– ಹನುಮನಾಳ (ನಿಲೋಗಲ್) ಜಿಪಂ ಕ್ಷೇತ್ರ ವಿಶಿಷ್ಟ.. ವಿಭಿನ್ನ… ಇಲ್ಲಿ ಎಲ್ಲವೂ ಸಾಧ್ಯ..!?

– ಶರಣಪ್ಪ ಕುಂಬಾರ.

ಕೊಪ್ಪಳ : ಕೊಪ್ಪಳ ಜಿಲ್ಲಾ ಪಂಚಾಯಿತಿಯಲ್ಲಿಯೇ ಹನುಮನಾಳ ( ನಿಲೋಗಲ್ ) ಜಿಪಂ ಕ್ಷೇತ್ರ ಅಭ್ಯರ್ಥಿಗಳ ಆಯ್ಕೆಯಿಂದ ಹಿಡಿದು, ಇದು ವಿಶಿಷ್ಟ ಹಾಗೂ ವಿಭಿನ್ನ ಕ್ಷೇತ್ರ. ಇಲ್ಲಿ ಎಲ್ಲವೂ ಸಾಧ್ಯ ಎಂದರೆ ತಪ್ಪಾಗಲಾರದು..!?
    ಜಿಲ್ಲಾ ಪರಿಷತ್ತು ರಾಯಚೂರು ಇದ್ದಾಗಿಂದಲೂ ಹನುಮನಾಳ ಹೆಸರಿನ ಜಿಲ್ಲಾ ಪಂಚಾಯಿತಿ ಕ್ಷೇತ್ರ ಜಾರಿಯಲ್ಲಿತ್ತು. ಅಲ್ಲದೆ, ಕೊಪ್ಪಳ ಜಿಲ್ಲಾ ಕೇಂದ್ರ ಉದಯವಾದ ಮೇಲು ಜಾರಿಯಲ್ಲಿದ್ದ ಹನುಮನಾಳ ಕ್ಷೇತ್ರ ಚುನಾವಣಾ ಆಯೋಗದ ನಿಯಮದಂತೆ ಕ್ಷೇತ್ರದ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ನಿಲೋಗಲ್ ಗ್ರಾಮವಾಗಿದ್ದರಿಂದ ಕ್ಷೇತ್ರವು ಅನಿವಾರ್ಯವಾಗಿ ‘ನಿಲೋಗಲ್’ ಜಿಪಂ ಕ್ಷೇತ್ರ ಎಂದು ಮರುನಾಮಕರಣಗೊಂಡಿತು. ಹೀಗೆಂದು ಮಾತ್ರಕ್ಕೆ ನಾಮಕರಣ ಬದಲಾದ ಬಗ್ಗೆ ಇಲ್ಲಿನ ಯಾರೊಬ್ಬರಿಂದಲೂ ವಿರೋಧ ವ್ಯಕ್ತವಾಗಿದ್ದು ಮಾತ್ರ ಸುತಾರಾಮ ಇಲ್ಲವೇ ಇಲ್ಲ. ಅದಕ್ಕೆ ವಿಶೇಷ ಈ ಕ್ಷೇತ್ರ ಅನ್ನೊದು. ಇಲ್ಲಿ ಯಾವೊಬ್ಬ ವಕ್ತಿಯ ಹಾಗೂ ಯಾವುದಾದರು ವಿಷಯದ ಪರ ಪ್ರತಿಭಟನೆಯಾಗಲಿ.. ವಿರೋಧದ ಪ್ರತಿಭಟನೆಗಳು ಜರುಗಿರುವುದು ಸಾಕಷ್ಟು ವಿರಳ…! ಇಲ್ಲಿ ಎಲ್ಲವೂ ಅನುಕೂಲಕರ ಸಿಂಧು ರಾಜಕಾರಣ ಅಂದರೆ, ತಪ್ಪಾಗಲಾರದು. ಈ ಜಿಪಂ ಕ್ಷೇತ್ರದಿಂದ ಜಯಶಾಲಿಯಾದ ಬಹುತೇಕ ಸದಸ್ಯರು ಹೊರಗಿನವರು. ಕ್ಷೇತ್ರದಿಂದ ಜಯಶಾಲಿಯಾದ ಮೇಲೆ ಸದಸ್ಯ ಮಹಾಶಯರು ಹಬ್ಬ-ಹರಿದಿನಗಳಿಗೊಮ್ಮೆ ಭೇಟಿ ನೀಡಿ, ತಮಗೆ ಬೇಕಾದ ಮೂರನಾಲ್ಕು ಜನರ ಜೊತೆಗೆ ವ್ಯವಹಾರಿಕ ಮಾತುಗಳನ್ನಾಡಿ ಐಷಾರಾಮಿ ಕಾರು ಏರಿದವರು ಮತ್ತೇ ಭೇಟಿ ನೀಡುವುದು ಅದೇ ಸಮಯಕ್ಕೆ. ಇಲ್ಲಿಯವರೆಗೂ ಕ್ಷೇತ್ರದಲ್ಲಿ ನಡೆದು ಬಂದಿರುವ ರಾಜಕೀಯ ಸ್ಥೂಲ ಪರಿಚಯವಿದು.
    ಭೌಗೋಳಿಕವಾಗಿ ಬಾಗಲಕೋಟೆ ಹಾಗೂ ಗದಗ ಜಿಲ್ಲೆಗಳ ಮಧ್ಯದಲ್ಲಿ ಸಿಲುಕಿಕೊಂಡಿರುವ (ದ್ವೀಪದಂತಿರುವ) ಹನುಮನಾಳ ಜಿಪಂ ಕ್ಷೇತ್ರ ಅಭಿವೃದ್ಧಿಯಲ್ಲಿ ಮಾತ್ರ ಶೂನ್ಯ ಸಾಧನೆ. ಕುಷ್ಟಗಿ ತಾಲೂಕಾ ಕೇಂದ್ರದಿಂದ 40 ದಿಂದ 50 ಕಿ.ಮೀ ಹಾಗೂ ಜಿಲ್ಲಾ ಕೇಂದ್ರದಿಂದ 100 ದಿಂದ 110 ಕಿ.ಮೀ ದೂರದಲ್ಲಿರುವ ಕ್ಷೇತ್ರದ ಗ್ರಾಮಗಳಿಗೆ ತಾಲೂಕಾ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಭೇಟಿ ಕನಸಿನ ಮಾತು. ಹೈದರಾಬಾದ್ ಕರ್ನಾಟಕದ ಗಡಿ ಹೋಬಳಿ ಕೇಂದ್ರವಾಗಿರುವ ಈ ಕ್ಷೇತ್ರ ಶೈಕ್ಷಣಿಕವಾಗಿ ಸಾಕಷ್ಟು ಹಿಂದುಳಿದಿದೆ. ಕ್ಷೇತ್ರದಲ್ಲಿ ಒಂದು ಡಿಗ್ರಿ ಕಾಲೇಜ್ ಇಲ್ಲ. ಇಲ್ಲಿನ ಮಕ್ಕಳು ಪಿಯುಸಿ, ಪದವಿ ಹಾಗೂ ತಾಂತ್ರಿಕ ಶಿಕ್ಷಣ ಪಡೆಯಲು ಮುಂಬೈ ಕರ್ನಾಟಕದ ಬಾದಾಮಿ, ಹುನಗುಂದ, ಗಜೇಂದ್ರಗಡ, ರೋಣ, ಗದಗ, ಇಲಕಲ್ಲ ಹಾಗೂ ಬಾಗಲಕೋಟೆ ನಗರಗಳೇ ಇವರಿಗೆ ಗತಿ.

