನಡೆಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡದ ನಿವಾಸಿಯಾಗಿದ್ದು, ತನ್ನ ಹೆಸರು ಸುನಿಲ್ ಎಂದು ಪರಿಚಯ ತಿಳಿಸಿದ್ದಾನೆ. ಘಟನೆ ವಿಷಯ ತಿಳಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ.
ಮನೆಗೆ ನುಗ್ಗುವ ಮುನ್ನ ಅದೇ ಪ್ರದೇಶದಲ್ಲಿರುವ ಬಸವೇಶ್ವರ ಹೆರಿಗೆ ಆಸ್ಪತ್ರೆ ಮೇಲಿರುವ ರೂಮೊಂದರ ಕೀಲಿಪತ್ತವನ್ನು ಕಬ್ಬಿಣದ ಸರಳಿನಿಂದ ಮೀಟಿ ಮುರಿದು ಕಳ್ಳತನಕ್ಕೆ ಯತ್ನಿಸಿದ್ದಾನೆ ಎನ್ನಲಾಗಿದೆ. ಈ ಘಟನೆಯಿಂದ ಬೆಚ್ಚಿ ಬಿದ್ದಿರುವ ನಗರದ ನಿವಾಸಿಗಳಲ್ಲಿ ಆತಂಕ ಮನೆಮಾಡಿದೆ.