   ಜಿಪಂ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳು :

ಮೊನ್ನೆಯವರೆಗೂ ಜಾರಿಯಲ್ಲಿದ್ದ ತುಗ್ಗಲಡೋಣಿ ತಾಪಂ ಇತ್ತೀಚಿನ ತಾಪಂ ಕ್ಷೇತ್ರಗಳ ಮರು ವಿಂಗಡಿಕರಣದಲ್ಲಿ ಹನುಮನಾಳ ತಾಪಂ ಕ್ಷೇತ್ರದೊಳಗೆ ವಿಲಿನಗೊಳಿಸಲಾಗಿತು. ಹನುಮನಾಳ, ನಿಲೋಗಲ್, ವಕ್ಕನದುರ್ಗಾ, ಎನ್. ರಾಂಪೂರು, ಬೊಮ್ಮನಾಳ, ಬಸಾಪೂರು, ಕೊಡತಗೇರಿ, ರಂಗಾಪೂರು, ಬಿಳೇಕಲ್, ಎಂ.ಕುರುಮನಾಳ, ಶಾಡಲಗೇರಿ, ಮಿಟ್ಟಲಕೋಡ, ತುಗ್ಗಲಡೋಣಿ, ನೀರಲಕೊಪ್ಪ , ಕಡಿವಾಲ, ಪಟ್ಟಲಚಿಂತಿ, ಮಾಲಗಿತ್ತಿ , ಜಾಗೀರ ಗುಡದೂರು, ಗುಡ್ಡದ ದೇವಲಾಪೂರು, ಕೊನಾಪೂರು ಹಾಗೂ ಪರಮನಟ್ಟಿ ಗ್ರಾಮ.

ಜಿಪಂ ಕ್ಷೇತ್ರದಲ್ಲಿನ ತಾಲೂಕಾ ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ :

1) ಹನುಮನಾಳ ತಾಪಂ ಕ್ಷೇತ್ರ ಹಿಂದುಳಿದ ವರ್ಗ ‘ಬ’
2) ನಿಲೋಗಲ್ ತಾಪಂ ಕ್ಷೇತ್ರ ‘ಸಾಮಾನ್ಯ ಮಹಿಳೆ’
3) ಮಾಲಗಿತ್ತಿ ತಾಪಂ ಕ್ಷೇತ್ರ ‘ಸಾಮಾನ್ಯ ಮಹಿಳೆ’

# ಜಿಪಂ ಕ್ಷೇತ್ರದಲ್ಲಿನ ಒಟ್ಟು 28809 ಮತದಾರರ ಪೈಕಿ 14707 ಪುರುಷ ಮತದಾರರು, 14101 ಮಹಿಳಾ ಮತದಾರರು ಸೇರಿದಂತೆ ಒಬ್ಬ ಮತದಾರ ಇತರೆ ಪಟ್ಟಿಯಲ್ಲಿದ್ದಾರೆ..!

# ಅನುಸೂಚಿತ ಜಾತಿ (ಎಸ್.ಸಿ) ಮತ್ತು ಹಿಂದುಳಿದ ವರ್ಗ ‘ಬ’ ಈ ಎರಡು ಜಾತಿ ಮೀಸಲಾತಿಗಳು ಕ್ಷೇತ್ರದಲ್ಲಿ ಇಲ್ಲಿಯವರೆಗೂ ಜಾರಿಗೆ ಬಂದಿಲ್ಲ..!?

# ಜಿಪಂ ಸದಸ್ಯ ನೇಮಣ್ಣ ಮೇಲಸಕ್ರಿ ಆಯ್ಕೆ ಚುನಾವಣೆಯ ಸಂದರ್ಭದಲ್ಲಿ ‘ಸಾಮಾನ್ಯ ಮಹಿಳೆ’ ಎಂಬ ಮೀಸಲಾತಿ ಪ್ರಕಟಿಸಿದ್ದ ಚುನಾವಣಾ ಆಯೋಗವನ್ನು ಸ್ಥಳೀಯ ಮುಖಂಡ ಶರಣಪ್ಪ ಕುಂಬಾರ (ನಿಡಶೇಸಿ) ಸೇರಿದಂತೆ ಇನ್ನಿತರರು ಪ್ರಶ್ನಿಸಿದ ಹಿನ್ನೆಲೆಯಲ್ಲಿ ‘ಸಾಮಾನ್ಯ’ ಮೀಸಲಾತಿಯನ್ನಾಗಿ ಆಯೋಗ ಮರು ಪ್ರಕಟಿಸಿದ್ದನ್ನು (ಘೋಷಣೆಯನ್ನು) ಇಲ್ಲಿ ಸ್ಮರಿಸಬಹುದು..!!

# ಉಪ್ಪಾರ ಸಮುದಾಯಕ್ಕೆ ಸೇರಿದ ಸದಸ್ಯರು 20 ವರ್ಷಗಳ ಕಾಲ ಈ ಜಿಪಂ ಕ್ಷೇತ್ರವನ್ನು ಪ್ರತಿನಿಧಿಸಿದ್ದರು ಎಂಬುದೇ ವಿಶೇಷ..! (ಉಮಾದೇವಿ ಮಂತ್ರಿ 5 ವರ್ಷ, ಸೋಮಣ್ಣ ಇಂಗಳದಾಳ 10 ವರ್ಷ ಹಾಗೂ ನೇಮಣ್ಣ ಮೇಲಸಕ್ರಿ 5 ವರ್ಷ)

# ಕೇತ್ರದಲ್ಲಿನ ಪ್ರಮುಖ ಸಮುದಾಯಗಳು : 
ಉಪ್ಪಾರ, ಲಿಂಗಾಯತ, ಹಾಲುಮತ, (ಕುರುಬರು) ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ ಸೇರಿದಂತೆ ಇನ್ನಿತರರು.

# ಇಲ್ಲಿಯವರೆಗೂ ಜಿಪಂ ಕ್ಷೇತ್ರದಲ್ಲಿ ಜಾರಿಗೆ ಬಂದಿದ್ದ ಮೀಸಲಾತಿ ಹಾಗೂ ಜಯಶಾಲಿಯಾದ ಸದಸ್ಯರು :

1) ಸಾಮಾನ್ಯ ಮಹಿಳೆ (ದಿವಂಗತ ಉಮಾದೇವಿ ಮಂತ್ರಿ)
(ರಾಯಚೂರು ಜಿಲ್ಲಾ ಪರಿಷತ್ತು ಸದಸ್ಯರು)
2) ಹಿಂದುಳಿದ ವರ್ಗ ‘ಅ’
(ಸೋಮಣ್ಣ ಇಂಗಳದಾಳ) ಉಪಾಧ್ಯಕ್ಷರಾಗಿ ಆಡಳಿತ.
3) ಸಾಮಾನ್ಯ
(ಸೋಮಣ್ಣ ಇಂಗಳದಾಳ)
4) ಅನುಸೂಚಿತ ಪಂಗಡ (ಎಸ್.ಟಿ)
(ಮಾಲತಿ ನಾಯಕ) ಅಧ್ಯಕ್ಷರಾಗಿ ಆಡಳಿತ
5) ಸಾಮಾನ್ಯ ಮಹಿಳೆ
(ವಿದ್ಯಾಶ್ರೀ ಗಜೇಂದ್ರಗಡ)
6) ಸಾಮಾನ್ಯ (ನೇಮಣ್ಣ ಮೇಲಸಕ್ರಿ) ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆ
7) ಸಾಮಾನ್ಯ ಮಹಿಳೆ
(ಈ ಸದ್ಯ ಪ್ರಕಟವಾಗಿರುವ ಮೀಸಲಾತಿ)

               ದಿವಂಗತರಾದ ಉಮಾದೇವಿ ಮಂತ್ರಿ

                  ಸೋಮಣ್ಣ ಬಸಪ್ಪ ಇಂಗಳದಾಳ

                            ಮಾಲತಿ ನಾಯಕ

                       ವಿದ್ಯಾಶ್ರೀ ಗಜೇಂದ್ರಗಡ

                          ನೇಮಣ್ಣ ಮೇಲಸಕ್ರಿ